ಲಾಕ್​ಡೌನ್ ಎಫೆಕ್ಟ್- ಮನೆಯಲ್ಲಿ ಗಂಡ-ಹೆಂಡಿರ ಕಿರಿಕ್; ಮಾನಸಿಕ ಖಿನ್ನತೆಗೆ ಒಳಗಾಗಿ ದೌರ್ಜನ್ಯ

Lockdown
Published on

| ಅವಿನಾಶ ಮೂಡಂಬಿಕಾನ ಬೆಂಗಳೂರು

ರಾಜ್ಯದಲ್ಲಿ ಲಾಕ್​ಡೌನ್ ಜಾರಿಗೊಂಡ ಬಳಿಕ ಪತಿ-ಪತ್ನಿ ಕಲಹ ಪ್ರಕರಣಗಳು ಅಧಿಕಗೊಂಡಿದ್ದು, ತಿಂಗಳಿಂದೀಚೆಗೆ 25ಕ್ಕೂ ಅಧಿಕ ಪ್ರಕರಣಗಳು ರಾಜ್ಯ ಮಹಿಳಾ ಆಯೋಗದ ಮೆಟ್ಟಿಲೇರಿವೆ. ಕೆಲಸವಿಲ್ಲದೆ ಮನೆಯಲ್ಲೇ ಉಳಿದಿರುವ ಕೆಲ ಗಂಡಂದಿರು ಮಾನಸಿಕ ಖಿನ್ನತೆಗೆ ಒಳಗಾಗಿ ಪತ್ನಿಯರ ಮೇಲೆ ಸುಖಾ ಸುಮ್ಮನೆ ಹಲ್ಲೆ ನಡೆಸುತ್ತಿದ್ದಾರೆ. ಇತ್ತ ಪುರುಷರಿಗಿಂತ ಕಮ್ಮಿ ಇಲ್ಲ ಎಂಬಂತೆ ಪತ್ನಿಯರ ಕಿರುಕುಳದ ಬಗ್ಗೆಯೂ ದೂರುಗಳು ಬರುತ್ತಿವೆ. ಇದನ್ನು ಬಗೆಹರಿಸುವುದೇ ದೊಡ್ಡ ತಲೆನೋವಾಗಿದೆ.

ತವರಿಗೆ ಹೋಗಲು ಲಾಕ್​ಡೌನ್ ತಡೆ: ಹೈಕೋರ್ಟ್​ನಲ್ಲಿ ಗುಮಾಸ್ತನಾಗಿ ಸೇವೆ ಸಲ್ಲಿಸುತ್ತಿರುವ ಕೆ.ಆರ್.ಪುರ ನಿವಾಸಿಯೊಬ್ಬ 11 ವರ್ಷಗಳ ಹಿಂದೆ ವಿವಾಹವಾಗಿದ್ದು, ದಂಪತಿಗೆ 8 ವರ್ಷದ ಮಗನಿದ್ದಾನೆ. ಈತ ರಜೆಯಿದ್ದಾಗಲೆಲ್ಲ ಪತ್ನಿ ಮೇಲೆ ಹಲ್ಲೆ ನಡೆಸುತ್ತಿದ್ದ. ವಾರದಲ್ಲಿ ಒಂದು ದಿನ ಹೇಗೋ ಕಿರುಕುಳ ಸಹಿಸಿಕೊಂಡು, ಜೀವನ ಸಾಗಿಸುತ್ತಿದ್ದಳು. ಗುಮಾಸ್ತನಿಗೆ ದೀರ್ಘ ರಜೆ ಸಿಕ್ಕಿದರೆ ಕೂಡಲೇ ಪತ್ನಿ ತವರು ಮನೆ ಸೇರುತ್ತಿದ್ದಳು. ಇದೀಗ ಲಾಕ್​ಡೌನ್ ಪರಿಣಾಮ ಗುಮಾಸ್ತನಿಗೆ ದೀರ್ಘ ಕಾಲದ ರಜೆ ಸಿಕ್ಕಿದ್ದು, ಅನಗತ್ಯವಾಗಿ ಪತ್ನಿ ಮೇಲೆ ದೌರ್ಜನ್ಯ ಎಸಗುತ್ತಿದ್ದ. ತವರು ಮನೆಗೆ ಹೋಗಲು ಪತ್ನಿಗೆ ಲಾಕ್​ಡೌನ್ ಅಡ್ಡಿಯಾಗಿದೆ. ದಿನದಿಂದ ದಿನಕ್ಕೆ ಪತಿಯ ಕಿರುಕುಳ ಹೆಚ್ಚಾಗುತ್ತಿದ್ದ ಪರಿಣಾಮ ನೊಂದ ಪತ್ನಿ ಕೊನೆಗೆ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾಳೆ. ಮಹಿಳಾ ಆಯೋಗದ ಸಿಬ್ಬಂದಿ ಕೂಡಲೇ ಗುಮಾಸ್ತನಿಗೆ ಕರೆ ಮಾಡಿ ಎಚ್ಚರಿಕೆ ನೀಡಿದ್ದಾರೆ.

ವರದಕ್ಷಿಣೆ ಕಿರುಕುಳ

ಕೆಂಗೇರಿ ನಿವಾಸಿ ಖಾಸಗಿ ಕಂಪನಿ ಮಹಿಳಾ ಉದ್ಯೋಗಿಗೆ ಲಾಕ್​ಡೌನ್ ಹಿನ್ನೆಲೆಯಲ್ಲಿ ಕಚೇರಿಗೆ ರಜೆ ದೊರೆತಿದ್ದು, ಮನೆಯಲ್ಲೇ ಇರುವ ಹಿನ್ನೆಲೆಯಲ್ಲಿ ಪತಿ, ಅತ್ತೆ-ಮಾವ ವರದಕ್ಷಿಣೆ ಕಿರುಕುಳ ನೀಡಲು ಆರಂಭಿಸಿದ್ದಾರೆ. ಮನೆಯಿಂದ ಹೊರ ಹೋಗಲು ಸಾಧ್ಯವಾಗದೇ ಮಹಿಳಾ ಆಯೋಗಕ್ಕೆ ಕರೆ ಮಾಡಿ ದೂರು ನೀಡಿರುವ ಸಂತ್ರಸ್ತೆ, ಇದುವರೆಗೆ ಇಲ್ಲದ ವರದಕ್ಷಿಣೆ ಸಮಸ್ಯೆ ಲಾಕ್​ಡೌನ್ ನಂತರ ಆರಂಭವಾಗಿದೆ ಎಂದು ಹೇಳಿಕೊಂಡಿದ್ದಾಳೆ.

ಲಾಕ್​ಡೌನ್​ನಿಂದ ಮನೆಯಲ್ಲೇ ಇರುವ ಪತಿಯಿಂದ ಪತ್ನಿಯ ಮೇಲೆ ನಡೆಯುತ್ತಿರುವ ದೌರ್ಜನ್ಯ ಹೆಚ್ಚುತ್ತಲೆಯಿದೆ. ಇತ್ತೀಚೆಗೆ ಮಹಿಳಾ ಆಯೋಗಕ್ಕೆ ಬರುವ ಹೆಚ್ಚಿನ ಪ್ರಕರಣಗಳು ಇಂತಹವುಗಳೇ ಆಗಿವೆ. | ಪ್ರಮೀಳಾ ನಾಯ್ಡು, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪತಿ-ಪತ್ನಿಯರ ನಡುವಿನ ಜಗಳದಿಂದ ಮಕ್ಕಳಿಗೆ ತೊಂದರೆಯಾಗುತ್ತಿದೆ. ದೂರವಾಣಿ ಮೂಲಕವೇ ಹೆಚ್ಚಿನ ಪ್ರಕರಣ ಬಗೆಹರಿಸಲು ಪ್ರಯತ್ನಿಸುತ್ತಿದ್ದೇವೆ. | ಉಷಾ ಕಾಮತ್, ಮಹಿಳಾ ದಕ್ಉಷತಾ ಸಮಿತಿ ಪಾಧ್ಯಕ್ಷೆ,

ಆಶಾ ಕಾರ್ಯಕರ್ತೆಗೆ ಪೀಡನೆ

ಬಾಗಲೂರಿನ ಆಶಾ ಕಾರ್ಯಕರ್ತೆಯೊಬ್ಬರು ಕೆಲ ವರ್ಷಗಳ ಹಿಂದೆ ಕ್ಯಾಬ್ ಚಾಲಕನನ್ನು ವಿವಾಹವಾಗಿದ್ದರು. ಆತ ಮದ್ಯವ್ಯಸನಿ. ಮದ್ಯ ಖರೀದಿಸಲು ಆಗದಿದ್ದರೆ ಪತ್ನಿ ಮೇಲೆ ಹಲ್ಲೆ ನಡೆಸಿ ಹಣ ಕೊಡುವಂತೆ ಪೀಡಿಸುತ್ತಿದ್ದ. ಲಾಕ್​ಡೌನ್ ಘೋಷಣೆಯಾದ ಬಳಿಕ ಬಾರ್​ಗಳು ಬಂದ್ ಆಗಿದ್ದು, ಹಣವಿದ್ದರೂ ಮದ್ಯ ಸಿಗುತ್ತಿಲ್ಲ. ಇದೀಗ ಕೆಲಸಕ್ಕೂ ಹೋಗಲಾಗದೇ ಮನೆಯಲ್ಲೇ ಇರುವ ಪತಿ ಮದ್ಯ ಕೊಡುವಂತೆ ಆಶಾ ಕಾರ್ಯಕರ್ತೆಗೆ ಪೀಡಿಸುತ್ತಿದ್ದು, ಹಲ್ಲೆ ನಡೆಸಿ ದೌರ್ಜನ್ಯ ಎಸಗುತ್ತಿದ್ದ. ಪತಿಯ ಕಿರುಕುಳ ತಾಳಲಾರದೇ ಪರಿಚಿತರ ಸೂಚನೆ ಮೇರೆಗೆ ವಿದ್ಯಾರಣ್ಯಪುರದಲ್ಲಿರುವ ಮಹಿಳಾ ದಕ್ಷತಾ ಸಮಿತಿ ಸಹಾಯವಾಣಿಗೆ ಕರೆ ಮಾಡಿ ತನ್ನ ಅಳಲನ್ನು ಹೇಳಿಕೊಂಡಿದ್ದಳು.

ಸಮಸ್ಯೆ ಪರಿಹಾರಕ್ಕೆ ಲಾಕ್​ಡೌನ್ ಅಡ್ಡಿ

ಲಾಕ್​ಡೌನ್​ನಿಂದ ಮಹಿಳಾ ಆಯೋಗಕ್ಕೆ ಬರುವ ಪ್ರಕರಣಗಳಲ್ಲಿ ಭಾರಿ ಏರಿಕೆ ಕಂಡು ಬಂದಿದೆ. ಆದರೆ ಲಾಕ್​ಡೌನ್ ಜಾರಿಯಲ್ಲಿರುವ ಕಾರಣ ಆರೋಪಿಗಳ ವಿಚಾರಣೆ ಮಾಡಲಾಗುತ್ತಿಲ್ಲ. ಫೋನ್ ಮೂಲಕ ಇಂತಹ ಪ್ರಕರಣಗಳಿಗೆ ಅಂತ್ಯ ಹಾಡಲು ಸಾಧ್ಯವಾಗುತ್ತಿಲ್ಲ. ಲಾಕ್​ಡೌನ್ ಮುಗಿದ ಬಳಿಕವೇ ಸಮಸ್ಯೆ ಬಗೆಹರಿಯಲಿದೆ. ‘ಇವು ಬೆಳಕಿಗೆ ಬಂದಿರುವ ಪ್ರಕರಣಗಳಷ್ಟೆ. ಮಾಹಿತಿ ಕೊರತೆಯಿಂದ ಬೆಳಕಿಗೆ ಬಾರದ ಪ್ರಕರಣಗಳೂ ಸಾಕಷ್ಟಿವೆ’ ಎನ್ನುತ್ತಾರೆ ಮಹಿಳಾ ಆಯೋಗದ ಸಿಬ್ಬಂದಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net