More

    ಆಟದಲ್ಲಿ ಸೋಲ್ತಾ ಇದ್ದೇನೆಂದು ಹೆಂಡ್ತಿ ಸೊಂಟ ಮುರಿಯೋದಾ? ಅಬ್ಬಬ್ಬಾ ಈ ಪತಿ ಮಹಾಶಯ!

    ವಡೋದರ (ಗುಜರಾತ್​): ಲಾಕ್​ಡೌನ್​ ಹಿನ್ನೆಲೆಯಲ್ಲಿ ಮನೆಯೊಳಕ್ಕೆ ಇರುವವರು ಟೈಂ ಪಾಸ್​ ಮಾಡಲು ಏನೇನೋ ಸರ್ಕಸ್​ ಮಾಡುತ್ತಿದ್ದಾರೆ. ಹೆಚ್ಚಿನವರು ಮೊರೆ ಹೋಗಿರುವುದು ವಿವಿಧ ತೆರನಾದ ಆಟಗಳಿಗೆ.

    ಗುಜರಾತ್​ ವಡೋದರದ ದಂಪತಿ ಕೂಡ ಮನೆಯಲ್ಲಿ ಬೋರ್​ ಆಗಿದ್ದರಿಂದ ಲುಡೊ ಆಟವಾಡುವ ಯೋಚನೆ ಮಾಡಿದರು. ಎಲೆಕ್ಟ್ರಾನಿಕ್‌ ಅಂಗಡಿಯೊಂದರಲ್ಲಿ ಕೆಲಸ ಮಾಡುವ ಗಂಡ ಮನೆಯೊಳಕ್ಕೆ ಇರಲಾಗದೇ ಹೊರಗಡೆ ಹೋಗುವುದನ್ನು ತಪ್ಪಿಸುವುದಕ್ಕೆ ಹೆಂಡತಿಗೆ ಈ ಆಟವೊಂದು ಅಸ್ತ್ರವಾಗಿತ್ತು. ಟ್ಯೂಷನ್​ ಮಾಡಿ ಸಂಪಾದನೆ ಮಾಡುತ್ತಿರುವ ಹೆಂಡತಿಗೂ ಈಗ ಲಾಕ್​ಡೌನ್​ ಹಿನ್ನೆಲೆಯಲ್ಲಿ ಕೆಲಸವಿಲ್ಲವಾಗಿತ್ತು.

    ಸರಿ, ಇಬ್ಬರೂ ಲುಡೋ ಆಡಲು ಕುಳಿದರು. ಜಾಣೆ ಪತ್ನಿ ಪ್ರತಿ ಬಾರಿಯೂ ಗೆದ್ದಿದ್ದಾಳೆ. ಇದು ಈ ಗಂಡನ ‘ಅಹಂ’ಗೆ ಪೆಟ್ಟು ಬಿದ್ದಿದೆ. ಒಂದು, ಎರಡು, ಮೂರು… ಹೀಗೆ ತಾನು ಗೆಲ್ಲುವ ತನಕ ಆಟ ಮುಂದುವರಿಸುವ ಯೋಚನೆ ಗಂಡ ಮಾಡಿದರೂ, ಅಷ್ಟೂ ಬಾರಿಯೂ ಹೆಂಡತಿಯೇ ಗೆಲ್ಲುತ್ತಿದ್ದಳು. ಪತಿರಾಯನ ಕೋಪ ನೆತ್ತಿಗೇರಿದೆ. ಸುಖಾ ಸುಮ್ಮನೆ ಹೆಂಡತಿಯ ಜತೆ ಕ್ಯಾತೆ ತೆಗೆದ. ಹೆಂಡತಿಯೂ ಪ್ರತ್ಯುತ್ತರ ನೀಡಿದಳು.

    ಅಷ್ಟೇ. ಇಬ್ಬರಿಗೂ ವಾದಕ್ಕೆ ಪ್ರತಿವಾದ, ಮಾತಿಗೆ ಮಾತು ಬೆಳೆದು ದೊಡ್ಡ ರಾದ್ಧಾಂತವೇ ನಡೆದು ಹೋಗಿದೆ. ಮೊದಲೇ ಸೋತ ಸಿಟ್ಟು, ಕೇಳಬೇಕೆ? ಅದೇ ಸಿಟ್ಟಿನಲ್ಲಿ ಹೆಂಡತಿಗೆ ಜೋರಾಗಿ ಗಂಡ ಒದ್ದಿದ್ದಾನೆ. ಈ ರಭಸಕ್ಕೆ ಬಿದ್ದ ಹೆಂಡತಿಯ ಮೂಳೆ ಮುರಿದು ಹೋಗಿದೆ! ಏಳಲಾಗದೇ ಆಕೆ ಒದ್ದಾಡತೊಡಗಿದಾಗ ಗಂಡ ಆಸ್ಪತ್ರೆಗೆ ಸೇರಿಸಿದ್ದಾನೆ.
    ಇದು ನಡೆದ ಕೆಲವು ದಿನಗಳು ಕಳೆದಿದೆ. ಸದ್ಯ ಪತ್ನಿ ಸ್ವಲ್ಪ ಹುಷಾರಾಗಿದ್ದಾಳೆ. ಆಸ್ಪತ್ರೆಯಿಂದ ಡಿಸ್​ಜಾರ್ಚ್​ ಆದ ಕೂಡಲೇ ಪೋಷಕರ ಮನೆಗೆ ಹೋಗಿದ್ದಾಳೆ.

    ದಂಪತಿಯ ನಡುವೆ ವಿರಸ ಮೂಡಿರುವ ಕಾರಣ, ಆಕೆಯ ತವರಿನವರು ಆಪ್ತ ಸಮಾಲೋಚಕರನ್ನು ಕರೆಸಿ ದಂಪತಿಯನ್ನು ಒಟ್ಟಿಗೇ ಕುಳ್ಳರಿಸಿ ಆಪ್ತ ಸಮಾಲೋಚನೆ ಮಾಡಿದ್ದಾರೆ. ಪತ್ನಿಯ ಗೆಲವು ಹಾಗೂ ಆಕೆಯ ಬುದ್ದಿವಂತಿಕೆ ಪತಿಯ ಸ್ವಾಭಿಮಾನಕ್ಕೆ ಘಾಸಿ ಉಂಟು ಮಾಡಿತ್ತು. ಅಷ್ಟೇ ಅಲ್ಲದೇ ,ಪತ್ನಿ ಟ್ಯೂಷನ್‌ ಮೂಲಕ ತನಗಿಂದ ಉತ್ತಮ ಹಣ ಸಂಪಾದನೆ ಮಾಡುತ್ತಿರುವುದರಿಂದ ಒಳಗೊಳಗೇ ಆತನ ಅಹಂಗೆ ಪೆಟ್ಟು ಬಿದ್ದಿತ್ತು. ಅದು ಈ ಮೂಲಕ ಹೊರಕ್ಕೆ ಬಂದಿದೆ ಎಂದಿದ್ದಾರೆ ಅಭಯಂ ಸಂಸ್ಥೆಯ ಸಲಹೆಗಾರರು.

    ಸಮಾಲೋಚನೆ ನಂತರ ಪತಿಗೆ ತನ್ನ ತಪ್ಪಿನ ಅರಿವಾಗಿದೆ. ಪತ್ನಿ ಕೂಡ ಯಾವುದೇ ದೂರು ನೀಡದ ಹಿನ್ನೆಲೆಯಲ್ಲಿ, ತಾವು ಇಬ್ಬರಿಗೂ ಬುದ್ಧಿ ಹೇಳಿ ಕಳುಹಿಸಿರುವುದಾಗಿ ಸಮಾಲೋಚಕರು ತಿಳಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts