

ವಾರಣಾಸಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಾಳೆ ಮಂಗಳವಾರ ಉತ್ತರ ಪ್ರದೇಶದ ವಾರಾಣಸಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಸಂಜೆ ಅದ್ಧೂರಿ ರೋಡ್ ಶೋ ನಡೆಸಿದರು. ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಆರಂಭವಾದ ರೋಡ್ ಶೋ ಸುಮಾರು 6 ಕಿಲೋ ಮೀಟರ್ ಸಾಗಿತು. ಅವರಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಾಥ್ ನೀಡಿದರು.
ರೋಡ್ ಶೋ ಆರಂಭಿಸುವ ಮುನ್ನ ಮಾಳವೀಯ ಚೌರಾಹಾದಲ್ಲಿ ಶಿಕ್ಷಣ ತಜ್ಞ ಮತ್ತು ಸಮಾಜ ಸುಧಾರಕ ಮದನ್ ಮೋಹನ್ ಮಾಳವೀಯ ಅವರ ಪ್ರತಿಮೆಗೆ ಮೋದಿ ಮಾಲಾರ್ಪಣೆ ಮಾಡಿದರು. ಇನ್ನು ಮೋದಿ ಅವರು ನಾಳೆ ಬೆಳಗ್ಗೆ 11.45ರ ಸುಮಾರಿಗೆ ನಾಮಪತ್ರ ಸಲ್ಲಿಸಲಿದ್ದಾರೆ. ಈ ವೇಳೆ ವಾರಾಣಸಿಯ ಜನರು ಮೋದಿ ಅವರಿಗೆ ಆರತಿ ಬೆಳಗಿಸಿ, ಶಂಖ ಮೊಳಗಿಸುವ ಮೂಲಕ, ಡ್ರಮ್ ಬಾರಿಸುವ ಮೂಲಕ ಎಲ್ಲೆಡೆ ಕೇಸರಿ ಪತಾಕೆಗಳನ್ನು ಹಾರಿಸಿ ಭರ್ಜರಿ ಸ್ವಾಗತ ಕೋರಿದರು. ಹಲವರು ಶಿವ ಮತ್ತು ಕೃಷ್ಣನ ವೇಷ ಧರಿಸಿ ಕಾಣಿಸಿಕೊಂಡರು.
ಮೈದಗಿನ್ ಚೌರಾ, ಕಬೀರಚೌರಾ, ಲಾಹುರಾಬೀರ್, ಟೆಲಿಯಾಬಾಗ್ ತಿರಹಾ, ಚೌಕಘಾಟ್ ಚೌರಾಹಾ, ಲಕ್ಡಿ ಮಂಡಿ, ಕ್ಯಾಂಟ್ ಓವರ್‌ಬ್ರಿಡ್ಜ್, ಲಹರ್ತಾರಾ ಚೌರಾಹಾ, ಮಂಡುವಾಡಿ ಚೌರಾಹಾ ಮತ್ತು ಕಾಕರ್ಮಟ್ಟಾ ಮೇಲ್ಸೇತುವೆ ಪ್ರದೇಶಗಳ ಮೂಲಕ ಬೆಂಗಾವಲು ಪಡೆ ಸಾಗಿದ ನಂತರ ಅವರು ವಿಶ್ವನಾಥ ಧಾಮದಿಂದ ಅತಿಥಿಗೃಹವನ್ನು ತಲುಪಿದರು.
ಲಕ್ಷಾಂತರ ಬಂಟಿಂಗ್ಸ್ ಮತ್ತು ಕಟೌಟ್‌ಗಳಿಂದ ಕೇಸರಿಮಯವಾಗಿ ಮಾರ್ಪಟ್ಟಿರುವ ರಸ್ತೆಗಳಲ್ಲಿ ಮೋದಿ ಅವರ ಬೆಂಗಾವಲು ಪಡೆ ಬರುತ್ತಿದ್ದಂತೆ ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಅಲ್ಲದೆ ಮೋದಿಯನ್ನು ಬೆಂಬಲಿಸುವ ಘೋಷಣೆಗಳು ಮೊಳಗಿದವು.
ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಆರಂಭವಾದ ರೋಡ್ ಶೋ ದೇಶದ ಅತ್ಯಂತ ಪವಿತ್ರ ಯಾತ್ರಾ ಕೇಂದ್ರಗಳಲ್ಲಿ ಒಂದಾದ ವಿಶ್ವನಾಥ ದೇವಸ್ಥಾನದಲ್ಲಿ ಇಂದು ಸಂಜೆ ಅಂತ್ಯಗೊಳ್ಳುವ ನಿರೀಕ್ಷೆಯಿದೆ. ಬಾಬಾ ವಿಶ್ವನಾಥ್ ಅವರ ಆಶೀರ್ವಾದ ಪಡೆಯಲು ಪ್ರಧಾನಿ ಮೋದಿ ಕೂಡ ತೆರಳಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
2014ರಲ್ಲಿ ವಾರಾಣಸಿ ಕ್ಷೇತ್ರದಿಂದ ಭಾರಿ ಅಂತರದಿಂದ ಗೆದ್ದಿರುವ ಪ್ರಧಾನಿ ಮೋದಿ ಅವರು ನಾಳೆ ನಾಮಪತ್ರ ಸಲ್ಲಿಸುವ ಮುನ್ನ ರೋಡ್‌ಶೋ ನಡೆಯಿತು. ಬಿಜೆಪಿಯ ಹನ್ನೆರಡು ಮುಖ್ಯಮಂತ್ರಿಗಳು, ಪ್ರಮುಖ ಬಿಜೆಪಿ ಮುಖಂಡರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು. ಆಂಧ್ರಪ್ರದೇಶದ ಜನಸೇನಾ ಸಂಸ್ಥಾಪಕ ಹಾಗೂ ಜನಪ್ರಿಯ ನಟ ಪವನ್ ಕಲ್ಯಾಣ್ ಕೂಡ ಈ ರೋಡ್ ಶೋನಲ್ಲಿ ಭಾಗಿಯಾಗಿದ್ದಾರೆ. 2019 ರಲ್ಲಿ, ಪಿಎಂ ಮೋದಿ ಅವರು ಪ್ರತಿಸ್ಪರ್ಧಿ ಸಮಾಜವಾದಿ ಪಕ್ಷದ ಶಾಲಿನಿ ಯಾದವ್ ಅವರನ್ನು ಸೋಲಿಸುವ ಮೂಲಕ 6.7 ಲಕ್ಷ ಮತಗಳನ್ನು ಗಳಿಸಿದ್ದರು.