

ಬೆಂಗಳೂರು: ರಾಜ್ಯದಲ್ಲೂ ಕರೊನಾ ಸ್ಥಿತಿ ಕಳವಳಕಾರಿಯಾಗಿರುವ ಹಿನ್ನೆಲೆಯಲ್ಲಿ ಲಾಕ್ಡೌನ್ ವಿಸ್ತರಣೆ ಅನಿವಾರ್ಯತೆ ಹಾಗೂ ವಾಸ್ತವ ಚಿತ್ರಣವನ್ನು ಮೋದಿ ಎದುರು ತೆರೆದಿಡಲು ಸಿಎಂ ಯಡಿಯೂರಪ್ಪ ಅಣಿಯಾಗಿದ್ದಾರೆ. ಶನಿವಾರ ಬೆಳಗ್ಗೆ 11ಕ್ಕೆ ಆರಂಭವಾಗಲಿರುವ ವಿಡಿಯೋ ಕಾನ್ಪರೆನ್ಸ್ನಲ್ಲಿ ಸಿಎಂ ಯಡಿಯೂರಪ್ಪ ಜತೆಗೆ ಆರೋಗ್ಯ ಸಚಿವ ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್, ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಪಾಲ್ಗೊಳ್ಳಲಿದ್ದಾರೆ.
ಇದೇ ವೇಳೆ ಪ್ರಧಾನಿ ಬಯಸುವ ಮಾಹಿತಿ ಕಲೆಹಾಕಿರುವ ಸರ್ಕಾರ, ಶನಿವಾರ ಬೆಳಗ್ಗೆ ಒಂದು ಸುತ್ತು ಉನ್ನತಮಟ್ಟದ ಸಭೆ ನಡೆಸಿ ಅಭಿಪ್ರಾಯ ಅಂತಿಮಗೊಳಿಸಿಕೊಳ್ಳಲಿದೆ.
ರಾಜ್ಯದಲ್ಲಿ ಕರೊನಾ ಹರಡುತ್ತಿರುವ ಪ್ರಮಾಣ, ಜಿಲ್ಲಾವಾರು ತೀವ್ರತೆ, ಸೋಂಕು ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳು, ಚಿಕಿತ್ಸೆಗೆ ಸಂಬಂಧಿಸಿದಂತೆ ಕೈಗೊಂಡ ತಯಾರಿಗಳು, ಕೇಂದ್ರದ ಮುಂದೆ ಕೋರಿಕೆಗಳು ಇತ್ಯಾದಿ ವಿಚಾರಗಳು ಈ ಸಂವಾದದಲ್ಲಿ ಚರ್ಚೆಗೆ ಬರಲಿದೆ.
ಸೂಚನೆ ಪಾಲಿಸಿಲ್ಲ: ಲಾಕ್ ಡೌನ್ ವಿಚಾರದಲ್ಲಿ ಪ್ರಧಾನಿ ಮೋದಿ ರಾಜ್ಯಕ್ಕೆ ಮೂರು ಬಾರಿ ನೇರ ಎಚ್ಚರಿಕೆ ನೀಡಿದ್ದಾರೆ. ಲಾಕ್ಡೌನ್ ಪಾಲನೆ ನಿರೀಕ್ಷಿತವಾಗಿ ಆಗಿಲ್ಲ, ಜನರು ಒಡಾಡುತ್ತಲೇದ್ದಾರೆ. ಹೀಗಾದರೆ ಉದ್ದೇಶ ಪೂರ್ಣವಾಗಲ್ಲ ಎಂದು ಖಡಕ್ಕಾಗಿಯೇ ಹೇಳಿದ್ದಾರೆ.
ಎರಡು ಬಾರಿ ವಿಡಿಯೋ ಕಾನ್ಪರೆನ್ಸ್ ಮೂಲಕ ಎಚ್ಚರಿಸಿದರೆ, ಒಮ್ಮೆ ದೂರವಾಣಿ ಕರೆ ಮಾಡಿ ಸೂಚಿಸಿದ್ದರು. ಈ ನಡುವೆಯೂ ಸರ್ಕಾರ ಎಷ್ಟೇ ಪ್ರಯತ್ನ ನಡೆಸಿದರೂ ಜನರಿಂದ ಪೂರ್ಣ ಸಹಕಾರ ಸಿಕ್ಕಿಲ್ಲ. ಪರಿಸ್ಥಿತಿ ಗಂಭೀರತೆ ಅರ್ಥವಾಗಲಿಲ್ಲ. ಅಂಗಡಿಗೆ ಮುಗಿಬೀಳುವುದು ಈ ಕ್ಷಣದವರೆಗೂ ನಿಂತಿಲ್ಲ. ಇದೀಗ ಪ್ರಧಾನಿ ಮೋದಿಯವರು ನೀಡಿದ ಲಾಕ್ಡೌನ್ ಅವಧಿ ಮುಕ್ತಾಯಕ್ಕೆ ಮೂರು ದಿನ ಬಾಕಿ ಇದೆ. ಕೇಂದ್ರದಿಂದ ಬಂದಿರುವ ಸೂಚನೆಗಳನ್ನು ಪಾಲನೆ ಮಾಡುವಲ್ಲಿ ರಾಜ್ಯ ಹಿಂದೆ ಬಿದ್ದಿಲ್ಲ. ಶೇ.100ರಷ್ಟಲ್ಲದಿದ್ದರೂ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಎಚ್ಚರ ವಹಿಸಲಾಗಿದೆ. ಹೀಗಿರುವಾಗ ಪ್ರಧಾನಿ ಮೋದಿ ಮುಂದೆ ಯಾವ ರೀತಿ ಅಭಿಪ್ರಾಯ ಹೊಂದಿದ್ದಾರೆಂಬ ಕುತೂಹಲವೂ ರಾಜ್ಯ ಸರ್ಕಾರಕ್ಕಿದೆ.
ರಾಜ್ಯದ ನಿರೀಕ್ಷೆ
1. ಲಾಕ್ಡೌನ್ ವಿಚಾರವಾಗಿ ನಿರ್ಧಾರ ಕೈಗೊಳ್ಳುವ ಹೊಣೆಯನ್ನು ರಾಜ್ಯಗಳ ತೀರ್ವನಕ್ಕೆ ಬಿಡಬಹುದು.
2. ಆರ್ಥಿಕ ಪರಿಸ್ಥಿತಿ ಕಾರಣಕ್ಕೆ ಲಾಕ್ಡೌನ್ ಭಾಗಶಃಗೊಳಿಸಲು ಸೂಚಿಸಬಹುದು. ಸೋಂಕಿರುವ ಕಡೆ ಕ್ಲಸ್ಟರ್ ಮಟ್ಟದಲ್ಲಿ ಇನ್ನಷ್ಟು ಬಿಗಿಗೊಳಿಸಬಹುದು.
3. ಸೋಂಕಿರುವ ಜಿಲ್ಲೆಗಳಲ್ಲಷ್ಟೇ ಲಾಕ್ಡೌನ್ ಮುಂದುವರಿಸಲು ಸೂಚಿಸಬಹುದು. ದಿನಸಿ, ಆಹಾರ ಕೊರತೆಯಾಗದಂತೆ ನೆಟ್ವರ್ಕ್ ಬಲಗೊಳಿಸಲು ಸಲಹೆ ನೀಡಬಹುದು.
ತಯಾರಿ ಏನೇನು?
* ಡಾ.ದೇವಿ ಶೆಟ್ಟಿ ನೇತೃತ್ವದ ಟಾಸ್ಕ್ ಫೋರ್ಸ್ನ ವರದಿ ಪ್ರಸ್ತಾಪ
* ಸಚಿವ ಸಂಪುಟ ಸದಸ್ಯರ ಅಭಿಪ್ರಾಯ ಸಂಗ್ರಹ
* ಪ್ರತಿಪಕ್ಷದವರಿಂದಲೂ ಸಲಹೆ ಸ್ವೀಕಾರ
* ಆರೋಗ್ಯ ಇಲಾಖೆಯಿಂದ ಆರೋಗ್ಯ ಸ್ಥಿತಿ ಬಗ್ಗೆ ವಿವರಣೆ