ಲಾಕ್ ಡೌನ್ ಪರಿಣಾಮ: ಮದ್ಯ ಸಿಗದೆ ಮತ್ತೆ ಮೂವರ ಆತ್ಮಹತ್ಯೆ!

Alchol (FILEminimizer)
Published on

ಕರೊನಾ ಸೋಂಕು ತಗುಲಿ ಸತ್ತವರಿಗಿಂತ ಅದರ ನಿಯಂತ್ರಣಕ್ಕಾಗಿ ಮಾಡಿರುವ ಲಾಕ್ ಡೌನ್ ಪರಿಣಾಮವಾಗಿ ಸಾಯುತ್ತಿರುವವರ ಸಂಖ್ಯೆಯೇ ಜಾಸ್ತಿಯಾಗುತ್ತಿದೆ.

ರಾಜ್ಯದೆಲ್ಲೆಡೆ ಮದ್ಯದ ಅಂಗಡಿಗಳು ಹಲವು ದಿನಗಳಿಂದ ಬಂದ್ ಆಗಿದ್ದು, ಎಲ್ಲೆಡೆ ಮದ್ಯ ಮಾರಾಟ ಸ್ಥಗಿತವಾಗಿದೆ. ಲಾಕ್ ಡೌನ್ ಜಾರಿ ಆಗುವುದಕ್ಕಿಂತ ಮೊದಲು ಮನೆಗಳಲ್ಲಿ ಸಂಗ್ರಹಿಸಿಟ್ಟುಕೊಂಡಿದ್ದ ಮದ್ಯ ಸಹ ಖಾಲಿಯಾಗಿದೆ. ಹಾಗಾಗಿ ಕುಡಿಯುವುದಕ್ಕೆ ಮದ್ಯ ಸಿಗದೇ ಮತ್ತೆ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹರಪನಹಳ್ಳಿ ತಾಲೂಕಿನ ಗರ್ಭಗುಡಿ ತಾಂಡದಲ್ಲಿ ಪಾಲ್ಯಾ ನಾಯ್ಕ್ ಎಂಬಾತ ಬ್ರ್ಯಾಂಡಿ ಸಿಗುತ್ತಿಲ್ಲ ಎಂದು ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಾಂಡಾದಲ್ಲಿ ಮದ್ಯ ಮಾರಾಟ ಸಂಪೂರ್ಣ ನಿಷೇಧ ಮಾಡಲಾಗಿತ್ತು. ಇದರಿಂದ ನೊಂದ ಪಾಲ್ಯಾನಾಯ್ಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಇನ್ನೊಂದೆಡೆ, ಸಿರುಗುಪ್ಪ ತಾಲೂಕು ತೆಕ್ಕಲಕೋಟೆಯ ನಿವಾಸಿ ಶಶಿಧರ ಎಂಬಾತ ಕುಡಿಯಲು ಮದ್ಯ ಸಿಗದ ಹಿನ್ನೆಲೆಯಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿ ಬಳ್ಳಾರಿ ನಗರದ ಕನಕದುರ್ಗಮ್ಮ ದೇವಸ್ಥಾನ ಬಳಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತ ಮೂರು ದಿನಗಳಿಂದ ಎಲ್ಲ ಕಡೆ ಮದ್ಯಕ್ಕಾಗಿ ಅಲೆದಾಡಿದ್ದ. ಸಿಗದೇ ಇದ್ದುದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ. ಮನೆಯಲ್ಲಿ ಊಟ ಕೂಡ ಮಾಡುತ್ತಿರಲಿಲ್ಲ ಎಂದು ಸಂಬಂಧಿಕರು ತಿಳಿಸಿದ್ದಾರೆ.

ಮತ್ತೊಂದೆಡೆ, ಮೂಡಿಗೆರೆ ಪಟ್ಟಣದಲ್ಲಿ ಯೋಗೀಶ್‌ ಎಂಬಾತ ಬಾವಿಗೆ ಹಾರಿ ವ್ಯಕ್ತಿ ಮೃತಪಟ್ಟಿದ್ದಾನೆ. ಈತ ಹೋಟೆಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಮದ್ಯ ಸಿಗದಿದ್ದಕ್ಕೆ ತನ್ನ ಪರಿಚಿತರ ಬಳಿ ಬೇಸರ ತೋಡಿಕೊಂಡಿದ್ದ. ನಾಲ್ಕು ದಿನಗಳ ಹಿಂದೆಯೇ ಬಾವಿಗೆ ಹಾರಿರಬಹುದು ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net