ಲಾಕ್​ಡೌನ್​ ಕಾಲ ಮುಗೀತು, ಕರೊನಾ ಕಟ್ಟಿ ಹಾಕುತ್ತಾ ಕಂಟೇನ್​ಮೆಂಟ್​?

Containment
Published on

ನವದೆಹಲಿ: ಇಷ್ಟು ದಿನ ಲಾಕ್​ಡೌನ್​ ಆಯ್ತು, ಈಗ ನಡೀತಿರೋದು ಕಂಟೇನ್​ಮೆಂಟ್​ ಕಾಲ. ಲಾಕ್​ಡೌನ್​ ಮಾಡಿರದಿದ್ದರೆ, ಈ ವೇಳೆಗಾಗಲೇ ಭಾರತದಲ್ಲಿ ಸೋಂಕಿತರ ಸಂಖ್ಯೆ ಕೋಟಿ ಮುಟ್ಟುತ್ತಿತ್ತು ಎನ್ನುವುದು ಅಂಕಿ-ಅಂಶ ತಜ್ಞರ ಲೆಕ್ಕಾಚಾರ. ಸದ್ಯ ಭಾರತದಲ್ಲಿ ಕರೊನಾ ಪೀಡಿತರ ಸಂಖ್ಯೆ ಲಕ್ಷ ಸಮೀಪಿಸುತ್ತಿದೆ.

ಮೂರು ಹಂತಗಳ ಲಾಕ್​ಡೌನ್​ ಬಳಿಕವೂ ಕರೊನಾ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಲಾಕ್​ಡೌನ್​ ಮತ್ತದರ ನಿರ್ಬಂಧಗಳನ್ನು ಹಂತಹಂತವಾಗಿ ತೆರವುಗೊಳಿಸಿ ಅದರ ಜಾಗದಲ್ಲಿ ಕಂಟೇನ್​ಮೆಂಟ್​ ಅಸ್ತ್ರ ಪ್ರಯೋಗಿಸಲಾಗುತ್ತಿದೆ. ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತೆ ಎಂಬ ಬಗ್ಗೆ ತಜ್ಞರಿಗೂ ಖಾತ್ರಿಯಿಲ್ಲ. ಕಾರಣ, ಕರೊನಾ ವೈರಸ್​ ಸೋಂಕು ಮಾನವನಿಂದ ಮಾನವನಿಗೆ ಯಶಸ್ವಿಯಾಗಿ ವ್ಯಾಪಿಸುತ್ತಲೇ ಇದೆ. ಕಂಟೇನ್​ಮೆಂಟ್​ನಿಂದ ಇದನ್ನು ತಡೆಗಟ್ಟಬಹುದಾದರೂ, ಕಂಟೇನ್​ಮೆಂಟ್​ ನಿರ್ವಹಣಾ ಚಟುವಟಿಕೆಗಳ ಯಶಸ್ಸಿನ ಬಗ್ಗೆ ಖಾತ್ರಿ ನೀಡಲಾಗದು ಎಂದು ಅಂಕಿ-ಅಂಶ ತಜ್ಞರು ಕೇಂದ್ರ ಆರೋಗ್ಯ ಇಲಾಖೆಗೆ ವರದಿಯೊಂದನ್ನು ನೀಡಿದ್ದಾರೆ.

ಇದರನ್ವಯ ಹೆಚ್ಚು ಸೋಂಕಿತರಿರುವ ಅಥವಾ ವ್ಯಾಪಿಸಿರುವ ಪ್ರದೇಶಗಳಿಗಾಗಿ ಕಂಟೇನ್​ಮೆಂಟ್​ ಯೋಜನೆಯನ್ನು ಕೇಂದ್ರ ರೂಪಿಸಿದೆ. ಕ್ಲಸ್ಟರ್​ ಕಂಟೇನ್​ಮೆಂಟ್​ ವ್ಯವಸ್ಥೆಯಿಂದ ಸೋಂಕಿತರನ್ನು ಆರಂಭದಲ್ಲಿಯೇ ಪತ್ತೆ ಹಚ್ಚಿ ನಿಗದಿತ ಭೌಗೋಳಿಕ ಪ್ರದೇಶದಲ್ಲಿ ಸೋಂಕು ವ್ಯಾಪಿಸುವುದನ್ನು ತಡೆಗಟ್ಟಬಹುದು. ಆ ಮೂಲಕ ಸೋಂಕಿನ ಸರಣಿಯನ್ನು ತುಂಡರಿಸಬಹುದು.

ರಾಷ್ಟ್ರ ಮಟ್ಟದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಮಿತಿ (ಎನ್​ಸಿಎಂಸಿ) ಹಾಗೂ ಕಾರ್ಯದರ್ಶಿಗಳ ಸಮಿತಿ ಕಾರ್ಯ ನಿರ್ವಹಿಸಲಿದೆ. ಎನ್​ಸಿಎಂಸಿ ರಾಜ್ಯ ಸಮಿತಿಗಳೊಂದಿಗೆ ಸಂಪರ್ಕದಲ್ಲಿರಲಿದೆ. ಸಂಬಂಧಿಸಿದ ರಾಜ್ಯಗಳೊಂದಿಗೆ ವಿಡಿಯೋ ಕಾನ್ಫ್​ರೆನ್ಸ್​ ಮೂಲಕ ಕೇಂದ್ರ ಸತತ ಸಂಪರ್ಕದಲ್ಲಿರಲಿದೆ.

ಕಂಟೇನ್​ಮೆಂಟ್​ ಯೋಜನೆ ಪ್ರಕಾರ ಸೋಂಕು ಹೆಚ್ಚಿರುವ ಪ್ರದೇಶದಲ್ಲಿ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗುತ್ತದೆ. ಇಲ್ಲಿರುವ ಜನರು ಬೇರೆಯವರ ಸಂಪರ್ಕದಲ್ಲಿ ಬರುವುದನ್ನು ತಡೆಯಲಾಗುತ್ತದೆ. ವ್ಯಕ್ತಿಗತ ಅಂತರವನ್ನು ಕಾಪಾಡಿಕೊಳ್ಳಲು ತಿಳಿಸಲಾಗುತ್ತದೆ. ನಿರಂತರ ನಿಗಾ, ಶಂಕಿತರ ಪರೀಕ್ಷೆ, ಸೋಂಕಿತರ ಐಸೋಲೇಷನ್​, ಸಂಪರ್ಕಕ್ಕೆ ಬಂದಿರುವ ವ್ಯಕ್ತಿಗಳ ಕ್ವಾರಂಟೈನ್​ ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡಲಾಗುತ್ತದೆ ಎಂದು ಯೋಜನೆಯಲ್ಲಿ ವಿವರಿಸಲಾಗಿದೆ.

ಜಿಲ್ಲಾದ್ಯಂತ ಅಥವಾ ಎರಡು, ಮೂರು ಜಿಲ್ಲೆಗಳಿಗೆ ವ್ಯಾಪಿಸಿದಾಗಲೂ ಕಂಟೇನ್​ಮೆಂಟ್​ ಸಾಧ್ಯ ಎನ್ನುವುದನ್ನು ಚೀನಾದಲ್ಲಿ ತೆಗೆದುಕೊಂಡ ಕ್ರಮಗಳು ವಿವರಿಸುತ್ತವೆ. ಇದಕ್ಕೆ ಇತರ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಹಾಗೂ ಪರಿಣಾಮಕಾರಿಯಾಗಿ ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವ ಕ್ರಮಗಳು ಜತೆಗೂಡಬೇಕು ಎಂದು ಉಲ್ಲೇಖಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net