

ಬೆಂಗಳೂರು: ಆದಾಯಕ್ಕಿಂತ ಅಧಿಕ ಆಸ್ತಿಗಳಿಕೆ ಆರೋಪದ ಮೇರೆಗೆ ಲೋಕಾಯುಕ್ತ ಪೊಲೀಸರು ರಾಜ್ಯದ ಏಳು ಜಿಲ್ಲೆಗಳಲ್ಲಿ ಎಂಟು ಭ್ರಷ್ಟ ಅಧಿಕಾರಿಗಳಿಗೆ ಸೇರಿದ 37 ಸ್ಥಳಗಳ ಮೇಲೆ ದಾಳಿ ನಡೆಸಿದ್ದಾರೆ.
ದಾಳಿಯ ವೇಳೆ ೬೬.೭೦ ಲಕ್ಷ ರೂ. ನಗದು ಮತ್ತು ೨೨.೫೦ ಕೋಟಿ ರೂ.ಮೌಲ್ಯದ ಅಕ್ರಮ ಆಸ್ತಿ ದಾಖಲೆಗಳನ್ನು ಪತ್ತೆ ಹಚ್ಚಲಾಗಿದೆ.
ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಬೆಳಗ್ಗೆ ಬೆಳಗಾವಿ, ಹಾವೇರಿ, ದಾವಣಗೆರೆ, ಬೀದರ್, ಮೈಸೂರು, ರಾಮನಗರ ಮತ್ತು ಧಾರವಾಡ ಜಿಲ್ಲೆಯಲ್ಲಿ ಎಂಟು ಅಧಿಕಾರಿಗಳ ವಿರುದ್ಧ ಕಾರ್ಯಾಚರಣೆ ನಡೆಸಿ ಭ್ರಷ್ಟ ಅಧಿಕಾರಿಗಳನ್ನು ಬಲೆಗೆ ಕೆಡವಿದ್ದಾರೆ.
ಏಳು ಅಧಿಕಾರಿಗಳ ಮೇಲೆ ದಾಳಿ:
ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲೂಕಿನ ಬೋರೆಗಾವ್ ಗ್ರಾಮ ಆಡಳಿತಾಧಿಕಾರಿ ವಿಠ್ಠಲ್ ಶಿವಪ್ಪ ಧವಳೇಶ್ವರ್, ಬೆಂಗಳೂರಿನಲ್ಲಿ ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತ ವೆಂಕಟೇಶ್ ಎಸ್.ಮುಜುಮ್ದಾರ್, ಹಿರೆಕೇರೂರಿನ ಗ್ರಾಮೀಣ ಕುಡಿಯುವ ನೀರು ಮತ್ತು ಒಳಚರಂಡಿ ಇಲಾಖೆ ಕಾಶಿನಾಥ್ ಬುದ್ದಪ್ಪ ಭಜಂತ್ರಿ, ದಾವಣಗೆರೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಕಮಲ್ ರಾಜ್, ಬೀದರ್ ತರಬೇತಿ ಸಂಸ್ಥೆ ಉಪನಿರ್ದೇಶಕ ರವೀಂದ್ರ ಕುಮಾರ್, ಮೈಸೂರು ಸಿಟಿ ಕಾರ್ಪೋರೇಷನ್ ಪಿಆರ್‌ಓ ಡಿ.ನಾಗೇಶ್, ರಾಮನಗರ ಕೆಎಸ್‌ಆರ್‌ಟಿಸಿ ಡಿಎಂಇ (ನಿವೃತ್ತ) ವಿ.ಪ್ರಕಾಶ್, ಧಾರವಾಡ ಜಿಲ್ಲೆ ಕೆಐಎಡಿಬಿ ಸಹಾಯಕ ಕಾರ್ಯದರ್ಶಿ ಗೋವಿಂದಪ್ಪ ಹನುಮಂತಪ್ಪ ಭಜಂತ್ರಿ ದಾಳಿಗೊಳಗಾದ ಅಧಿಕಾರಿಗಳಾಗಿದ್ದಾರೆ.
ಇಬ್ಬರು ಅಧಿಕಾರಿಗಳು ಕೋಟಿ ಕುಳಗಳು:
ದಾಳಿಗೊಳಗಾದವರ ಪೈಕಿ ನಿವೃತ್ತ ಅಧಿಕಾರಿ ವಿ.ಪ್ರಕಾಶ್ ಬಳಿ ಅತಿ ಹೆಚ್ಚು ಅಕ್ರಮ ಆಸ್ತಿ ಪತ್ತೆಯಾಗಿದ್ದು, ೪.೨೬ ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ. ಅಲ್ಲದೇ, ರವೀಂದ್ರ ಕುಮಾರ್ ಬಳಿಯೂ ೪.೨೨ ಕೋಟಿ ರೂ. ಮೌಲ್ಯದ ಆಸ್ತಿ ಮೌಲ್ಯ ಪತ್ತೆಯಾಗಿದ್ದು, ಶೋಧ ಕಾರ್ಯ ಮುಂದುವರಿಸಿಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಂಟು ಅಧಿಕಾರಿಗಳಿಗೆ ಸೇರಿದ ೩೭ ಸ್ಥಳಗಳ ಮೇಲೆ ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, ಶೋಧ ಕಾರ್ಯ ಮುಂದುವರಿಸಲಾಗಿದೆ. ಅಧಿಕಾರಿಗಳ ವಿರುದ್ಧ ಬಲ್ಲ ಆದಾಯದ ಮೂಲಕ್ಕಿಂತ ಹೆಚ್ಚು ಅಸಮತೋಲನ ಆಸ್ತಿಯನ್ನು ಹೊಂದಿರುವ ಬಗ್ಗೆ ಪ್ರಕರಣ ದಾಖಲಿಸಿ ಕಾನೂನಿನ ಕ್ರಮ ಕೈಗೊಳ್ಳಲಾಗಿದೆ.