

Bigg Boss Kannada: ಕೆಲ ದಿನಗಳ ಹಿಂದೆ ಅಷ್ಟೇ ಆರಂಭಗೊಂಡಿದ್ದ ಬಿಗ್ ಬಾಸ್ ಕನ್ನಡ ಸೀಸನ್ 12 ರಿಯಾಲಿಟಿ ಶೋಗೆ ಸಂಕಷ್ಟ ಎದುರಾಗಿದೆ. ಕನ್ನಡದ ಬಿಗ್ ಬಾಸ್ 12ನೇ ಸೀಸನ್ ಆರಂಭಗೊಂಡು ಇನ್ನೂ ಒಂದು ವಾರ ಸಹ ಕಳೆದಿಲ್ಲ. ಅದಾಗಲೇ ಬಿಗ್ ಮನೆಗೆ ನೋಟಿಸ್ ನೀಡಿ ಅಧಿಕಾರಿಗಳಿಂದ ಬೀಗ ಬಿದ್ದಿದೆ. ಪರಿಸರ ನಿಯಮ ಉಲ್ಲಂಘನೆ ಆರೋಪದಡಿ ಬಿಡದಿಯಲ್ಲಿರುವ ಜಾಲಿವುಡ್ ಸ್ಟುಡಿಯೋಸ್ನ ಬಿಗ್ ಬಾಸ್ ಮನೆಗೆ ಇದೀಗ ಬೀಗ ಜಡಿಯಲಾಗಿದೆ. ಇನ್ನೂ ಅಧಿಕಾರಿಗಳು ಬೀಗ ಮುದ್ರೆ ಹಾಕುತ್ತಿದ್ದಂತೆ ಮನೆಯ ಒಳಗಿದ್ದ ಸ್ಪರ್ಧಿಗಳು ಹಾಗೂ ಸಿಬ್ಬಂದಿ ಬಿಗ್ ಬಾಸ್ ಹೌಸ್ನ ಹಿಂಬದಿ ಗೇಟ್ನಿಂದ ಹೊರಬಂದಿದ್ದಾರೆ.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಈ ಕಾರ್ಯಕ್ರಮವು ಪ್ರಸ್ತುತ ಎರಡನೇ ವಾರದಲ್ಲಿದ್ದು, ಅಷ್ಟರಲ್ಲೇ ಶೋಗೆ ವಿಘ್ನ ಎದುರಾಗಿದೆ. 19 ಸ್ಪರ್ಧಿಗಳು ಮನೆಯೊಳಗೆ ಪ್ರವೇಶಿಸಿದ್ದು, ಇಬ್ಬರು ಸ್ಪರ್ಧಿಗಳಿ ಎಲಿಮಿನೇಟ್ ಆಗಿದ್ದಾರೆ. ಈಗಾಗಲೇ ಈ ಶೋ ಕರ್ನಾಟಕದಾದ್ಯಂತ ಪ್ರೇಕ್ಷಕರನ್ನು ತನ್ನತ್ತ ಸೆಳೆದುಕೊಂಡಿದೆ. ಹೀಗಿರುವಾಗಿ ಈ ನೋಟಿಸ್ ಜಾರಿಯಾಗಿರುವುದು ಶೋ ರದ್ದಾಗುವ ಭೀತಿ ಆವರಿಸಿದೆ. ಸದ್ಯ ಈ ಶೋ ಮುಂದುವರಿಯುತ್ತದೆಯೇ? ಅಥವಾ ತಾತ್ಕಾಲಿಕವಾಗಿ ಸ್ಥಗಿತಗೊಳ್ಳುತ್ತದೆಯೇ? ಎಂಬ ಪ್ರಶ್ನೆಗಳು ಉದ್ಭವಿಸಿವೆ.
ಕೆಎಸ್ಪಿಸಿಬಿ ಪ್ರಕಾರ, ವೆಲ್ಸ್ ಸ್ಟುಡಿಯೋ ಸಂಸ್ಕರಿಸದ ತ್ಯಾಜ್ಯ ನೀರನ್ನು ಸರಿಯಾದ ಒಳಚರಂಡಿ ಹಾಗೂ ಸಂಸ್ಕರಣೆಯಿಲ್ಲದೆ ನೇರವಾಗಿ ಸಾರ್ವಜನಿಕ ಚರಂಡಿಗಳಿಗೆ ಬಿಡುತ್ತಿದೆ. ಈ ಕಾಯ್ದೆಯು 1974ರ ನೀರು (ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಕಾಯ್ದೆಯನ್ನು ಉಲ್ಲಂಘಿಸುತ್ತದೆ. ಇದರ ಪರಿಣಾಮವಾಗಿ, ಮಾಲಿನ್ಯ ಮಂಡಳಿಯು ಮುಂದಿನ ಸೂಚನೆ ನೀಡುವವರೆಗೂ ವೆಲ್ಸ್ ಸ್ಟುಡಿಯೋ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವಂತೆ ನಿರ್ದೇಶಿಸಿದೆ. ಈ ಸಂಬಂಧ ಕ್ರಮ ಕೈಗೊಳ್ಳಲು ರಾಮನಗರ ಜಿಲ್ಲೆಯ ಉಪ ಆಯುಕ್ತರಿಗೆ ಸೂಚಿಸಲಾಗಿದೆ. ಅಲ್ಲದೆ, ತಕ್ಷಣ ವಿದ್ಯುತ್ ಸರಬರಾಜು ಕಡಿತಗೊಳಿಸುವಂತೆ ಬೆಸ್ಕಾಂಗೆ ಸೂಚನೆ ನೀಡಲಾಗಿದೆ.
ಅಂದಹಾಗೆ, ಬಿಗ್ಬಾಸ್ ಸೆಟ್ ಅನ್ನು ರಾಮನಗರ ಜಿಲ್ಲೆಯ ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಈ ವರ್ಷ ಮಾರ್ಚ್ 19 ಮತ್ತು ಜೂನ್ 11 ರಂದು ಸ್ಥಳೀಯ ಅಧಿಕಾರಿಗಳು ಸ್ಥಳವನ್ನು ತಪಾಸಣೆ ನಡೆಸಿದ್ದರು. ಆದರೂ, ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಕಡ್ಡಾಯ ಅನುಮತಿ ಪಡೆಯಲು ಸ್ಟುಡಿಯೋ ವಿಫಲವಾಗಿದೆ ಎಂದು ವರದಿಗಳು ಸೂಚಿಸುತ್ತವೆ. ಮನೋರಂಜನಾ ಉದ್ಯಾನವನದ ಶೈಲಿಯ ಆವರಣದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ನೀರನ್ನು ಸಂಸ್ಕರಿಸದೆ ಹೊರಗಡೆ ಬಿಡುಗಡೆ ಮಾಡಲಾಗುತ್ತಿದೆ. ಇದು ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿದೆ ಎಂದು ಅಧಿಕಾರಿಗಳು ವರದಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ನೋಟಿಸ್ ಜಾರಿಯಾಗಿದೆ.