ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಹತ್ಯೆ; ಪೊಲೀಸರ ವಿರುದ್ಧ ಪ್ರತಿಭಟಿಸಿದ ನಾಗರಿಕರು

New Project (5)
Published on

ಕೊಲ್ಕತಾ: ಏಳು ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಆಕೆಯನ್ನ ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ಸ್ಥಳೀಯರು ರಸ್ತೆ ತಡೆ ನಡೆಸಿದ್ದಾರೆ. ಈ ವೇಳೆ ಪೊಲೀಸರ ವಾಹನಗಳನ್ನ ಜಖಂಗೊಳಿಸಿರುವ ಘಟನೆ ಪಶ್ಚಿಮ ಬಂಗಾಳದ ರಾಜಧಾನಿ ಕೊಲ್ಕತಾದ ತಿಲಜಾಲ ಪ್ರದೇಶದಲ್ಲಿ ನಡೆದಿದೆ.

ಮೃತ ಬಾಲಕಿಯೂ ಭಾನುವಾರ ಬೆಳ್ಳಗೆಯಿಂದ ಕಾಣೆಯಾಗಿದ್ದಳು ಎಂದು ತಿಳಿದು ಬಂದಿದೆ. ಪೊಲೀಸರು ವ್ಯಾಪಕವಾಗಿ ಹುಡುಕಾಟ ನಡೆಸಿದ ನಂತರ ಕುಸ್ತಿಯಾದ ಶ್ರೀಧರ್​ ರಾಯ್​ ಪ್ರದೇಶದಲ್ಲಿರುವ ಅಪಾರ್ಟ್​​ಮೆಂಟ್​ ಒಂದರಲ್ಲಿ ಬಾಲಕಿಯ ಶವ ದೊರೆತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಘಟನೆ ಸಂಬಂಧ ಅಪಾರ್ಟ್​​ಮೆಂಟ್​ ಮಾಲೀಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು ಬಾಲಕಿಯ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಕಾಣೆಯಾದ ಬಾಲಕಿಯನ್ನು ಹುಡುಕಿ ಕೊಡುವಲ್ಲಿ ಪೊಲೀಸರು ತಡ ಮಾಡಿದ್ಧಾರೆ ಎಂದು ಆರೋಪಿಸಿ ಸ್ಥಳೀಯರು ತಿಲಜಾಲ ಪೊಲೀಸ್​ ಠಾಣೆ ಎದುರು ಪ್ರತಿಭಟನೆ ನಡೆಸಿ ಠಾಣೆ ಮುಂದೆ ನಿಲ್ಲಿಸಲಾಗಿದ್ದ ವಾಹನಗಳನ್ನು ಜಖಂ ಮಾಡಿದ್ದಾರೆ.

ಪೊಲೀಸ್​ ಠಾಣೆ ಮುಂದೆ ದಾಂಧಲೆ ಮಾಡಿದ ಆರೋಪದ ಮೇಲೆ ಪೊಲೀಸರು ಓರ್ವ ಮಹಿಳೆ ಸೇರಿದಂತೆ ಮೂವರನ್ನು ವಶಕ್ಕೆ ಪಡೆದಿದ್ದಾರೆ. ಇವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಸ್ಥಳೀಯರು ರಸ್ತೆ-ರೈಲು ತಡೆದು ಪ್ರತಿಭಟಿಸಿದ್ದಾರೆ.

ಘಟನೆಯಲ್ಲಿ ಮೂರು ಪೊಲೀಸ್​ ವಾಹನಗಳು ಜಖಂಡಗೊಂಡಿದ್ದು ಒಂದನ್ನು ಸುಟ್ಟು ಹಾಕಲಾಗಿದೆ. ಗುಂಪನ್ನು ಚದುರಿಸಲು ಬಂದ ಭದ್ರತಾ ಪಡೆಗಳ ಮೇಲೆ ಸ್ಥಳೀಯರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net