ಲೋಕಾಯುಕ್ತ ನಕಲಿ ಪೊಲೀಸ್ ಸಿಸಿಬಿ ಬಲೆಗೆ

Published on

ಬೆಂಗಳೂರು: ತೆಲಗು ಸಿನಿಮಾದಿಂದ ಪ್ರೇರಣೆಗೊಂಡು ಸರ್ಕಾರಿ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಭ್ರಷ್ಟಾಚಾರದ ದೂರು ಬಂದಿದೆ ಎಂದು ಬೆದರಿಸಿ ಸುಲಿಗೆ ಮಾಡುತ್ತಿದ್ದ ಲೋಕಾಯುಕ್ತ ನಕಲಿ ಅಧಿಕಾರಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶ ಮೂಲದ ಶ್ರೀನಾಥ್ ರೆಡ್ಡಿ (34) ಬಂಧಿತ. ಆರೋಪಿಯ ಬಂಧನದಿಂದ ಬೆಂಗಳೂರು ಮತ್ತು ಆಂಧ್ರಪ್ರದೇಶದಲ್ಲಿ ನಡೆಸಿದ್ದ ಬ್ಲ್ಯಾಕ್‌ಮೇಲ್ ಮಾಡಿದ್ದ 17 ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.

10ನೇ ತರಗತಿ ಓದಿದ್ದ ಶ್ರೀನಾಥ್ ರೆಡ್ಡಿ, 2007ರಲ್ಲಿ ಬೇಗೂರು, ಎಲೆಕ್ಟ್ರಾನಿಕ್ ಸಿಟಿ, ಅತ್ತಿಬೆಲೆ, ಹೆಬ್ಬಗೋಡಿ, ಜಿಗಣಿ, ಕೋಲಾರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆ ಕಳ್ಳತನದಲ್ಲಿ ತೊಡಗಿದ್ದ. ಹಲವು ಬಾರಿ ಬಂಧನಕ್ಕೂ ಒಳಗಾಗಿ ಜೈಲು ಸೇರಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. 2019ರಲ್ಲಿ ತೆಲಗು ಭಾಷೆಯಲ್ಲಿ ರಮ್ಯಕೃಷ್ಣ ಮತ್ತು ಕೀರ್ತಿಸೂರ್ಯ ನಟಿಸಿರುವ ಗ್ಯಾಂಗ್ ಸಿನಿಮಾ ನೋಡಿಕೊಂಡು ತಾನು ಲೋಕಾಯುಕ್ತ ಅಧಿಕಾರಿಯಂತೆ ಬೆದರಿಸಿ ಸುಲಿಗೆಗೆ ತಯಾರಿ ನಡೆಸಿದ್ದ. ಸರ್ಕಾರಿ ವೆಬ್‌ಸೈಟ್‌ಗಳಲ್ಲಿ ಅಧಿಕಾರಿಗಳ  ನಂಬರ್ ಸರ್ಚ್ ಮಾಡಿ ಆ ನಂಬರ್‌ಗೆ ಕರೆ ಮಾಡಿ ‘ನಾನು ಲೋಕಾಯುಕ್ತ ಇನ್‌ಸ್ಪೆಕ್ಟರ್ ಚಂದ್ರಶೇಖರ್ ಮಾತನಾಡುತ್ತಿದ್ದೇನೆ. ನಮ್ಮ ಎಡಿಜಿಪಿ ಸಾಹೇಬರು ಮಾತನಾಡುತ್ತಾರೆ’ ಎಂದು ಹೇಳಿ ಮತ್ತೆ ತಾನೇ ಮಾತು ಶುರು ಮಾಡುತ್ತಿದ್ದ. ಲೋಕಾಯುಕ್ತ ಸಂಸ್ಥೆಗೆ ನಿಮ್ಮ ವಿರುದ್ಧ ಪಿಟಿಷನ್ ಬಂದಿದೆ. ವಿಚಾರಣೆ ಮಾಡಬೇಕು. ವಿಚಾರಣೆ ನಡೆಸದೆ ಮುಕ್ತಾಯ ಮಾಡಬೇಕಾದರೇ ಹಣ ನೀಡಬೇಕಾಗುತ್ತದೆ. ಹಣ ಕೊಟ್ಟರೇ ಪಿಟಿಷನ್‌ನ್ನು ಟೆಕ್ನೀಕಲ್ ಟೀಂನಿಂದ ವಿಚಾರಣೆ ನಡೆಸಿ ಕೋಟ್‌ಗೆ ಬಿ ರಿಪೋರ್ಟ್ ಸಲ್ಲಿಸುತ್ತೆವೆ’ ಎಂದು ಹೇಳಿ ಹಣಕ್ಕೆ ಬೇಡಿಕೆ ಇಡುತ್ತಿದ್ದ. ಲೋಕಾಯುಕ್ತ ಪೊಲೀಸರೆಂದು ಹೆದರಿಸಿ ಸರ್ಕಾರಿ ಅಧಿಕಾರಿಗಳು, ಹಣ ಕೊಡಲು ಒಪ್ಪಿ ಆರೋಪಿ ಶ್ರೀನಾಥ್ ರೆಡ್ಡಿ ಕೊಡುತ್ತಿದ್ದ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡುತ್ತಿದ್ದರು. ಇತ್ತೀಚೆಗೆ ನೊಂದ ಅಧಿಕಾರಿಯೊಬ್ಬರು ವಿಧಾನಸೌಧ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಪ್ರಕರಣದ ತನಿಖೆಯನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿತ್ತು. ಇನ್‌ಸ್ಪೆಕ್ಟರ್ ಬಾಲಾಜಿ ನೇತೃತ್ವದ ತಂಡ ಮೊಬೈಲ್ ಕರೆಗಳ ಮಾಹಿತಿ ಕಲೆ ಹಾಕಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಪೊಲೀಸ್ ಆಯುಕ್ತ ಬಿ. ದಯಾನಂದ್ ಮಾಹಿತಿ ನೀಡಿದ್ದಾರೆ.

ದೂರು ಕೊಡಲು ಹಿಂದೇಟು:

2019ರಿಂದ ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಸರ್ಕಾರಿ ಅಧಿಕಾರಿ, ನೌಕರರಿಗೆ ಕರೆ ಮಾಡಿ ಬೆದರಿಸಿ ಹಣ ಸುಲಿಗೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಇಲ್ಲಿಯವರೆಗೂ 60ಕ್ಕೂ ಅಧಿಕ ಅಧಿಕಾರಿಗಳಿಗೆ ಕರೆ ಮಾಡಿರುವ ಮಾಹಿತಿ ಕೊಟ್ಟಿದ್ದಾನೆ. ಬಹುತೇಕ ಅಧಿಕಾರಿಗಳು, ದೂರು ಕೊಡಲು ಮುಂದೆ ಬರುತ್ತಿಲ್ಲ. ಇದೇ ಕಾರಣಕ್ಕೆ 2019ರಿಂದ ಬಂಧನವೂ ಆಗಿಲ್ಲ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ಆರೋಪಿ ಶ್ರೀನಾಥ್ ರೆಡ್ಡಿ, ಎಲ್ಲಿಯೂ ಮನೆ ಮಾಡಿರಲಿಲ್ಲ. ಪಂಚತಾರಾ ಹೋಟೆಲ್‌ನಲ್ಲಿ ರೂಮ್ ಬಾಡಿಗೆ ಪಡೆಯುತ್ತಿದ್ದ. ಗೋವಾ ಕ್ಯಾಸಿನೋಗೆ ಹೋಗಿ ಸುಲಿಗೆ ಮಾಡಿದ ಹಣದಲ್ಲಿ ಮೋಜು-ಮಸ್ತಿ ಮಾಡುತ್ತಿದ್ದ. ಇದರ ನಡುವೆ ಲಾಡ್ಜ್‌ನಲ್ಲಿ ವಿಶ್ರಾಂತಿ ಪಡೆಯುವಾಗ ಟಿವಿಯಲ್ಲಿ ತೆಲಗು ಸಿನಿಮಾ ‘ಗ್ಯಾಂಗ್’ನಲ್ಲಿ ರಮ್ಯಕೃಷ್ಣ ‘ಜಾನ್ಸಿ ್ರಮ್ ಸಿಬಿಐ’ ಎಂಬ ಡೈಲಾಗ್ ನೋಡಿ ಅಂದಿನಿಂದ ಲೋಕಾಯುಕ್ತ ಪೊಲೀಸ್ ಸೋಗಿನಲ್ಲಿ ಸುಲಿಗೆಗೆ ಇಳಿದಿದ್ದ.

ಕ್ಯಾಸಿನೋದಲ್ಲಿ ಜೂಜಾಟವಾಡಿ ಸಾಲ ಮಾಡಿಕೊಂಡಾಗ ಶೌಚಗೃಹಕ್ಕೆ ಹೋಗಿ ಸರ್ಕಾರಿ ಅಧಿಕಾರಿಗೆ ಕಾಲ್ ಮಾಡಿ ಬೆದರಿಸಿ ಸಹ ಸಾಲಗಾರನ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಿಸಿ ಸಾಲ ತೀರಿಸಿದ್ದ. ಇದೆ ರೀತಿಯಲ್ಲಿ ಸಿಕ್ಕ ಸಿಕ್ಕವರೆ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಿಸಿ ಅವರಿಂದ ಹಣ ಡ್ರಾ ಮಾಡಿಸಿಕೊಂಡು ಕಮಿಷನ್ ಕೊಟ್ಟು ಉಳಿದ ನಗದನ್ನು ತಾನು ಇಟ್ಟುಕೊಳ್ಳುತ್ತಿದ್ದ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net