

ಬೆಂಗಳೂರು: ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರು ನಾಮಕರಣವಾಗಿ 50 ವರ್ಷಗಳು ಪೂರ್ಣಗೊಳ್ಳಲಿವೆ. ಈ ಹಿನ್ನೆಲೆಯಲ್ಲಿ ವರ್ಷಪೂರ್ತಿ ಕಾರ್ಯಕ್ರಮ ಆಯೋಜಿಸಲು ಸರ್ಕಾರ ತೀರ್ಮಾನಿಸಿದ್ದು, ಸುವರ್ಣ ಸಂಭ್ರಮದ ಕಳೆ ಹೆಚ್ಚಿಸಲು ಆಸಕ್ತರಿಂದ ಲಾಂಛನ ಮಾದರಿಯನ್ನು ಆಹ್ವಾನಿಸಿದೆ.
‘ಕರ್ನಾಟಕ ಸಂಭ್ರಮ 50’ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಶೀರ್ಷಿಕೆಯಡಿ ರಾಜ್ಯಾದ್ಯಂತ ವೈವಿಧ್ಯಮಯ, ವರ್ಣಮಯ ಹಾಗೂ ಅರ್ಥಪೂರ್ಣವಾಗಿ ಆಚರಿಸಿ ವಿಶೇಷ ಮೆರುಗು ನೀಡಲು ಕನ್ನಡ ಮತ್ತು ಇಲಾಖೆ ಉದ್ದೇಶಿಸಿದೆ.
ಸುವರ್ಣ ಮಹೋತ್ಸವಕ್ಕೆ ಕನ್ನಡ ನಾಡು ನುಡಿ ಸಂಸ್ಕೃತಿಯನ್ನು ಬಿಂಬಿಸುವ ವಿಶಿಷ್ಟ, ಸುಂದರವಾದ ಲಾಂಛನ ಮಾದರಿಯನ್ನು ಆಸಕ್ತರು ಕಳುಹಿಸಬಹುದಾಗಿದೆ. ಆಯ್ಕೆಯಾಗುವ ಮಾದರಿ ಲಾಂಛನಕ್ಕೆ 25 ಸಾವಿರ ರೂ. ಬಹುಮಾನ ನಿಗದಿಪಡಿಸಲಾಗಿದೆ.
ಲಾಂಛನ (ಲೋಗೋ)ದ ಮಾದರಿಯನ್ನು ಕಳುಹಿಸಲು ಸೆ.20 ರಿಂದ 30ರವರೆಗೆ ಅವಕಾಶವಿದೆ. ಆಸಕ್ತರು ಅಗತ್ಯ ಮಾಹಿತಿಯನ್ನು ಇಲಾಖೆಯ ಜಾಲತಾಣ http://www.kannadasiri.karnataka.gov.in ದಲ್ಲಿ ಪಡೆಯಬಹುದಾಗಿದೆ ಎಂದು ಇಲಾಖೆ ನಿರ್ದೇಶಕರು ತಿಳಿಸಿದ್ದಾರೆ.