

ಬೆಂಗಳೂರು: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ನೀಡಿರುವುದು ದಿನೇ ದಿನೆ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದೆ.
ಬಿಜೆಪಿ ಸರ್ಕಾರದ ಅವಧಿಯ ಹಗರಣಗಳಲ್ಲಿ ಭಾಗಿಯಾದವರ ವಿರುದ್ಧ ಪ್ರಾಸಿಕ್ಯೂಷನ್ ನೀಡಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿ ರಾಜಭವನ ಚಲೋ ನಡೆಸಿದೆ.
ಈ ನಡುವೆ ತಮ್ಮ ಮುಂದಿದ್ದ ಕಡಗಳನ್ನು ಲೋಕಾಯುಕ್ತಕ್ಕೆ ವಾಪಸ್ ಕಳಿಸಿ ರಾಜ್ಯಪಾಲರು ಸ್ಪಷ್ಟನೆ ಕೋರಿದ್ದಾರೆ. ರಾಜಕೀಯ ಚದುರಂಗದಾಟದಲ್ಲಿ ಇದು ಮತ್ತೊಂದು ಮಜಲು ಪಡೆದುಕೊಂಡಿದೆ.
ರಾಜ್ಯಪಾಲರಿಂದ ಸ್ಪಷ್ಟನೆ ಕೋರಿ ಲೋಕಾಯುಕ್ತಕ್ಕೆ ಕಡತ ವಾಪಸ್ ಬಂದಿರುವ ಕುರಿತು ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ, ರಾಜ್ಯಪಾಲರು ದೂರುಗಳ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಸೂಚಿಸಿ ಲೋಕಾಯುಕ್ತಕ್ಕೆ ವಾಪಸ್ ಕಳುಹಿಸಿದ್ದು, ಲೋಕಾಯುಕ್ತದವರು ಸ್ಪಷ್ಟಿಕರಣ ನೀಡಲಿದ್ದಾರೆ ಎಂದು ಹೇಳಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಾಯುಕ್ತದಿಂದ ದೂರುಗಳ ಕಡತ ಹೋಗಿದೆ. ಇದಾದ ನಂತರ, ಕ್ಲ್ಯಾರಿಫಿಕೇಶನ್ ಕೇಳಿ ವಾಪಸ್ ಕಳುಹಿಸಿದ್ದೇವೆ ಎಂದು ರಾಜ್ಯಪಾಲರು ಹೇಳುತ್ತಿದ್ದಾರೆ. ಲೋಕಾಯುಕ್ತದಿಂದ ಸ್ಪಷ್ಟೀಕರಣ ಬರುವವರೆಗೂ ವಿಷಯ ರಿಜೆಕ್ಟ್ ಆಗುವುದ್ಲಿ. ರಾಜ್ಯಪಾಲರ ಬಳಿ ಇದ್ದಂತೆಯಲ್ಲವೇ? ಇದನ್ನೇ ರಾಜ್ಯಪಾಲರು ನನ್ನ ಬಳಿ ದೂರುಗಳು ಬಾಕಿ ಇಲ್ಲ ಎಂದು ಹೇಳುತ್ತಿದ್ದಾರೆ ಎಂದರು.
ರಾಜ್ಯಪಾಲರ ಕಚೇರಿಯಿಂದ ಮೂರು ದೂರುಗಳ ಕುರಿತು ಸ್ಪಷ್ಟನೆ ಕೇಳಿದ್ದಾರೆ ಎಂದಾದರೆ ಲೋಕಾಯುಕ್ತದವರು ಸುಮ್ಮನೆ ಇರಲು ಬರುವುದಿಲ್ಲ. ಸ್ಪಷ್ಟೀಕರಣ ನೀಡಬೇಕಾಗುತ್ತದೆ. ತದನಂತರದ ವಿಚಾರ ರಾಜ್ಯಪಾಲರಿಗೆ ಬಿಟ್ಟದ್ದು ಎಂದರು.
ರಾಜ್ಯಪಾಲರು ಒಂದು ಕಡತ ಮಾತ್ರ ಇದೆ ಎಂಬುದನ್ನು ಶನಿವಾರ ತಿಳಿಸಿದ್ದರು. ಅದು ಎಚ್.ಡಿ.ಕುಮಾರಸ್ವಾಮಿಯವರದ್ದು ಎಂಬುದು ಗೊತ್ತಾಗಿದೆ. ಅದಕ್ಕಾದರೂ ಕ್ರಮ ತೆಗೆದುಕೊಳ್ಳಬೇಕಲ್ಲವೇ? ಕಾನೂನು ರೀತಿ ಇದೆಯೇ? ಕಾನೂನು ಬಾಹಿರವಾಗಿದೆಯೇ ಎಂಬುದನ್ನು ಲೋಕಾಯುಕ್ತರು ತಿಳಿಸಿದ್ದಾರೆ. ಅದನ್ನು ಆಧರಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಸಿದ್ದಾರ್ಥ ಟ್ರಸ್ಟ್‌ಗೆ ನೀಡಿರುವ ಕೆಐಎಡಿಬಿ ನಿವೇಶನದ ಬಗ್ಗೆ ರಾಜ್ಯಪಾಲರ ಬಳಿ ಚರ್ಚೆ ಆಗಿಲ್ಲ. ವಿಶೇಷ ಅಧಿವೇಶನ ಕರೆಯುವ ಬಗ್ಗೆ ಮುಖ್ಯಮಂತ್ರಿಯವರ ಬಳಿ ಪ್ರಸ್ತಾಪ ಆಗಿಲ್ಲ ಎಂದರಲ್ಲದೆ, ಕೋರ್ಟ್ ತೀರ್ಪು ಆಧರಿಸಿ ಮುಂದಿನ ಬೆಳವಣಿಗೆಗಳನ್ನು ನೋಡಿ ರಾಷ್ಟ್ರಪತಿ ಭೇಟಿಯ ಬಗ್ಗೆ ತೀರ್ಮಾನಿಸಲಾಗುವುದು ಎಂದು ಹೇಳಿದರು.
ಮುಡಾ ವಿಚಾರದಿಂದ ಸಿಎಂ ಆತಂಕಗೊಂಡಿದ್ದಾರೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಪರಮೇಶ್ವರ, ಮುಖ್ಯಮಂತ್ರಿಯವರು ಆತಂಕದಲಿಲ್ಲ. ಎಲ್ಲ ವಿಚಾರದಲ್ಲೂ ಸ್ಪಷ್ಟವಾಗಿದ್ದಾರೆ. ವಿರೋಧ ಪಕ್ಷದ ನಾಯಕ, ಮುಖ್ಯಮಂತ್ರಿಯಾಗಿ ಅಧಿಕಾರ ದುರುಪಯೋಗಪಡಿಸಿಕೊಂಡಿಲ್ಲ. ಯಾವುದೇ ರೀತಿಯ ಕಾನೂನು ಬಾಹಿರ ಕೆಲಸಗಳನ್ನು ಮಾಡಿಲ್ಲ ಎಂಬುದನ್ನು ರಾಜ್ಯದ ಜನತೆಯ ಮುಂದೆ ಸ್ಪಷ್ಟಪಡಿಸಿದ್ದಾರೆ ಎಂದರು.
ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಡಿ ಕುನ್ಹಾ ಅವರು ಮುಖ್ಯಮಂತ್ರಿಗೆ ವರದಿ ಸಲ್ಲಿಸುವಾಗ ನಾನು ಇರಲಿಲ್ಲ. ಅದನ್ನು ಪರಿಶೀಲಿಸಿ, ಏನು ಶಿಫಾರಸ್ಸು ಮಾಡಿದ್ದಾರೆ ಎಂಬುದನ್ನು ಆಧರಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಯಾವುದಾದರು ವಿಷಯದ ಕುರಿತು ಸತ್ಯಾಸತ್ಯತೆ ಸರ್ಕಾರಕ್ಕೆ ತಿಳಿಸಬೇಕು ಎಂಬ ಉದ್ದೇಶ ಇಟ್ಟುಕೊಂಡು ಆಯೋಗಗಳನ್ನು ರಚಿಸಲಾಗಿರುತ್ತದೆ. ಆಯೋಗ ವರದಿ ಬಂದ ಮೇಲೆ ಕ್ರಮ ಕೈಗೊಳ್ಳಬೇಕಾಗುತ್ತದೆ. ಇಲ್ಲವಾದರೆ ಆಯೋಗ ಏಕೆ ರಚಿಸಬೇಕು? ಕುನ್ಹಾ ವರದಿ ಕ್ಯಾಬಿನೆಟ್ ಮುಂದೆ ಬಂದರೆ ಚರ್ಚಿಸಲಾಗುವುದು ಎಂದು ಡಾ.ಪರಮೇಶ್ವರ ತಿಳಿಸಿದರು.