

ಅಹಮದಾಬಾದ್: ಕರೊನಾ ಸೋಂಕು ಕ್ಷಣಕ್ಷಣಕ್ಕೂ ಹೆಚ್ಚುತ್ತಿರುವುದು ಒಂದೆಡೆಯಾದರೆ, ಸರಿಯಾದ ಸೌಲಭ್ಯಗಳು ಇಲ್ಲದೇ ಆಸ್ಪತ್ರೆಗಳು ಪರದಾಡುತ್ತಿರುವುದು ಇನ್ನೊಂದೆಡೆ, ಸೌಲಭ್ಯ ಇದ್ದರೂ ಕೆಲವು ಕಡೆಗಳಲ್ಲಿ ಬೇಜಬ್ದಾರಿ ತೋರಿ ಸೋಂಕಿತರನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳದೇ ಇರುವುದು ಮತ್ತೊಂದೆಡೆ.
ಈ ಮೂರನೆಯ ಗುಂಪಿಗೆ ಸೇರಿದ ಆಸ್ಪತ್ರೆಯೊಂದು ಇದೀಗ ತನ್ನ ಬೇಜವಾಬ್ದಾರಿಯಿಂದ ಭಾರಿ ದಂಡ ತೆರಬೇಕಾಗಿದೆ.
ಹೌದು. ಇದು ನಡೆದಿರುವುದು ಅಹಮದಾಬಾದ್‌ನಲ್ಲಿ. ಇಲ್ಲಿಯ ಶಾಹಿಭಾಗ್‌ನಲ್ಲಿರುವ ರಾಜಸ್ಥಾನ ಹಾಸ್ಪಿಟರ್‌ಗೆ 77 ಲಕ್ಷ ರೂಪಾಯಿಗಳ ಭಾರಿ ದಂಡ ವಿಧಿಸಲಾಗಿದೆ. ಕರೊನಾ ಸೋಂಕಿತ ರೋಗಿಯೊಬ್ಬರನ್ನು ನಿಗದಿತ ವೇಳೆಗೆ ಅಡ್ಮಿಟ್ ಮಾಡಿಕೊಳ್ಳದೇ ಅವರ ಸಾವಿಗೆ ಕಾರಣವಾದ ಹಿನ್ನೆಲೆಯಲ್ಲಿ ಈ ದಂಡ.
ದಂಡ ವಿಧಿಸಿ ಅಲ್ಲಿಯ ಮಹಾನಗರ ಪಾಲಿಕೆ ಆದೇಶ ಹೊರಡಿಸಿದ್ದು ಹೈಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ. 73 ವರ್ಷದ ಕರೊನಾ ಸೋಂಕಿತರೊಬ್ಬರ ಸಾವಿಗೆ ಕಾರಣವಾಗಿದ್ದ ಈ ಆಸ್ಪತ್ರೆ ವಿರುದ್ಧ ಅವರ ಕುಟುಂಬದವರ ಕೋರ್ಟ್ ಮೊರೆ ಹೋಗಿದ್ದರು. ಸಾವಿಗೆ ಆಸ್ಪತ್ರೆಯೇ ಕಾರಣ ಎಂದು ಕೋರ್ಟ್ ಅಭಿಪ್ರಾಯಪಟ್ಟಿತ್ತು.
ಈ ಹಿನ್ನೆಲೆಯಲ್ಲಿ, ಆಸ್ಪತ್ರೆಗೆ 25 ಲಕ್ಷ ರೂಪಾಯಿ, ಆಡಳಿತ ಮಂಡಳಿ ಎಂಟು ಸದಸ್ಯರಿಗೆ ತಲಾ 2 ಲಕ್ಷ ರೂ. ಮತ್ತು ಹದಿನೆಂಟು ಟ್ರಸ್ಟಿಗಳಿಗೆ 36 ಲಕ್ಷ ಸೇರಿ ಒಟ್ಟು 77 ಲಕ್ಷ ದಂಡ ವಿಧಿಸಿದ್ದೇವೆ. ಕ್ರಿಮಿನಲ್ ಪ್ರಕರಣ ಕೂಡ ದಾಖಲಿಸಲಾಗಿದೆ ಎಂದು ಅಹಮದಾಬಾದ್ ಪಾಲಿಕೆ ತಿಳಿಸಿದೆ.
ಜೂನ್ 18ರಂದು ಕೋವಿಡ್-19 ರೋಗಿಯನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು, ಅವರಿಗೆ ವೆಂಟಿಲೇಟರ್ ಬೆಂಬಲದ ಅವಶ್ಯಕತೆಯಿತ್ತು. ಆದರೆ ಆಸ್ಪತ್ರೆಯ ದ್ವಾರದಲ್ಲಿ 20 ನಿಮಿಷ ಕಾಯಿಸಲಾಯಿತು. ಸೋಂಕಿತನಿಗೆ ಆಸ್ಪತ್ರೆ ಗೇಟ್ ತೆರೆಯಲು ಸಿಬ್ಬಂದಿ ತಡಮಾಡಿದ್ದರು. ಈ ಹಿನ್ನೆಲೆಯಲ್ಲಿ ಅವರು ಅಲ್ಲಿಯೇ ಪ್ರಾಣ ಕಳೆದುಕೊಂಡಿದ್ದರು. (ಏಜೆನ್ಸೀಸ್)