ಕ್ವಾರಂಟೈನ್‌ಗೆ ಹೋಗಲ್ಲ ಅಂದ; ವಿಷ ಸೇವಿಸಿ ಆಸ್ಪತ್ರೆ ಪಾಲಾದ!

Poision 16 May 20
Published on

ಬಾಗಲಕೋಟೆ: ಜಿಲ್ಲೆಯ ಮುಧೋಳ ತಾಲೂಕಿನ ಲೋಕಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಚಿಕ್ಕೂರ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಕ್ವಾರಂಟೈನ್‌ಗೂ ಒಪ್ಪದೆ, ತನ್ನೂರಿಗೆ ಹೋಗುವುದಕ್ಕೂ ಹಿಂದೇಟು ಹಾಕಿ ಕೊನೆಗೆ ವಿಷ ಸೇವಿಸಿ ಆಸ್ಪತ್ರೆಯ ಪಾಲಾಗಿದ್ದಾನೆ.

40 ವಯಸ್ಸಿನ ವ್ಯಕ್ತಿಯೊಬ್ಬ ಮಹಾರಾಷ್ಟ್ರದ ರತ್ನಗಿರಿಯಿಂದ ಶುಕ್ರವಾರ ರಾತ್ರಿ ಚಿಕ್ಕೂರ ಗ್ರಾಮಕ್ಕೆ ಆಗಮಿಸಿದ್ದ. ಈ ವಿಷಯ ತಿಳಿದು ಶನಿವಾರ ಬೆಳಗ್ಗೆ ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಪಂ ಸಿಬ್ಬಂದಿ ಆತನಿಗೆ ಕ್ವಾರಂಟೈನ್‌ಗೆ ಒಳಗಾಗಬೇಕು ಎಂದು ಸೂಚಿಸಿದ್ದಾರೆ.

ಆತ ಕ್ವಾರಂಟೈನ್‌ಗೆ ಹೋಗಲು ನಿರಾಕರಿಸಿದಾಗ, ಮರಳಿ ಊರಿಗೆ ಹೋಗುವಂತೆ ಸೂಚಿಸಲಾಗಿತ್ತು ಎನ್ನಲಾಗಿದೆ. ಇದರಿಂದ ಆತಂಕಕ್ಕೆ ಒಳಗಾದ ಆತ ಗುಡಿಸಲಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ. ಕೂಡಲೇ ಆತನನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.

ಮೂಲತಃ ಯಾದಗಿರಿ ಜಿಲ್ಲೆಯ ಜುಮಲಾಪುರ ತಾಂಡಾದ ಈ ವ್ಯಕ್ತಿ ಚಿಕ್ಕೂರ ಗ್ರಾಮದಲ್ಲಿ ಜಮೀನು ಮಾಡಿಕೊಂಡಿದ್ದಾನೆ. ರತ್ನಗಿರಿಗೆ ತೆರಳಿದ್ದ ವ್ಯಕ್ತಿ ಅಲ್ಲಿಂದ ಚಿಕ್ಕೂರ ಗ್ರಾಮಕ್ಕೆ ಹೇಗೆ ಬಂದ ಎನ್ನುವುದನ್ನು ಸ್ಪಷ್ಟವಾಗಿ ಹೇಳಿಲ್ಲ. ಒಮ್ಮೆ ಕಾಲ್ನಡಿಗೆಯಲ್ಲಿ ಬಂದಿದ್ದಾಗಿ, ಮತ್ತೊಮ್ಮೆ ಲಾರಿ, ಬಸ್‌ನಲ್ಲಿ ಬಂದಿರುವುದಾಗಿ ಹೇಳುತ್ತಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net