

ನವದೆಹಲಿ: ಮೇಡಂ/ ಸರ್... ನಾನಿನ್ನೂ ಅಪ್ರಾಪ್ತೆ. ಮದುವೆಯಾಗುವಂತೆ ನನ್ನ ಅಪ್ಪ-ಅಮ್ಮ ದಿನವೂ ಹಿಂಸಿಸುತ್ತಿದ್ದಾರೆ. ಹೊಡೆಯುತ್ತಿದ್ದಾರೆ. ಲಾಕ್ಡೌನ್ ಇರುವ ಕಾರಣ ನಾನು ಹೊರಗೆಲ್ಲೂ ಹೋಗುವ ಧೈರ್ಯ ಮಾಡುವುದಿಲ್ಲ ಎನ್ನುವ ಕಾರಣದಿಂದ ಇದೀಗ ಹಿಂಸೆ ಹೆಚ್ಚಾಗಿಬಿಟ್ಟಿದೆ. ನನಗೆ ಮದುವೆ ಇಷ್ಟವಿಲ್ಲ... ದಯವಿಟ್ಟು ನನ್ನನ್ನು ಕಾಪಾಡಿ, ನನ್ನ ಜೀವ ಉಳಿಸಿ...
ಮಾನ್ಯರೇ, ನಾನು ಮಗಳ ಮನೆಯಲ್ಲಿ ಆಕೆಯ ಜತೆ ನೆಲೆಸಿದ್ದೇನೆ. ಈಗ ನನ್ನ ಅಳಿಯ ನನ್ನನ್ನು ಹೊರಕ್ಕೆ ಹಾಕಲು ಹೊಂಚು ಹಾಕುತ್ತಿದ್ದಾನೆ. ಈ ಲಾಕ್ಡೌನ್ ಸಮಯದಲ್ಲಿ ನಾನೆಲ್ಲಿ ಹೋಗಲಿ?
ಸರ್, ದಯವಿಟ್ಟು ನನ್ನನ್ನು ನನ್ನ ಅತ್ತಿಗೆಯಿಂದ ರಕ್ಷಿಸಿ... ನನ್ನ ಸಹೋದರಿಯ ಮನೆಯಲ್ಲಿ ಆಕೆಗೆ ವರದಕ್ಷಿಣೆ ತರುವಂತೆ ಹಿಂಸಿಸುತ್ತಿದ್ದಾರೆ. ಆಕೆಯನ್ನು ಕಾಪಾಡಿ... ನನ್ನ ಅತ್ತೆ ಮನೆಯಲ್ಲಿ ಹಿಂಸೆ ಆಗುತ್ತಿದೆ ಏನು ಮಾಡಲಿ...?
ಇಂಥ ಎಂಟುನೂರಕ್ಕೂ ಅಧಿಕ ದೂರುಗಳು ರಾಷ್ಟ್ರೀಯ ಮಹಿಳಾ ಆಯೋಗ ಲಾಕ್ಡೌನ್ ಸಮಯದಲ್ಲಿ ಸ್ವೀಕರಿಸಿದೆ.
ಲಾಕ್ಡೌನ್ ಹಿನ್ನೆಲೆಯಲ್ಲಿ ದಂಪತಿಯ ನಡುವೆ ಸರಸ ಹೆಚ್ಚಾಗಿರುವ ವರದಿಯ ಬೆನ್ನಲ್ಲೇ ಕೌಟುಂಬಿಕ ದೌರ್ಜನ್ಯ ಸೇರಿದಂತೆ ಮಹಿಳೆಯರ ಮೇಲೆ ವಿವಿಧ ರೀತಿಯಲ್ಲಿ ಹಿಂಸೆ ಹೆಚ್ಚುತ್ತಿರುವ ಬಗ್ಗೆ ದೂರುಗಳು ಬಂದಿವೆ. ಸಾಮಾನ್ಯ ದಿನಗಳಿಗಿಂತ ಕೌಟುಂಬಿಕ ದೌರ್ಜನ್ಯಗಳ ಪ್ರಮಾಣ ಲಾಕ್ಡೌನ್ ಸಮಯದಲ್ಲಿ ಹೆಚ್ಚಾಗಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಹೇಳಿದ್ದಾರೆ.
ಲಾಕ್ಡೌನ್ ಶುರುವಾದಾಗಿನಿಂದಲೂ ದೌರ್ಜನ್ಯಗಳ ಪ್ರಮಾಣ ಹೆಚ್ಚುತ್ತಿರುವ ಬಗ್ಗೆ ವರದಿ ಬಂದ ಹಿನ್ನೆಲೆಯಲ್ಲಿ ಆಯೋಗವು ಇಂಥ ದೂರುಗಳನ್ನು ನೀಡಲು ವಾಟ್ಸ್ಆ್ಯಪ್ ಸಂಖ್ಯೆ 7217735372 ಪ್ರಾರಂಭಿಸಿದೆ. ಇದರ ಪ್ರಯೋಜನವನ್ನು ಹಲವಾರು ಸ್ತ್ರೀಯರು ಪಡೆದುಕೊಂಡಿದ್ದು, ತಮ್ಮ ಮೇಲಿನ ಹಿಂಸೆಯ ಕುರಿತಂತೆ ವರದಿ ಮಾಡಿದ್ದಾರೆ ಎಂದು ರೇಖಾ ತಿಳಿಸಿದ್ದಾರೆ.
ವಾಟ್ಸ್ಆ್ಯಪ್ನಲ್ಲಿ ಒಂದೇ ತಿಂಗಳಲ್ಲಿ 315 ದೂರುಗಳನ್ನು ಸ್ವೀಕರಿಸಲಾಗಿದೆ. ಇದರ ಹೊರತಾಗಿ ಲಾಕ್ಡೌನ್ ಅವಧಿಯ ಆರಂಭದಿಂದ 800ಕ್ಕೂ ಅಧಿಕ ದೂರುಗಳು ಬಂದಿವೆ. ಈ ಮುಂಚೆಯೂ ಪೋಸ್ಟ್ಗಳಲ್ಲಿ ದೂರುಗಳು ಬರುತ್ತಿದ್ದವು. ಆದರೀಗ ವಾಟ್ಸ್ಆ್ಯಪ್ ಸಂಖ್ಯೆ ನೀಡಿರುವ ಕಾರಣ, ಮಹಿಳೆಯರಿಗೆ ಅನುಕೂಲ ಆಗಿದೆ ಎಂದಿದ್ದಾರೆ.
ಅಪ್ರಾಪ್ತೆಯ ದೂರನ್ನು ಆಧರಿಸಿ ತಕ್ಷಣವೇ ಆಕೆಯ ಮನೆಗೆ ಹೋಗಿರುವ ಆಯೋಗದ ಸದಸ್ಯರು, ಬಾಲಕಿಯನ್ನು ಮನೆಯಿಂದ ಕರೆದುತಂದು ಆಶ್ರಯಮನೆಯಲ್ಲಿ ಇರಿಸಿದ್ದಾರೆ. ಅತ್ತಿಗೆಯಿಂದ ಹಿಂಸೆ ಅನುಭವಿಸುತ್ತಿರುವ ಪ್ರಕರಣ ಸೇರಿದಂತೆ ವರದಕ್ಷಿಣೆ ಕಿರುಕುಳು, ಅತ್ತೆ-ಮಾವನಿಂದ ದೈಹಿಕ ಹಿಂಸೆ ಇತ್ಯಾದಿ ಪ್ರಕರಣಗಳು ಹೆಚ್ಚಿಗೆ ಬಂದಿದ್ದು, ಬಹುತೇಕ ಪ್ರಕರಣಗಳಲ್ಲಿ ಪೊಲೀಸರ ಜತೆ ಚರ್ಚಿಸಿ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಈಗಾಗಲೇ ಹಲವಾರು ಮಂದಿಯ ಸಮಸ್ಯೆ ಪರಿಹಾರ ಮಾಡಲಾಗಿದೆ.
ಇದನ್ನು ಹೊರತುಪಡಿಸಿದರೆ, ಆನ್ಲೈನ್ ಮೂಲಕ ವಂಚನೆ ಹೋಗಿರುವ ದೂರುಗಳೂ ಆಯೋಗಕ್ಕೆ ಮಹಿಳೆಯರಿಂದ ಬಂದಿದೆ ಎಂಬ ಮಾಹಿತಿಯನ್ನು ಅಧ್ಯಕ್ಷೆ ನೀಡಿದ್ದಾರೆ. (ಏಜೆನ್ಸೀಸ್)