ಲಾಕ್​ಡೌನ್​ ಅವಧಿಯಲ್ಲೂ ಅಪ್ರೆಂಟಿಸ್​ಗಳಿಗೆ ಸ್ಟೈಪಂಡ್​ ನಿರಾಕರಿಸುವಂತಿಲ್ಲ

Money
Published on

ನವದೆಹಲಿ: ಕರೊನಾದಿಂದಾಗಿ ಸಂಕಷ್ಟದಲ್ಲಿರುವ ಸರ್ಕಾರಗಳೇ ನೌಕರರ ಸಂಬಳದಲ್ಲಿ ಕಡಿತ ಮಾಡುತ್ತಿವೆ. ಜತೆಗೆ, ನಿವೃತ್ತರ ಪಿಂಚಣಿಯನ್ನೂ ಪೂರ್ಣವಾಗಿ ಪಾವತಿ ಮಾಡುತ್ತಿಲ್ಲ. ಆದರೆ, ವಿವಿಧ ಸಂಸ್ಥೆಗಳಲ್ಲಿ, ಕಾರ್ಖಾನೆಗಳಲ್ಲಿ ಶಿಶಿಕ್ಷು ತರಬೇತಿ (ಅಪ್ರೆಂಟಿಸ್​ಶಿಪ್​) ಪಡೆಯುತ್ತಿರುವ ಅಭ್ಯರ್ಥಿಗಳ ಪೂರ್ಣ ಸ್ಟೈಪಂಡ್​ ನೀಡುವಂತೆ ಸರ್ಕಾರ ಸೂಚಿಸಿದೆ.

ಉದ್ಯೋಗಕ್ಕಾಗಿ ಅಗತ್ಯ ಕೌಶಲಾಭಿವೃದ್ಧಿ ಹಾಗೂ ಶಿಕ್ಷಣದ ನಂತರ ಪ್ರಾಯೋಗಿಕ ಅನುಭವಕ್ಕಾಗಿ ದೇಶದ ವಿವಿಧ ಸಂಸ್ಥೆಗಳಲ್ಲಿ ಲಕ್ಷಾಂತರ ಜನರು ಅಪ್ರೆಂಟಿಸ್​ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 3 ತಿಂಗಳು, ಆರು ತಿಂಗಳು, ಒಂದು ವರ್ಷ ಹಾಗೂ ಕೆಲವೊಮ್ಮೆ ಇನ್ನೂ ಹೆಚ್ಚಿನ ಅವಧಿಗೆ ಈ ತರಬೇತಿ ನೀಡಲಾಗುತ್ತದೆ. ಈ ಅವಧಿಯಲ್ಲಿ ಮಾಸಿಕವಾಗಿ ಸಂಚಿತ ಮೊತ್ತವನ್ನುಗೌರವಧನವಾಗಿ ನೀಡಲಾಗುತ್ತದೆ. ಆದರೆ, ಲಾಕ್​ಡೌನ್​ ಅವಧಿಯಲ್ಲಿ ಸಂಸ್ಥೆಗಳಲ್ಲಿ ತರಬೇತಿ ಕಾರ್ಯ ನಡೆಯುತ್ತಿಲ್ಲ. ಆದರೆ, ಅವರಿಗೆ ನಿಡಬೇಕಾದ ಸ್ಟೈಪಂಡ್​ಅನ್ನು ಪೂರ್ಣ ಪ್ರಮಾಣದಲ್ಲಿ ನೀಡುವಂತೆ ಕೇಂದ್ರ ಸರ್ಕಾರ ತಿಳಿಸಿದೆ.

ಸ್ಟೈಪಂಡ್​ ನಿರಾಕರಿಸುವಂತಿಲ್ಲ: ರಾಷ್ಟ್ರಿಯ ಶಿಶಿಕ್ಷು ಉತ್ತೇಜನ ಯೋಜನೆ (ಎನ್​ಎಪಿಎಸ್​) ಅನ್ವಯ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳಿಗೆ ಸ್ಟೈಪಂಡ್​ ನಿರಾಕರಿಸುವಂತಿಲ್ಲ ಎಂದು ಕೌಶಲ ಅಭಿವೃದ್ಧಿ ಸಚಿವಾಲಯ ಸ್ಪಷ್ಟಪಡಿಸಿದೆ. ಒಂದು ವೇಳೆ ಮುಷ್ಕರ, ಕಂಪನಿ ಸ್ಥಗಿತ, ಲಾಕೌಟ್​, ಬಂದ್​ ಕಾರ್ಖಾನೆಯನ್ನು ಮುಚ್ಚಬೇಕಾದ ಸಂದರ್ಭ ಎದುರಾದರೆ ತರಬೇತಿ ಅವಧಿಯನ್ನು ಅಷ್ಟೇ ಪ್ರಮಾಣದಲ್ಲಿ ವಿಸ್ತರಿಸಬೇಕು ಎಂಬುದ್ನನು ನಿಯಮಗಳಲ್ಲಿ ಸ್ಪಷ್ಟಪಡಿಸಲಾಗಿದೆ. ತರಬೇತಿ ಸ್ಥಗಿತಗೊಂಡ ಅವಧಿಯಲ್ಲೂ ಅಭ್ಯರ್ಥಿಗಳಿಗೆ ಸ್ಟೈಪಂಡ್​ ನೀಡಬೇಕು ಅಥವಾ ಗರಿಷ್ಠ ಆರು ತಿಂಗಳವರೆಗೆ ಎರಡರಲ್ಲಿ ಯಾವುದು ಕಡಿಮೆಯೋ ಆ ಅವಧಿಯ ಗೌರವಧನ ಪಾವತಿಸಬೇಕು ಎಂಬುದನ್ನು ನಿಯಮಗಳಲ್ಲಿ ಸ್ಪಷ್ಟಪಡಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಈ ಕಾರಣದಿಂದಾಗಿ ಲಾಕ್​ಡೌನ್​ ಅವಧಿಯ ಸ್ಟೈಪಂಡ್​ಅನ್ನು ಆಯಾ ಕಂಪನಿಗಳು ನೀಡಲೇಬೇಕು ಎಂದು ನಿರ್ದೇಶನ ನೀಡಿದೆ. ಸಂಸ್ಥೆಗಳು ಈ ಮೊತ್ತವನ್ನುಸರ್ಕಾರದಿಂದ ಮರುಪಾವತಿ ಮಾಡಿಕೊಳ್ಳಬಹುದು.

ದೇಶದ ಯುವಪೀಳಿಗೆಯ ಆತ್ಮಸ್ಥೈರ್ಯವನ್ನು ಕುಸಿಯಲು ಬಿಡುವುದಿಲ್ಲ. ಸಾಧ್ಯವಾದ ಎಲ್ಲ ರೀತಿಯಿಂದಲೂ ಅವರಿಗೆ ಸಹಾಯ ಮಾಡುತ್ತೇವೆ. ಕರೊನಾ ಲಾಕ್​ಡೌನ್​ ಅವಧಿಯಲ್ಲೂ ಶಿಶಿಕ್ಷು ತರಬೇತಿಯಲ್ಲಿರುವವರು ತಮ್ಮ ಸ್ಟೈಪಂಡ್​ ಪಡೆದುಕೊಳ್ಳುವಂತೆ ನೋಡಿಕೊಳ್ಳುತ್ತೇವೆ ಎಂದು ಕೌಶಲಾಭಿವೃದ್ಧಿ ಸಚಿವ ಮಹೇಂದ್ರನಾಥ ಪಾಂಡೆ ತಿಳಿಸಿದ್ದಾರೆ. ಜತೆಗೆ, ಸಂಕಷ್ಟದ ಸ್ಥಿತಿಯಲ್ಲಿ ಸಂಸ್ಥೆಗಳು ಸರ್ಕಾರದೊಂದಿಗೆ ಪೂರ್ಣ ಬದ್ಧತೆಯನ್ನು ವ್ಯಕ್ತಪಡಿಸುತ್ತಿವೆ. ಸರ್ಕಾರದ ಆಶಯಕ್ಕೆ ಸಂಪೂರ್ಣ ಸಹಕಾರ ನೀಡುತ್ತಿವೆ ಎಂದು ಪಾಂಡೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net