ಲೋಕಸಭೆ ಚುನಾವಣೆಯ 2ನೇ ಹಂತದ ಮತದಾನಕ್ಕೆ ಸಕಲ ಸಿದ್ಧತೆ

oplus_0
oplus_0
Published on

ರಾಣೆಬೆನ್ನೂರ: ಲೋಕಸಭೆ ಚುನಾವಣೆಯ 2ನೇ ಹಂತದ ಮತದಾನ ಮಂಗಳವಾರ ನಡೆಯಲಿದ್ದು, ಅದಕ್ಕಾಗಿ ನಗರದ ನಗರದ ರೋಟರಿ ಶಾಲೆಯ ಆವರಣದಲ್ಲಿ ಸೋಮವಾರ ಮಸ್ಟರಿಂಗ್ ಪ್ರಕ್ರಿಯೆ ಜರುಗಿತು. ಮತದಾನ ನಡೆಸಲು ನಿಯೋಜನೆಗೊಂಡ ಚುನಾವಣೆ ಸಿಬ್ಬಂದಿಗೆ ಮತಯಂತ್ರಗಳನ್ನು ನೀಡಿ ಮತಗಟ್ಟೆಗಳಿಗೆ ಕಳುಹಿಸಲಾಯಿತು.
ಸ್ಥಳೀಯ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ 55 ಸೂಕ್ಷ್ಮ, 2 ಅತಿ ಸೂಕ್ಷ್ಮ ಸೇರಿ ಒಟ್ಟು 266 ಮತಗಟ್ಟೆಗಳಿವೆ. ಆ ಪೈಕಿ 183 ಮತಗಟ್ಟೆಗಳಿಗೆ ಕ್ಯಾಮೆರಾ ಅಳವಡಿಸಲಾಗಿದೆ. 1 ಯುವ ಮತದಾರರ ಮತಗಟ್ಟೆ, 5 ಸಖಿ ಮತಗಟ್ಟೆಗಳು, 1 ಅಂವಿಕಲರ ಮತಗಟ್ಟೆ, 1 ಥೀಮ್ ಬೂತ್ (ಗಂಗಾಜಲ ತಾಂಡಾ) ಹಾಗೂ ಕರೂರಿನಲ್ಲಿ ಒಂದೇ ಕಡೆ 7 ಮತಗಟ್ಟೆಗಳಿರುವುದು ಸೇರಿ 8 ವಿಶೇಷ ಮತಗಟ್ಟೆಗಳಿವೆ.
266 ಮತಗಟ್ಟೆಗಳಲ್ಲಿ ಪ್ರತಿಯೊಂದರಲ್ಲಿಯೂ ತಲಾ ಒಬ್ಬರು ಪಿಆರ್‌ಒ, ಒಬ್ಬರು ಎಪಿಆರ್‌ಒ ಹಾಗೂ ಇಬ್ಬರು ಪಿಒ ಸೇರಿ ಒಟ್ಟು 1152 ಮತಗಟ್ಟೆ ಸಿಬ್ಬಂದಿ ನಿಯೋಜಿಸಲಾಗಿದೆ. 2 ಡಿವೈಎಸ್‌ಪಿ, 5 ಸಿಪಿಐ, 8 ಪಿಎಸ್‌ಐ, 15 ಎಎಸ್‌ಐ, 65 ಎಚ್‌ಸಿ, 172 ಪೇದೆ, 174 ಗೃಹರಕ್ಷಕ ದಳ ಸಿಬ್ಬಂದಿ, ಸೆಂಟ್ರಲ್ ಪ್ಯಾರಾಮಿಲಿಟರಿ ಫೋರ್ಸ್, ಒಂದು ಕೆಎಸ್‌ಆರ್‌ಪಿ ಹಾಗೂ 3 ಡಿಆರ್ ವ್ಯಾನ್ ಸೇರಿ 66 ಜನರನ್ನು ನಿಯೋಜನೆ ಮಾಡಲಾಗಿದೆ.
ಚುನಾವಣಾ ಸಿಬ್ಬಂದಿ ಹಾಗೂ ಸಾಮಗ್ರಿಗಳನ್ನು ಮತಗಟ್ಟೆಗೆ ತೆಗೆದುಕೊಂಡು ಹೋಗಿಬರುವ ಸಲುವಾಗಿ 37 ಬಸ್, 11 ಕ್ರುಷರ್ ನಿಯೋಜಿಸಲಾಗಿದೆ. 23 ಸೆಕ್ಟರ್ ಅಧಿಕಾರಿಗಳ ಸಂಚಾರಿ ದಳ ಎಲ್ಲ ಮತಗಟ್ಟೆಗಳಿಗೂ ಸಂಚರಿಸಿ ಚುನಾವಣೆ ಉಸ್ತುವಾರಿ ನೋಡಿಕೊಳ್ಳಲಿದೆ.
ಬೆಳಗ್ಗೆಯಿಂದಲೆ ಚುನಾವಣೆ ಕರ್ತವ್ಯಕ್ಕೆ ನೇಮಕಗೊಂಡಿರುವ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ ಸಿಬ್ಬಂದಿ ಮತಗಟ್ಟೆಗೆ ತೆರಳುವ ಸಲುವಾಗಿ ಮಸ್ಟರಿಂಗ್ ಕೇಂದ್ರದಲ್ಲಿ ಜಮೆಯಾಗಿದ್ದರು. ಪ್ರತಿಯೊಂದು ಮತಗಟ್ಟೆ ಅಧಿಕಾರಿಗಳು ಮತಯಂತ್ರ, ಅದರಲ್ಲಿ ಅಳವಡಿಸಬೇಕಾಗಿರುವ ಮತಪತ್ರ ಮತ್ತಿತ್ತರ ಸಾಮಗ್ರಿಗಳನ್ನು ಪಡೆದುಕೊಳ್ಳುವಲ್ಲಿ ಮಗ್ನರಾಗಿದ್ದರು.
ಚುನಾವಣಾ ಕರ್ತವ್ಯಕ್ಕೆ ತೆರಳಲು ಆಗಮಿಸಿದ್ದ ಎಲ್ಲ ಸಿಬ್ಬಂದಿಗೆ ಕಂದಾಯ ಇಲಾಖೆ ವತಿಯಿಂದ ಊಟ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಸಹಾಯಕ ಚುನಾವಣಾಧಿಕಾರಿ ರೇಷ್ಮಾ ಕೌಸರ ಹಾಗೂ ತಹಸೀಲ್ದಾರ ಸುರೇಶಕುಮಾರ ಟಿ. ಎಲ್ಲ ಪ್ರಕ್ರಿಯೆಗಳ ಉಸ್ತುವಾರಿ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net