

BBK12:ಪರಿಸರ ನಿಯಮ ಉಲ್ಲಂಘನೆ ಆರೋಪದಡಿ ಬಿಡದಿಯಲ್ಲಿರುವ ಜಾಲಿವುಡ್ ಸ್ಟುಡಿಯೋಸ್ನ ಬಿಗ್ ಬಾಸ್ ಮನೆಗೆ ಮಂಗಳವಾರ ಅಧಿಕಾರಿಗಳು ಬೀಗ ಜಡಿದಿದ್ದಾರೆ. ಕೆಲ ದಿನಗಳ ಹಿಂದೆ ಅಷ್ಟೇ ಆರಂಭಗೊಂಡಿದ್ದ ಬಿಗ್ ಬಾಸ್ ಕನ್ನಡ ಸೀಸನ್ 12 ರಿಯಾಲಿಟಿ ಶೋಗೆ ಇದೀಗ ದೊಡ್ಡ ಸಂಕಷ್ಟ ಎದುರಾಗಿದೆ. ಇದರೊಂದಿಗೆ ಪ್ರತಿಷ್ಠಿತ ಚಾನೆಲ್ವೊಂದರಲ್ಲಿ ಪ್ರಸಾರವಾಗುತ್ತಿದ್ದ ಬಿಗ್ಬಾಸ್ ರಿಯಾಲಿಟಿ ಶೋ ತಾತ್ಕಾಲಿಕವಾಗಿ ಬಂದ್ ಆಗಿದೆ.
ಇನ್ನೂ ಅಧಿಕಾರಿಗಳು ಬಿಗ್ಬಾಸ್ ಮನೆಗೆ ಬೀಗ ಮುದ್ರೆ ಹಾಕುತ್ತಿದ್ದಂತೆ ಮನೆಯ ಒಳಗಿದ್ದ ಸ್ಪರ್ಧಿಗಳು ಹಾಗೂ ಸಿಬ್ಬಂದಿ ಬಿಗ್ ಬಾಸ್ ಹೌಸ್ನ ಹಿಂಬದಿ ಗೇಟ್ನಿಂದ ಹೊರಬಂದಿದ್ದಾರೆ. ಈ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ನಿನ್ನೆಯೇ ಬಿಗ್ ಬಾಸ್ ಮನೆಯಲ್ಲಿದ್ದ 17 ಮಂದಿ ಸ್ಪರ್ಧಿಗಳನ್ನು ತಕ್ಷಣ ಈಗಲ್ ಟನ್ ದಿ ಗಾಲ್ಫ್ ವಿಲೇಜ್ ರೆಸಾರ್ಟ್‌ಗೆ ಸ್ಥಳಾಂತರಿಸಲಾಗಿದ್ದು, ಈ ರೀತಿ ಅರ್ಧಕ್ಕೆ ಸ್ಥಗಿತಗೊಳ್ಳುತ್ತಿರುವುದು ಎರಡನೇ ಬಾರಿಗೆ ಆಗಿದೆ. ಈ ಹಿಂದೆಯೂ 2021ರಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಶೋ ಸ್ಥಗಿತಗೊಂಡಿತ್ತು.
ಇಲ್ಲಿ ಸಾಕಷ್ಟು ಮನೋರಂಜನಾ ಕ್ರೀಡೆಗಳು ನಡೆಸುವ ಕಾರಣ, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.ತಹಸೀಲ್ದಾರ್ ಸೂಚನೆ ಮೇರೆಗೆ ಜಾಲಿವುಡ್ ಸ್ಟುಡಿಯೋ ಮ್ಯಾನೆಜ್ಮೆಂಟ್ ಸಂಜೆ 6ರೊಗಳಗೆ ಪ್ರವಾಸಿಗರನ್ನು ಮತ್ತೊಂದು ಗೇಟ್ ಮೂಲಕ ಹೊರ ಕಳುಹಸಿದರು. ಅಲ್ಲದೆ, ಸ್ಟುಡಿಯೋಗೆ ನೀರು ಮತ್ತು ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ಮಾಲಿನ್ಯ ನಿಯಂತ್ರಣ ಮಂಡಳಿ ಬಿಡದಿ ಪುರಸಭೆ ಹಾಗೂ ಬೆಸ್ಕಾಂಗೆ ಆದೇಶ ನೀಡಿದ್ದು, ಸ್ಟುಡಿಯೋಗೆ ಬೀಗ ಬಿದ್ದ ಕ್ಷಣಾರ್ಧದಲ್ಲೇ ಬೆಸ್ಕಾಂ ಸಿಬ್ಬಂದಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದರು. ಇದೀಗ ಮನೆಯಲ್ಲಿ ಸ್ಪರ್ಧಿಗಳ ಸದ್ದು ಇಲ್ಲ, ಸಂಪೂರ್ಣ ಶಾಂತತೆಯಿಂದ ಕೂಡಿದೆ.
ವೆಲ್ಸ್ ಸ್ಟುಡಿಯೋ ಸಂಸ್ಕರಿಸದ ತ್ಯಾಜ್ಯ ನೀರನ್ನು ಸರಿಯಾದ ಒಳಚರಂಡಿ ಹಾಗೂ ಸಂಸ್ಕರಣೆಯಿಲ್ಲದೆ ನೇರವಾಗಿ ಸಾರ್ವಜನಿಕ ಚರಂಡಿಗಳಿಗೆ ಬಿಡುತ್ತಿದೆ. ಈ ಕಾಯ್ದೆಯು 1974ರ ನೀರು (ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಕಾಯ್ದೆಯನ್ನು ಉಲ್ಲಂಘಿಸುತ್ತದೆ. ಸುಮಾರು 35 ಎಕರೆ ವಿಸ್ತೀರ್ಣದಲ್ಲಿರುವ ಈ ಸ್ಟುಡಿಯೋದಲ್ಲಿ ಬಳಕೆ ಮಾಡಿದ ನೀರನ್ನು ಶುದ್ಧಿಕರಣ ಮಾಡಿ ಮರುಬಳಕೆ ಮಾಡುತ್ತಿಲ್ಲ. ಅಗತ್ಯವಾದ ಒಪ್ಪಿಗೆ ಪಡೆಯದೆಯೇ ಪಡೆಯಲಾಗುತ್ತಿದೆ ಎಂದು ಮಂಡಳಿ ನೋಟಿಸ್ನಲ್ಲಿ ಉಲ್ಲೇಖಿಸಿದೆ. ಸಂಸ್ಥೆ ಹಲವು ನಿಯಮಗಳನ್ನು ಉಲ್ಲಂಘನೆ ಮಾಡಿರುವುದನ್ನು ಗಮನದಲ್ಲಿಟ್ಟುಕೊಂಡು ಎಲ್ಲ ಚಟುವಟಿಕೆಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಲ್ಲಿಸಲು ಹಾಗೂ ನಿಗದಿತ ಅವಧಿಯೊಳಗೆ ಕಚೇರಿಗೆ ವಿವರಣೆ ಸಲ್ಲಿಸಲು ಸೂಚಿಸಿದೆ.
ಇನ್ನು ಮ್ಯಾನೆಜ್ಮೆಂಟ್ ಆಯೋಜಕರು ಬಿಗ್ಬಾಸ್ ಮನೆ ಸೀಸ್ ತೆರವಿಗೆ ಇದಾಲೇ ಕೋರ್ಟ್ಗೆ ಮನವಿ ಸಲ್ಲಿಸಿದ್ದಾರೆ. ಒಂದು ವೇಳೆ ಕೂಡಲೇ ಅನುಮತಿ ಸಿಕ್ಕರೆ ಶೋ ನಡೆಸುವ ಚಿಂತನೆಯಲ್ಲಿದ್ದಾರೆ. ಅನುಮತಿ ದೊರೆಯದಿದ್ದರೆ ಮುಂದೇನು? ಎಂಬ ಆಲೋಚನೆಯಲ್ಲಿದ್ದು, ಶೋ ನಡೆಸಬೇಕಾ? ಅಥವಾ ಬೇಡ್ವಾ ಎಂದು ಇಂದು ಸಂಜೆಯೊಳಗೆ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ ಎಂದು ವರದಿ ಮೂಲಗಳು ತಿಳಿಸಿವೆ.