ಕರೊನಾ ನಾಗಾಲೋಟ- ಜುಲೈ 31ರವರೆಗೆ ಸಂಪೂರ್ಣ ಲಾಕ್‌ಡೌನ್‌: 'ಮಹಾ' ಆದೇಶ

lockdown
Published on

ಮುಂಬೈ: ಕ್ಷಣ ಕ್ಷಣಕ್ಕೂ ಕರೊನಾ ವೈರಸ್‌ ತನ್ನ ಭಯಾನಕ ರೂಪವನ್ನು ತೋರುತ್ತಲೇ ಸಾಗಿದೆ. ಅದರಲ್ಲಿಯೂ ಮಹಾರಾಷ್ಟ್ರದಲ್ಲಂತೂ ಇದರ ಭೀಕರತೆ ಇನ್ನಷ್ಟು ಹೆಚ್ಚಾಗಿದೆ.

ಈಚೆಗಷ್ಟೇ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ, ರಾಜ್ಯದಲ್ಲಿ ಕರೊನಾ ಬಿಕ್ಕಟ್ಟು ಮುಗಿದಿಲ್ಲ, ಸರ್ಕಾರದ ನಿಯಮಗಳನ್ನು ಪಾಲಿಸಿ, ಲಾಕ್‌ಡೌನ್‌ ಮತ್ತೆ ವಿಧಿಸದಂತೆ ನೋಡಿಕೊಳ್ಳಿ ಎಂದು ಹೇಳಿದ್ದರು.

ಆದರೆ, ಪರಿಸ್ಥಿತಿ ಕೈಮೀರಿ ಹೋಗುತ್ತಿರುವ ಹಿನ್ನೆಲೆಯಲ್ಲಿ ಇದೀಗ ಲಾಕ್‌ಡೌನ್‌ ವಿಸ್ತರಣೆ ಮಾಡಿದೆ. ವೈರಸ್ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಜುಲೈ 31ರವರೆಗೂ ಲಾಕ್‌ಡೌನ್‌ ವಿಸ್ತರಣೆ ಅನಿವಾರ್ಯ ಎಂದು ಉದ್ಧವ್‌ ಠಾಕ್ರೆ ಘೋಷಣೆ ಮಾಡಿದ್ದಾರೆ. ಇಂದು ಈ ಕುರಿತು ಸೂಚನೆ ಹೊರಬಿದ್ದಿದ್ದು ಜುಲೈ 31ರವರೆಗೂ ರಾಜ್ಯದಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್‌ ಪಾಲನೆ ಮಾಡುವಂತೆ ಜನರಿಗೆ ತಿಳಿಸಿದ್ದಾರೆ.

ಅಗತ್ಯ ಸೇವೆಗಳನ್ನು ಹೊರತುಪಡಿಸಿ, ಅನಗತ್ಯ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ. ಕ್ಷುಲ್ಲಕ ಕಾರಣಕ್ಕಾಗಿ ಹೊರಗಡೆ ಓಡಾಡುವುದು ಸಹ ನಿರ್ಬಂಧಿಸಲಾಗಿದೆ ಎಂದು ಸರ್ಕಾರ ಹೇಳಿದೆ. ಇನ್ನು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯ ಎಂದು ಎಚ್ಚರಿಕೆ ನೀಡಿರುವ ಸರ್ಕಾರ ಉಲ್ಲಂಘಿಸಿದರೆ ಕ್ರಮ ಜರುಗಿಸಲಾಗುವುದು ಎಂದಿದೆ.

ಕಳೆದ 15 ದಿನಗಳಿಂದ ಮಹಾರಾಷ್ಟ್ರದಲ್ಲಿ ಆರ್ಥಿಕ ಚಟುವಟಿಕೆ ನಿಧಾನವಾಗಿ ಆರಂಭವಾಗಿತ್ತು. ಅಂಗಡಿ ಮುಗ್ಗಟ್ಟುಗಳು ತೆರೆಯಲಾರಂಭಿಸಿದ್ದವು.. ಸಾಂಕ್ರಾಮಿಕ ರೋಗದ ನಡುವೆಯೂ ಜಾಗರೂಕತೆಯಿಂದ ಜೀವನ ಮಾಡಬೇಕಾದ ಅನಿವಾರ್ಯತೆ ಇದೆ. ಅಪಾಯ ತಪ್ಪಿಲ್ಲ. ಅವಶ್ಯಕತೆ ಇದ್ದರೆ ಮಾತ್ರ ಹೊರಗೆ ಬನ್ನಿ ಎಂದು ಸಿಎಂ ವಿನಂತಿಸಿದ್ದರು. ಆದರೆ ಇದೀಗ ಪರಿಸ್ಥಿತಿಯನ್ನು ನೋಡಿ ಲಾಕ್‌ಡೌನ್ ಅನಿವಾರ್ಯ ಎಂದು ಘೋಷಣೆ ಮಾಡಲಾಗಿದೆ.

ಸದ್ಯ, ಮಹಾರಾಷ್ಟ್ರದಲ್ಲಿ 1,64,626 ಜನರು ಕರೊನಾ ಸೋಂಕಿತರಾಗಿದ್ದಾರೆ.. ಇದರಲ್ಲಿ 70,607 ಕೇಸ್ ಸಕ್ರಿಯವಾಗಿದೆ. 86,575 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಈವರೆಗೂ 7,429 ಜನರಿಗೆ ಕೊರೊನಾಗೆ ಬಲಿಯಾಗಿದ್ದಾರೆ.

ಇದಾಗಲೇ ಜಾರ್ಖಂಡ್‌ ಮತ್ತು ಪಶ್ಚಿಮ ಬಂಗಾಳದಲ್ಲಿಯೂ ಜುಲೈ 31ರವರೆಗೆ ಲಾಕ್‌ಡೌನ್‌ ವಿಸ್ತರಣೆ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net