

ನವದೆಹಲಿ: ಲಾಕ್ಡೌನ್ ಘೋಷಣೆಯಾದ ತಿಂಗಳ ಬಳಿಕ ಕೇಂದ್ರ ಸರ್ಕಾರ ಶುಕ್ರವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಲಾಕ್ಡೌನ್ನಲ್ಲಿನ ನಿರ್ಬಂಧಗಳನ್ನು ಮತ್ತಷ್ಟು ತೆರವುಗೊಳಿಸಿದೆ. ಸಣ್ಣ ವ್ಯಾಪಾರಿಗಳು ಹಾಗೂ ಗ್ರಾಹಕರಿಗೆ ದೊಡ್ಡ ನಿರಾಳ ಸಿಕ್ಕಿದೆ. ಕ್ಷೌರಿಕರ ಅಂಗಡಿ, ಮದ್ಯದಂಗಡಿ ಹಾಗೂ ರೆಸ್ಟೋರೆಂಟ್ಗಳನ್ನು ಹೊರತುಪಡಿಸಿ ಜನವಸತಿ ಪ್ರದೇಶಗಳ ಸುತ್ತಮುತ್ತಲಿನ ಎಲ್ಲ ಅಂಗಡಿಗಳು, ವಸತಿ ಸಮುಚ್ಚಯಗಳಲ್ಲಿನ ಅಂಗಡಿಗಳನ್ನು ತೆರೆಯಲು ಷರತ್ತುಬದ್ಧ ಅನುಮತಿ ನೀಡಲಾಗಿದೆ.
ಈ ಪರಿಷ್ಕೃತ ವಿನಾಯಿತಿ ಕರೊನಾ ಹಾಟ್ಸ್ಟಾಟ್ಗಳಿಗೆ ಹಾಗೂ ಸೋಂಕು ಶಂಕಿತ ವಲಯಗಳಿಗೆ (ಕಂಟೈನ್ಮೆಂಟ್ ಝೋನ್) ಅನ್ವಯಿಸುವುದಿಲ್ಲ. ಜತೆಗೆ ಏಕ ಹಾಗೂ ಬಹು-ಬ್ರಾ್ಯಂಡ್ ಮಾಲ್ಗಳು, ಏಕ ಹಾಗೂ ಬಹು ಬ್ರಾ್ಯ್ರಡ್ಗಳ ಶಾಪಿಂಗ್ ಕಾಂಪ್ಲೆಕ್ಸ್ ಗಳಲ್ಲಿರುವ ಅಂಗಡಿಗಳಿಗೂ ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಜನವಸತಿ ಪ್ರದೇಶಗಳ ಬಳಿಯಲ್ಲಿ ಸರ್ಕಾರ ನಿರ್ಬಂಧ ವಿಧಿಸಿರುವ ಅಂಗಡಿಗಳನ್ನು ಬಿಟ್ಟು ಮಿಕ್ಕಂತೆ ಎಲ್ಲ ರೀತಿಯ ಅಂಗಡಿಗಳನ್ನು ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಅಳವಡಿಸಿಕೊಂಡು ತೆರೆಯಬಹುದು. ಆದರೆ, ಶೇ.50 ಸಿಬ್ಬಂದಿ ಮೂಲಕವೇ ಕಾರ್ಯ ನಿರ್ವಹಿಸಬೇಕು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಮಾಸ್ಕ್ ಧರಿಸುವಿಕೆ ಸೇರಿದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲೇಬೇಕು ಎಂದು ಸರ್ಕಾರ ಷರತ್ತು ವಿಧಿಸಿದೆ.
ರಾಜ್ಯಗಳಿಗೆ ಹೊಣೆ: ಕಠಿಣ ನಿರ್ಬಂಧಗಳನ್ನು ಉಳಿಸಿಕೊಳ್ಳುವ ಸಲುವಾಗಿ ಆಯಾ ರಾಜ್ಯ ಸರ್ಕಾರಗಳು ಸ್ವತಂತ್ರ ಮಾರ್ಗಸೂಚಿಗಳನ್ನು ರೂಪಿಸಬಹುದು. ಆದರೆ, ಕೇಂದ್ರ ವಿಧಿಸಿರುವ ನಿರ್ಬಂಧಗಳ ಆದೇಶವನ್ನು ದುರ್ಬಲಗೊಳಿಸುವಂತಿಲ್ಲ ಎಂದು ತಿಳಿಸಲಾಗಿದೆ. ಈಗಾಗಲೇ ಅಸ್ಸಾಂ ಮತ್ತು ದೆಹಲಿ ಸರ್ಕಾರಗಳು ಕೇಂದ್ರ ನೀಡಿರುವ ವಿನಾಯಿತಿಗಳನ್ನು ತಕ್ಷಣಕ್ಕೆ ಜಾರಿಗೆ ತರುವುದಿಲ್ಲ ಎಂದಿವೆ.
ಹಾಟ್ಸ್ಪಾಟ್ಗಳು ಹಾಗೂ ಸೋಂಕಿತ ವಲಯಗಳಲ್ಲಿ ಎಲ್ಲ ರೀತಿಯ ಚಟುಚಟಿಕೆಗಳ ಮೇಲಿನ ನಿರ್ಬಂಧ ಮುಂದುವರಿಯಲಿದೆ. ಅಗತ್ಯ ವಸ್ತುಗಳನ್ನು ಮನೆಮನೆಗಳಿಗೆ ತಲುಪಿಸುವ ವ್ಯವಸ್ಥೆ ಕೈಗೊಳ್ಳಲಾಗಿದೆ. ಚೆನ್ನೈನಲ್ಲೂ ಹಾಟ್ಸ್ಪಾಟ್ಗಳಿರುವ ಐದು ನಗರಗಳಲ್ಲಿ ತೀವ್ರ ನಿರ್ಬಂಧ ಘೋಷಿಸಲಾಗಿದ್ದು, ಇಲ್ಲಿ ಕೇಂದ್ರ ನೀಡಿರುವ ಅಗತ್ಯ ವಿನಾಯಿತಿಗಳಿಗೂ ನಿರ್ಬಂಧ ವಿಧಿಸಲಾಗಿದೆ.
ಫ್ಲಿಪ್ಕಾರ್ಟ್, ಅಮೆಜಾನ್ ಮುಂತಾದ ಇ-ಕಾಮರ್ಸ್ ಪ್ಲಾಟ್ಫಾರಂಗಳಲ್ಲಿ ಅತ್ಯವಶ್ಯಕ ವಸ್ತುಗಳನ್ನು ಮಾತ್ರ ಮಾರಾಟ ಮಾಡಬೇಕು, ಉಳಿದ ಎಲ್ಲ ರೀತಿಯ ವಸ್ತುಗಳ ಮೇಲಿನ ನಿರ್ಬಂಧ ಮೇ 3ರವರೆಗೂ ಜಾರಿಯಲ್ಲಿರುತ್ತದೆ ಎಂದು ಕೇಂದ್ರ ಸ್ಪಷ್ಟಪಡಿಸಿದೆ. ಎಲ್ಲ ರೀತಿಯ ಅಂಗಡಿಗಳನ್ನು ತೆರೆಯಲು ಸರ್ಕಾರ ಶುಕ್ರವಾರ ಮಧ್ಯರಾತ್ರಿ ಆದೇಶಿಸಿದ್ದ ಹಿನ್ನೆಲೆಯಲ್ಲಿ ಇ-ಕಾಮರ್ಸ್ ಕಂಪನಿಗಳಿಗೆ ಉಂಟಾಗಿದ್ದ ಗೊಂದಲಕ್ಕೆ ಸರ್ಕಾರ ಈ ಸ್ಪಷ್ಟನೆ ನೀಡಿದೆ.
ಕರೊನಾ ಪಸರಿಸುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಚಿತ್ರಮಂದಿರಗಳು, ಮಾಲ್ಗಳು, ಜಿಮ್ಳು, ಕ್ರೀಡಾ ಸಂಕೀರ್ಣಗಳು ಮತ್ತು ಈಜುಕೊಳಗಳು, ಕ್ಲಬ್ಗಳೂ ಕೂಡ ಮೇ 3 ರವರೆಗೂ ಕಾರ್ಯನಿರ್ವಹಿಸುವುದಿಲ್ಲ. ಗುಟ್ಕಾ ಪಾನ್ ಮಸಾಲಾ ಮಾರಾಟಕ್ಕೆ ಮುಂದಿನ ಆದೇಶದವರೆಗೆ ನಿಷೇಧವಿರುತ್ತದೆ .