

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು
ಲೋಕಸಭಾ ಚುನಾವಣೆ ಕಣದಲ್ಲಿ ಹೆಚ್ಚುತ್ತಿರುವ ಅಕ್ರಮಗಳನ್ನು ಬುಡಸಮೇತ ಹತ್ತಿಕ್ಕಲು ಮುಂದಾಗಿರುವ ಚುನಾವಣಾ ಆಯೋಗ ಕಟ್ಟುನಿಟ್ಟಿನ ಹೊಸ ತಂತ್ರಕ್ಕೆ ಮೊರೆ ಹೋಗಿದೆ. ಎಷ್ಟೇ ಕಠಿಣ ಕ್ರಮ ಕೈಗೊಂಡರೂ ಯಾಮಾರಿಸುತ್ತಿದ್ದ ಅಭ್ಯರ್ಥಿಗಳು ಈ ಬಾರಿ ರಂಗೋಲಿ ಕೆಳಗೂ ನುಸುಳುವುದಕ್ಕೆ ಸಾಧ್ಯವಾಗದಷ್ಟು ಎಚ್ಚರಿಕೆ ವಹಿಸಿದೆ.
ಚುನಾವಣೆ ಅಕ್ರಮ ತಡೆವ ತನ್ನ ಈ ಕಾರ್ಯಕ್ಕೆ ಆದಾಯ ತೆರಿಗೆ, ವಾಣಿಜ್ಯ ತೆರಿಗೆಯಂತಹ ವಿವಿಧ ಇಲಾಖೆಗಳನ್ನು ಬಳಸಿಕೊಳ್ಳಲು ಆಯೋಗ ಉದ್ದೇಶಿಸಿದೆ. ಈ ಚುನಾವಣೆಯಲ್ಲಿ ನಗದು ವರ್ಗಾವಣೆ ಹೆಚ್ಚಾಗಿರುವುದಲ್ಲದೆ ಉಚಿತ ಉಡುಗೊರೆಗಳ ಹಂಚಿಕೆ ರಾಜಾರೋಷವಾಗಿ ನಡೆಯುತ್ತಿದೆ. ಮದ್ಯ ಮತ್ತು ಮಾದಕ ವಸ್ತುಗಳು ದಿನೇ ದಿನೆ ಸಿಗಲಾರಂಭಿಸಿವೆ. ಮತ್ತೊಂದೆಡೆ ಅಭ್ಯರ್ಥಿಗಳ ಆಸ್ತಿಯ ಮಾಹಿತಿ ದಂಗು ಬಡಿಸುವ ರೀತಿಯಲ್ಲಿದೆ. ಹಾಲಿ ಜನಪ್ರತಿನಿಧಿಗಳ ಆಸ್ತಿ ಏರಿಕೆ ಕಂಡಿದ್ದರೆ, ಹೊಸದಾಗಿ ಚುನಾವಣೆಗೆ ಬಂದಿರುವವರ ಆಸ್ತಿ ಕೋಟಿ ಕೋಟಿ ಮೀರಿದೆ. ಹೀಗಾಗಿಯೇ ಎಲ್ಲ ಮೂಲಗಳನ್ನು ಸಂಬಂಧಿಸಿದ ಇಲಾಖೆಗಳ ಮೂಲಕ ಕೆದಕುವುದಕ್ಕೆ ಆಯೋಗ ಹೆಜ್ಜೆ ಇಟ್ಟಿದೆ.
ಕಾಟಾಚಾರಕ್ಕೆ ಬ್ರೇಕ್: ಜನಪ್ರತಿನಿಧಿಗಳ ಭ್ರಷ್ಟಾಚಾರ ಕೊನೆಗಾಣಿಸಬೇಕೆಂಬ ಉದ್ದೇಶದಿಂದಲೇ ನಾಮಪತ್ರದ ಜತೆಗೆ ಆಸ್ತಿ ಹಾಗೂ ಕ್ರಿಮಿನಲ್ ಹಿನ್ನೆಲೆಯ ಪ್ರಮಾಣಪತ್ರ ಸಲ್ಲಿಸಬೇಕೆಂಬ ಪದ್ಧತಿಯನ್ನು ಚುನಾವಣಾ ಆಯೋಗ ಹಲವು ವರ್ಷಗಳ ಹಿಂದೆಯೇ ಜಾರಿಗೆ ತಂದಿದೆ. ಆದರೆ ಈ ರೀತಿ ಸಲ್ಲಿಕೆಯಾಗುವ ಪ್ರಮಾಣಪತ್ರ ಕಾಟಾಚಾರಕ್ಕೆ ಎಂಬಂತಿದೆ . ಇದುವರೆಗೂ ನಡೆದಿರುವ ಚುನಾವಣೆಗಳಲ್ಲಿ ಅಭ್ಯರ್ಥಿಗಳು ಸಲ್ಲಿಸಿರುವ ಪ್ರಮಾಣಪತ್ರಗಳ ಕುರಿತು ಸ್ವತಃ ಆಯೋಗ ಸಹ ತಲೆ ಕೆಡಿಸಿಕೊಂಡಿಲ್ಲ. ಆದರೆ ಇದೇ ಮೊದಲ ಬಾರಿಗೆ ಆದಾಯ ತೆರಿಗೆ ಇಲಾಖೆ ಸೇರಿದಂತೆ ಸಂಬಂಧಿಸಿದಂತೆ ಇಲಾಖೆಗಳ ಮೂಲಕ ಪರಿಶೀಲನೆಗೆ ಮುಂದಾಗಿದೆ.
ಇದುವರೆಗೂ ಸುಮಾರು 187.85 ಕೋಟಿ ರೂ.ಗಳ ಮೌಲ್ಯದ ನಗನಾಣ್ಯ ವಶಕ್ಕೆ ಪಡೆಯಲಾಗಿದೆ. 26 ಕೋಟಿ ರೂ.ಗೂ ಹೆಚ್ಚಿನ ನಗದು, ಸುಮಾರು 2 ಕೋಟಿ ರೂ.ಗಳಷ್ಟು ಉಚಿತ ಉಡುಗೊರೆಗಳು, 9 ಕೋಟಿ ರೂ. ಮೌಲ್ಯದ ಚಿನ್ನ ಹೀಗೆ ಸಾಕಷ್ಟು ವಶ ಆಗಿದೆ. ಇದರ ಮೂಲವನ್ನು ಕೆಣಕಲು ಈಗ ನಿರ್ಧರಿಸಲಾಗಿದೆ.
ಆಸ್ತಿ ಪ್ರಮಾಣ ಪತ್ರ ಪರಿಶೀಲನೆ: ಪ್ರತಿ ಅಭ್ಯರ್ಥಿ ಸಲ್ಲಿಸುವ ಪ್ರಮಾಣ ಪತ್ರದಲ್ಲಿನ ವಿವರಗಳನ್ನು ಆದಾಯ ತೆರಿಗೆ ಇಲಾಖೆ ಪರಿಶೀಲಿಸಲಿದೆ. ಹಿಂದೆ ಪ್ರಮಾಣ ಪತ್ರ ಸಲ್ಲಿಸಿದ ಕೂಡಲೇ ಆದಾಯ ತೆರಿಗೆ ಇಲಾಖೆಗೂ ಕಳುಹಿಸಲಾಗುತ್ತಿತ್ತು. ಆದರೆ ಈಗ ಆಯೋಗದ ವೆಬ್ಸೈಟ್ನಲ್ಲಿ ಸಾರ್ವಜನಿಕರಿಗೆ ಲಭ್ಯವಾಗುವುದರಿಂದ ಆದಾಯ ತೆರಿಗೆ ಇಲಾಖೆಗೆ ಸುಲಭವಾಗಿ ದೊರಕುತ್ತಿವೆ.
ಆದಾಯ ತೆರಿಗೆ ಇಲಾಖೆ ಪ್ರತಿ ನಿತ್ಯ ಪ್ರಮಾಣ ಪತ್ರಗಳನ್ನು ಪರಿಶೀಲನೆ ಮಾಡುತ್ತಿದೆ. ಆದ್ದರಿಂದ ಲೋಕ ಕಣಕ್ಕೆ ಇಳಿದಿರುವ ಕೋಟ್ಯಧಿಪತಿಗಳಿಗೆ ಆದಾಯ ತೆರಿಗೆ ಇಲಾಖೆಯ ಗ್ರಹಚಾರ ಕಾದಿದೆ ಎಂಬ ಮಾಹಿತಿ ಇದೆ. ಹಾಲಿ ಜನಪ್ರತಿನಿಧಿಗಳ ಆಸ್ತಿಯ ಪ್ರಮಾಣ ಏರಿಕೆಯಾಗಿದೆಯೇ, ಯಾವ ಪ್ರಮಾಣದಲ್ಲಿ ಏರಿಕೆ ಕಂಡಿದೆ.
ಆದಾಯದ ಮೂಲಗಳೇನು ಎಂಬುದೂ ಪರಿಶೀಲನೆಗೆ ಒಳಪಡಲಿದೆ. ಕಳೆದ ಚುನಾವಣೆಯಲ್ಲಿ ಸಲ್ಲಿಸಿದ್ದ ಆಸ್ತಿ ವಿವರಗಳ ಪ್ರಮಾಣ ಪತ್ರಗಳು ಆದಾಯ ತೆರಿಗೆ ಇಲಾಖೆಯಲ್ಲಿ ಲಭ್ಯವಿವೆ. ಆದ್ದರಿಂದ ಪರಿಶೀಲನೆ ಸುಲಭವಾಗಲಿದೆ ಎಂದೇ ಚುನಾವಣಾ ಆಯೋಗದ ಮೂಲಗಳು ಹೇಳುತ್ತವೆ. ಹೊಸದಾಗಿ ಚುನಾವಣೆಗೆ ಸ್ಪರ್ಧಿಸಿರುವವರ ಪೈಕಿ ಹಲವರು ಕೋಟ್ಯಧಿಪತಿಗಳಾಗಿದ್ದಾರೆ.
ಆದ್ದರಿಂದ ಅವರ ಪ್ರಮಾಣ ಪತ್ರಗಳಲ್ಲಿ ಸ್ಥಿರ ಹಾಗೂ ಚರ ಆಸ್ತಿ ಮೌಲ್ಯ ಎಷ್ಟಿದೆ? ಅವರ ವ್ಯವಹಾರಗಳೇನು? ಪತಿ ಹಾಗೂ ಪತ್ನಿ, ಮಗ-ಮಗಳು ಪರಸ್ಪರ ಸಾಲ ಕೊಟ್ಟುಕೊಳ್ಳಲು ನಡೆಸುತ್ತಿರುವ ವ್ಯಾಪಾರವೇನು? ಬೇರೆ ಬೇರೆಯವರಿಂದ ಹಾಗೂ ಕಂಪೆನಿಗಳಿಂದ ಕೋಟ್ಯಂತರ ರೂ.ಗಳ ಸಾಲ ಪಡೆದಿರುವುದರ ಹಿಂದಿನ ಉದ್ದೇಶವೇನು? ಆದಾಯ ತೆರಿಗೆ ಪಾವತಿ ಮಾಡಲಾಗಿದೆಯೇ? ಅನೇಕ ಕೋಟ್ಯಧೀಶರು ಸ್ವಂತ ವಾಹನ ಹೊಂದಿಲ್ಲ ಎಂಬ ಮಾಹಿತಿ ನೀಡಿರುವ ಆಶ್ಚರ್ಯ, ಆಸ್ತಿ ಮೌಲ್ಯ ಮಾರ್ಗಸೂಚಿ ಬೆಲೆಯಿಂದ ಮಾತ್ರ ಹೆಚ್ಚಳವಾಗಿದೆಯೇ ಅಥವಾ ಬೇರೆ ಕಾರಣಕ್ಕೋ ಎಂಬ ಎಲ್ಲ ಅಂಶಗಳ ಬಗ್ಗೆಯೂ ಪರಿಶೀಲನೆ ನಡೆಯಲಿದೆ ಎಂದು ಮೂಲಗಳು ಖಚಿತಪಡಿಸಿವೆ.
ವಾಣಿಜ್ಯ ತೆರಿಗೆ ಇಲಾಖೆ ಅಲರ್ಟ್: ಉಚಿತ ಉಡುಗೊರೆ ಮೂಲ ಪತ್ತೆ ಮಾಡುವ ಕಾರ್ಯವನ್ನು ವಾಣಿಜ್ಯ ತೆರಿಗೆ ಇಲಾಖೆ ಮೂಲಕ ಮಾಡಲಾಗುತ್ತಿದೆ. ಗಿಫ್ಟ್ ಐಟಂ ವಶಪಡಿಸಿಕೊಂಡ ಕೂಡಲೇ ಅವುಗಳ ಉತ್ಪಾದಕರು, ಮಾರಾಟಗಾರರು, ದಾಸ್ತಾನು ಮಾಡಿದ್ದ ಗೋದಾಮುಗಳ ಮಾಲೀಕರನ್ನು ಪತ್ತೆ ಹಚ್ಚಿ ಮಾಹಿತಿ ಪಡೆಯಲಾಗುತ್ತಿದೆ. ಯಾರು ಖರೀದಿಸಿದವರು? ಮಾರಾಟಕ್ಕೆ ಜಿಎಸ್ಟಿ ಸಹಿತ ಬಿಲ್ ಇದೆಯಾ? ದಾಸ್ತಾನು ಮಾಡಿದ್ದ ಗೋದಾಮುಗಳಿಗೆ ಸಂಬಂಧಿಸಿದ ದಾಖಲೆ ಪರಿಶೀಲಿಸಲಾಗುತ್ತದೆ. ವ್ಯತ್ಯಾಸ ಕಂಡು ಬಂದಲ್ಲಿ ಪ್ರಕರಣ ದಾಖಲಿಸಲಾಗುತ್ತಿದೆ. ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಸಂಬಂಧಿಸಿದ ಉಡುಗೊರೆಗಳು ಸಿಕ್ಕಿದ್ದರೆ ಅದನ್ನು ಅವರ ಲೆಕ್ಕಕ್ಕೆ ಸೇರಿಸಲಾಗುತ್ತದೆ. ವಾಣಿಜ್ಯ ತೆರಿಗೆ ಇಲಾಖೆ ಆಯೋಗಕ್ಕೆ ಆ ಮಾಹಿತಿಯನ್ನು ನೀಡಲಿದೆ. ಚು.ಆಯೋಗ ನಿಗದಿ ಮಾಡಿರುವ 90 ಲಕ್ಷ ರೂ. ವೆಚ್ಚ ಮೀರಿದರೆ ಅಭ್ಯರ್ಥಿ ವಿರುದ್ಧ ಆಯೋಗ ಕ್ರಮ ಕೈಗೊಳ್ಳಲಿದೆ.
ಪಕ್ಷಗಳಿಂದಲೂ ಮಾಹಿತಿ: ಚುನಾವಣಾ ಬಾಂಡ್ ದೇಶದಲ್ಲಿ ಮಾತ್ರವಲ್ಲದೇ ವಿದೇಶದಲ್ಲಿಯೂ ಸಾಕಷ್ಟು ಸದ್ದು ಮಾಡುತ್ತಿದೆ. ಚುನಾವಣಾ ಆಯೋಗಕ್ಕೆ ಎಸ್ಬಿಐ ಎಲ್ಲ ಮಾಹಿತಿ ನೀಡಿದೆ. ಚುನಾವಣಾ ಆಯೋಗ ಈಗ ರಾಜಕೀಯ ಪಕ್ಷಗಳಿಂದ ಆದಾಯ ಮತ್ತು ವೆಚ್ಚದ ಲೆಕ್ಕಪತ್ರ ವರದಿ ಸಲ್ಲಿಸುವಂತೆ ಸೂಚನೆ ನೀಡಿದೆ. ಎಲ್ಲ ಪಕ್ಷಗಳಿಗೂ ಚುನಾವಣಾ ಆಯೋಗ ಈ ರೀತಿಯ ಸೂಚನೆಯನ್ನು ನೀಡಿದೆ. ರಾಷ್ಟ್ರೀಯ ಪಕ್ಷಗಳ ಹಾಗೂ ನೋಂದಾಯಿತ ಪಕ್ಷಗಳ ರಾಜ್ಯ ಘಟಕಗಳಿಗೂ ವರದಿಗೆ ನಿರ್ದೇಶನ ನೀಡಿದೆ ಎಂದು ಮೂಲಗಳು ಹೇಳಿವೆ. ಮಾಹಿತಿ ಸಲ್ಲಿಸದ ಪಕ್ಷಗಳಿಗೆ ನೋಟಿಸ್ ನೀಡಲಿದೆ.
ಐಟಿ ಏನು ಮಾಡಲಿದೆ?: ಆದಾಯ ತೆರಿಗೆ ಅಧಿಕಾರಿಗಳು ಕಳೆದ ಚುನಾವಣೆಯ ಪ್ರಮಾಣಪತ್ರ, ಆದಾಯ ತೆರಿಗೆ ಪಾವತಿಯ ದಾಖಲೆ, ಲೋಕಾಯುಕ್ತಕ್ಕೆ ನೀಡಿರುವ ಮಾಹಿತಿ ಇಟ್ಟುಕೊಂಡು ಪರಿಶೀಲನೆ ಮಾಡಲಿದೆ. ಅಕ್ರಮ ಕಂಡು ಬಂದರೆ ದಾಳಿ ನಡೆಸಿ ಕ್ರಮ ಜರುಗಿಸಲಿದೆ ಎಂದು ಆದಾಯ ತೆರಿಗೆ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
1. ಈ ಬಾರಿ ಲೋಕ ಅಭ್ಯರ್ಥಿಗಳ ಮೇಲೆ ಹೆಚ್ಚು ನಿಗಾ
2. ಗಿಫ್ಟ್ ಮೂಲ ಕೆದಕಲಿದೆ ವಾಣಿಜ್ಯ ತೆರಿಗೆ ಇಲಾಖೆ
3. ಗಿಫ್ಟ್ ಉತ್ಪಾದಕರು, ಮಾರಾಟಗಾರರಿಗೆ ಶೋಧ
4. ಮಾರಾಟಗೊಂಡ ವಸ್ತುಗಳ ದಾಖಲೆ ಪರಿಶೀಲನೆ
5. ವ್ಯತ್ಯಾಸ ಬಂದರೆ ಅಭ್ಯರ್ಥಿಗಳ ವೆಚ್ಚಕ್ಕೆ ಸೇರ್ಪಡೆ
6. ಅಭ್ಯರ್ಥಿ ಪ್ರಮಾಣ ಪತ್ರ ಐಟಿಯಿಂದಲೇ ಶೋಧ
7. ಆದಾಯ ಹೆಚ್ಚಾಗಿದ್ದರೆ ಮೂಲವನ್ನು ಕೆದಕಿ ತನಿಖೆ
8. ಅಕ್ರಮದ ಸುಳಿವು ಸಿಕ್ಕರೆ ದಾಳಿ ನಡೆಸಿ ಅಗತ್ಯ ಕ್ರಮ
9. ಕಳೆದ ಚುನಾವಣೆ ಪ್ರಮಾಣಪತ್ರ ಪರಿಶೀಲನೆ