

ಬೆಂಗಳೂರು: ಎಸಿಬಿ ರಚನೆ ಕಾರಣಕ್ಕೆ ಹಲ್ಲುಕಿತ್ತ ಹಾವಿನಂತಾಗಿರುವ ಲೋಕಾಯುಕ್ತಕ್ಕೆ ಮತ್ತೆ ಶಕ್ತಿ ತುಂಬಬೇಕು. ಅದು ಅಲಂಕಾರಕ್ಕಿರುವುದಲ್ಲ ಎಂದು ಪ್ರತಿಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರವನ್ನು ಪರಿಪರಿಯಾಗಿ ಒತ್ತಾಯಿಸಿದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು. ಕರ್ನಾಟಕ ಲೋಕಾಯುಕ್ತ ತಿದ್ದುಪಡಿ ವಿಧೇಯಕ ಪರ್ಯಾಲೋಚನೆ ವೇಳೆ ಎರಡೂ ಪಕ್ಷಗಳ ಶಾಸಕರು ಲೋಕಾಯುಕ್ತಕ್ಕೆ ಯಾವಾಗ ಬಲ ಕೊಡುತ್ತೀರಾ ಹೇಳಿ ಎಂದು ಒತ್ತಾಯಿಸಿದರು. ಸರ್ಕಾರದ ಕಡೆಯಿಂದ ಮಾತ್ರ ದನಿ ಹೊರಡಲೇ ಇಲ್ಲ.
ಆರಂಭದಲ್ಲಿ ಮಾತನಾಡಿದ ಮಾಜಿ ಸ್ಪೀಕರ್ ರಮೇಶ್ಕುಮಾರ್, ಲೋಕಾಯುಕ್ತದಿಂದ ಏನಾದರೂ ಪ್ರಯೋಜನ ಆಗುತ್ತಿದೆಯೇ? ಯಾವ ಉದ್ದೇಶದಿಂದ ಆ ಸಂಸ್ಥೆ ಇದೆ? ಅದನ್ನು ಸ್ಥಾಪಿಸಿದ ಉದ್ದೇಶ ಸಾರ್ಥಕವಾಗುತ್ತಿದೆಯೇ? ಅಲಂಕಾರಕ್ಕೆ ಇದೆಯೇ, ಆ ಚಂದಕ್ಕೆ ಏಕೆ ಬೇಕು ಎಂದು ಪ್ರಶ್ನಿಸಿದರು. ‘ಡಿ’ ಗ್ರೂಪ್ ನೌಕರರ, ನರ್ಸ್, ಫಾರ್ವಸಿಸ್ಟ್ ಗಳನ್ನು ಎಳೆದಾಡಿಸಲು ಲೋಕಾಯುಕ್ತ ಸಂಸ್ಥೆ ಬೇಕೇ? ಎಸಿಬಿ ಇರುವುದು ಲೋಕಾಯುಕ್ತಕ್ಕೆ ಕಾಂಟ್ರಡಿಕ್ಟರಿ. ಎಸಿಬಿ ಬಂದ ನಂತರ ಏನಾದರೂ ಬದಲಾವಣೆ ಆಗಿದೆಯೇ ಎಂದು ರಮೇಶ್ಕುಮಾರ್ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳುವ ಮೂಲಕ ಹತ್ತಾರು ಶಾಸಕರನ್ನು ಮಾತನಾಡಲು ಉತ್ತೇಜಿಸಿದರು. ಪುನರ್ವಸತಿ ಕಲ್ಪಿಸುವ ಉದ್ದೇಶಕ್ಕೆ ಇದನ್ನು ಇಟ್ಟುಕೊಂಡಿದ್ದೆಂದರೆ ಅಭ್ಯಂತರವಿಲ್ಲ ಎಂದು ಸರ್ಕಾರವನ್ನು ಚುಚ್ಚಿದರು.
ರಮೇಶ್ಕುಮಾರ್ ಮಾತಿಗೆ ದನಿ ಗೂಡಿಸಿದ ಎಚ್. ಡಿ. ರೇವಣ್ಣ, ಒಂದು ವೈಯಕ್ತಿಕ ಪ್ರಕರಣ ಪ್ರಸ್ತಾಪಿಸಿ ಲೋಕಾಯುಕ್ತಕ್ಕೆ ಬಲ ನೀಡಬೇಕೆಂದರು. ಈಶ್ವರ ಖಂಡ್ರೆ ಮಾತನಾಡಿ, ಬದಲಾದ ವ್ಯವಸ್ಥೆಯಿಂದ ಭ್ರಷ್ಟಾಚಾರ ನಿಯಂತ್ರಣಕ್ಕೆ ಬಂದಿಲ್ಲ. ಸಾವಿರಾರು ಪ್ರಕರಣ ಲೋಕಾಯುಕ್ತದಲ್ಲಿ ವರ್ಷಾನುಗಟ್ಟಲೆಯಿಂದ ಹಾಗೆ ಉಳಿದಿವೆ. ಯಾವಾಗ ಮುಗಿಸುತ್ತಾರೆಂದು ಕೇಳಬೇಕು, ಈ ವಿಚಾರದಲ್ಲಿ ಇನ್ನಷ್ಟು ಹೆಚ್ಚು ಚರ್ಚೆಯಾಗಬೇಕು, ಲೋಕಾಯುಕ್ತಕ್ಕೆ ಬಲ ನೀಡಬೇಕು ಎಂದು ಒತ್ತಾಯಿಸಿದರು.
ಭ್ರಷ್ಟಾಚಾರ ನಿಯಂತ್ರಣದಲ್ಲಿ ಲೋಕಾಯುಕ್ತ ಒಂದು ಹಂತಕ್ಕೆ ಯಶಸ್ವಿಯಾಗಿತ್ತು. ಆದರೆ ಇಂದು ಹಳ್ಳಿ ಭಾಗದಲ್ಲಿ ಯಾರಾದರೂ ಲೊಕಾಯುಕ್ತಕ್ಕೆ ದೂರು ಕೊಡುತ್ತೇನೆ ಎಂದರೆ, ‘ನಾನು ನೋಡಿಲ್ಲದ ಲೋಕಾಯುಕ್ತನಾ’ ಎಂದು ಹೇಳುವ ವಾತಾವರಣ ಇದೆ ಎಂದು ಶಿವಲಿಂಗೇಗೌಡ ಹೇಳಿದರು. ಲೋಕಾಯುಕ್ತಕ್ಕೆ ಗೌರವಾನ್ವಿತರ ನೇಮಕವಾಗುತ್ತದೆ, ಕೆಳಗಿನ ಸಿಬ್ಬಂದಿ ವರ್ಗದವರು ಯಾರು? ನಮ್ಮೊಂದಿಗೆ ಜಟಾಪಟಿ ಮಾಡಿಕೊಂಡವರು, ಅಲ್ಲಿ ಕುಳಿತು ಏನು ಮಾಡಬೇಕೋ ಅದನ್ನು ಮಾಡುತ್ತಾರೆ. ಲೋಕಾಯುಕ್ತ ಸಂಸ್ಥೆಗೆ ಸ್ವಂತ ಬಲದ ಅಧಿಕಾರಿ ವೃಂದ ಯಾವಾಗ ನೇಮಕವಾಗುತ್ತದೆ? ಹೀಗೆ ಆಗದಿದ್ದಲ್ಲೇ ಅದರ ಪಾವಿತ್ರ್ಯತೆ ಉಳಿದಿದೆ ಅನಿಸಲ್ಲ ಎಂದು ಅಭಿಪ್ರಾಯಪಟ್ಟರು.
ಒಂದು ಹಂತದಲ್ಲಿ ಲೋಕಾಯುಕ್ತ ಏಕೆ ಬೇಕು, ಉಪ ಲೋಕಾಯುಕ್ತ ಏಕೆ ಬೇಕು ಎಂಬ ಪ್ರಶ್ನೆಯೂ ಕೇಳಿಬಂತು. ಮಾತು ಮುಂದುವರಿಸಿದ ರಮೇಶ್ಕುಮಾರ್, ನಮ್ಮ ವ್ಯವಸ್ಥೆಯಲ್ಲಿ ಭ್ರಷ್ಟಾಚಾರಿಗಳಿಗೆ ಸ್ವಲ್ಪವಾದರೂ ಭಯ ಇರಬೇಕಲ್ಲವೇ? ಹಿಂದೆ ಲೋಕಾಯುಕ್ತರೆಂದರೆ ಭ್ರಷ್ಟರೆಲ್ಲ ಭಯದಿಂದ ಬದಿಗೆ ಸರಿಯುತ್ತಿದ್ದರು. ಆದರಿಂದು ಪ್ರಾಮಾಣಿಕರು ಬಚ್ಚಿಟ್ಟುಕೊಳ್ಳುವ ಸಂದರ್ಭ ಬಂದಿದೆ. ಲೋಕಾಯುಕ್ತ ಹಲ್ಲಿಲ್ಲದಂತಾಗಿದೆ ಎಂದು ವಿಶ್ಲೇಷಿಸಿದರು.
ಆಡಳಿತ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಲೋಕಾಯುಕ್ತಕ್ಕೆ ಬಲ ತುಂಬುವುದಾಗಿ ಹೇಳಿದೆ. ಆ ಮಾತನ್ನು ಉಳಿಸಿಕೊಳ್ಳಲಿ ಎಂದು ಪ್ರತಿಪಕ್ಷದ ಕಡೆಯಿಂದ ಬಂತು. ಇಷ್ಟಾದರೂ ಆಡಳಿತ ಪಕ್ಷ ಚಕಾರ ಎತ್ತಲಿಲ್ಲ. ಎಲ್ಲವನ್ನೂ ಆಲಿಸುತ್ತಿದ್ದ ಕಾನೂನು ಮತ್ತು ಸಂಸದೀಯ ಸಚಿವ ಮಾಧುಸ್ವಾಮಿ, ಅಪ್ಪಿತಪ್ಪಿಯೂ ಲೋಕಾಯುಕ್ತ ಬಲವರ್ಧನೆ ಬಗ್ಗೆ ಒಂದು ಮಾತನಾಡಲಿಲ್ಲ. ಈ ಚರ್ಚೆ ನಡೆಯುವಾಗ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮೊಗಸಾಲೆಯಲ್ಲೇ ಉಳಿದಿದ್ದರು. ಒಟ್ಟಾರೆ, ಬಿಸಿಬಿಸಿ ಚರ್ಚೆ ತಾತ್ವಿಕ ಅಂತ್ಯ ಕಾಣದೆ ತಣ್ಣಗಾಯಿತು.