7 ದಂಪತಿಗಳನ್ನು ಮತ್ತೆ ಒಂದಾಗಿಸಿದ ಲೋಕ ಅದಾಲತ್

Lok Adalat
Published on

ಶಿವಮೊಗ್ಗ: ದಾಂಪತ್ಯದಲ್ಲಿ ಬಿರುಕುಮೂಡಿ ವಿವಾಹ ವಿಚ್ಛೇಧನಕ್ಕೆ ಅರ್ಜಿ ಸಲ್ಲಿಸಿದ್ದ ಏಳು ದಂಪತಿಗಳನ್ನು ಶಿವಮೊಗ್ಗದ ಪ್ರಧಾನ ಕೌಟುಂಬಿಕ ನ್ಯಾಯಾಲಯದಲ್ಲಿ ಮತ್ತೆ ಒಂದಾಗಿಸುವ ಮೂಲಕ ಅರ್ಜಿಗಳನ್ನು ಇತ್ಯರ್ಥಪಡಿಸಲಾಯಿತು.

ಜಿಲ್ಲೆಯಲ್ಲಿ ವಿಚಾರಣೆಗೆ ಬಾಕಿ ಇರುವ ಪ್ರಕರಣಗಳ ಶೀಘ್ರ ವಿಲೇವಾರಿಗೆ ಮತ್ತು ಪಕ್ಷಗಾರರಿಗೆ ತ್ವರಿತ ನ್ಯಾಯದಾನದ ದೃಷ್ಟಿಯಿಂದ ಪ್ರಸಕ್ತ ವರ್ಷದ 3ನೇ ಶನಿವಾರ ರಾಷ್ಟ್ರೀಯ ಲೋಕ ಅದಾಲತ್ ನಡೆಸಲಾಯಿತು. ಈ ವೇಳೆ ಶಿವಮೊಗ್ಗದಲ್ಲಿ ನಾನಾ ಕಾರಣಕ್ಕೆ ಕೌಟುಂಬಿಕ ಜಗಳವಾಗಿ ದಂಪತಿಗಳು ವಿಚ್ಛೇಧನಕ್ಕೆ ಅರ್ಜಿ ಸಲ್ಲಿಸಿದ್ದರು. ಲೋಕ ಅದಾಲತ್‌ನಲ್ಲಿ ಏಳೂ ದಂಪತಿಗಳ ಮನವೊಲಿಸುವಲ್ಲಿ ನ್ಯಾಯಾಧೀಶರು ಯಶಸ್ವಿಯಾದರು. ತಪ್ಪಿನ ಅರಿವಾಗಿ ಸತಿ-ಪತಿಗಳಾಗಿ ಮುಂದುವರಿಯುತ್ತೇವೆ. ಸಣ್ಣಪುಟ್ಟ ಸಮಸ್ಯೆಗಳನ್ನು ಎದುರಿಸಿ ಒಟ್ಟಾಗಿ ಜೀವನ ಸಾಗಿಸುವುದಾಗಿ ದಂಪತಿಗಳು ಒಪ್ಪಿಕೊಂಡರು.

ಪ್ರಧಾನ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶೆ ಕೆ.ಎಂ.ಶೈನಿ, ಅನುಸಂದಾನಕಾರರಾದ ಬಿ.ಎನ್.ವಿಶ್ವನಾಥ್ ರಾವ್, ವಕೀಲರಾದ ಬಿ.ಜಿ.ಶಿವಮೂರ್ತಿ, ಬಿ.ಎಸ್.ವಿವೇಕ್, ಬಿ.ಎಚ್.ಮಂಜುನಾಥ, ಎ.ಎಚ್.ಗಣೇಶ್, ಸಿಬ್ಬಂದಿಗಳಾದ ಯತಿರಾಜ್, ಮಂಜುನಾಥ್, ಪ್ರಗತಿ, ಕವಿತಾ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net