ಸ್ಥಳೀಯರು ಕಡಿಮೆ ಪ್ರಮಾಣದಲ್ಲಿ ಕಾಫಿ ಸೇವನೆ

Coofee dinacharane handli.
ಶನಿವಾರಸಂತೆಯ ಹಂಡ್ಲಿಯಲ್ಲಿ ಬುಧವಾರ ಆಯೋಜಿಸಿದ್ದ ಅಂತಾರಾಷ್ಟಿಯ ಕಾಫಿ ದಿನಾಚರಣೆಯಲ್ಲಿ ಕಾಫಿ ವಿತರಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಯಿತು.
Published on

ಶನಿವಾರಸಂತೆ: ಭಾರತದದಲ್ಲಿ ಬೆಳೆಯುತ್ತಿರುವ ಉತ್ಕೃಷ್ಟ ಗುಣಮಟ್ಟದ ಕಾಫಿ ಶೇ.70 ರಷ್ಟು ಕಾಫಿ ಉತ್ಪನ್ನ ವಿದೇಶಕ್ಕೆ ರಫ್ತಾಗುತ್ತಿದ್ದರೂ ಸ್ಥಳೀಯ ಮಟ್ಟದಲ್ಲಿ ಜನರು ಕಡಿಮೆ ಪ್ರಮಾಣದಲ್ಲಿ ಕಾಫಿಯನ್ನು ಸೇವಿಸುತ್ತಿರುವುದು ಕಳವಳಕಾರಿಯಾಗಿದೆ ಎಂದು ಶನಿವಾರಸಂತೆ ಹೋಬಳಿ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಎಸ್.ಎಂ.ಉಮಾಶಂಕರ್ ಅಭಿಪ್ರಾಯಪಟ್ಟರು.

ಹಂಡ್ಲಿ ಕಾಫಿ ಬೆಳೆಗಾರರ ಸಂಘ ಹಾಗೂ ಶನಿವಾರಸಂತೆ ಕಾಫಿ ಬೆಳೆಗಾರರ ಸಂಘದ ಸಹಯೋಗದಲ್ಲಿ ಹಂಡ್ಲಿ ಕಾಫಿ ಬೆಳೆಗಾರರ ಸಂಘದ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟ್ರೀಯ ಕಾಫಿ ದಿನಾಚರಣೆ ಕಾರ್ಯಕ್ರಮ ಮತ್ತು ಹಂಡ್ಲಿ ಕಾಫಿ ಬೆಳೆಗಾರರ ಸಂಘದ ನೂತನ ಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಾರತದಲ್ಲಿ ಉತ್ಕೃಷ್ಟ ಗುಣಮಟ್ಟದ ಕಾಫಿ ಬೆಳೆಯುತ್ತಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕಾಫಿಗೆ ಹೆಚ್ಚಿನ ಬೇಡಿಕೆ ಇದೆ. ಆದರೆ ಕಾಫಿ ಬೆಳೆಯುತ್ತಿರುವ ಕಡೆಗಳಲ್ಲಿ ಕಾಫಿ ಸೇವಿಸುವುದು ಕಡಿಮೆಯಾಗುತ್ತಿದೆ. ಈ ನಿಟ್ಟಿನಲ್ಲಿ ಕಾಫಿ ಬೆಳೆಗಾರರು ಜನರು ಕಾಫಿಯನ್ನು ಸೇವಿಸುವಂತೆ ಪ್ರಚಾರದ ಮೂಲಕ ಜಾಗೃತಿ ಮೂಡಿಸಬೇಕಿದೆ. ಈ ಮೂಲಕ ಸ್ಥಳೀಯ ಜನರು ಕಾಫಿಯನ್ನು ಸೇವಿಸುತ್ತಾರೆ. ಜನರು ಕಾಫಿಯನ್ನು ಆರೋಗ್ಯಕರವಾದ ಪೇಯವಾಗಿ ಸೇವಿಸುವುದರಿಂದ ಕಾಫಿ ಮಾರುಕಟ್ಟೆ ಬೃಹತ್ ಉದ್ದಿಮೆಯಾಗಿ ಬೆಳೆಯುತ್ತದೆ. ಅದೇ ರೀತಿಯಲ್ಲಿ ಬೆಳೆಗಾರರು ಗುಣಮಟ್ಟದ ಕಾಫಿಯನ್ನು ಬೆಳೆಯಬೇಕು ಎಂದು ಕಿವಿಮಾತು ಹೇಳಿದರು.

ಹಂಡ್ಲಿ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಚಿದಾನಂದ್ ಮಾತನಾಡಿ, ಭಾರತೀಯ ಕಾಫಿ ಮಂಡಳಿಯು ಉತ್ತಮ ಗುಣಮಟ್ಟದ ಕಾಫಿಯನ್ನು ಬೆಳೆಯುವಂತೆ ಬೆಳೆಗಾರರನ್ನು ಪ್ರೋತ್ಸಾಹಿಸುತ್ತಿದೆ. ಈ ನಿಟ್ಟನಲ್ಲಿ ಬೆಳೆಗಾರರು ಗಣಮಟ್ಟದ ಕಾಫಿಯನ್ನು ಬೆಳೆದು ಕಾಫಿ ಮಾರುಕಟ್ಟೆಯನ್ನು ಬೆಳೆಸಬೇಕು. ಅಂತಾರಾಷ್ಟ್ರೀಯ ಕಾಫಿ ದಿನವನ್ನು ಬೆಳೆಗಾರರು ಕಾಫಿ ಉತ್ಸವವನ್ನಾಗಿ ಆಚರಿಸುವ ಮೂಲಕ ಕಾಫಿ ಬೆಳೆಯ ಮಹತ್ವದ ಬಗ್ಗೆ ಗ್ರಾಹಕರನ್ನು ಮತ್ತು ರೈತರನ್ನು ಜಾಗೃತಿಗೊಳಿಸುವಂತೆ ಮನವಿ ಮಾಡಿದರು. ಈ ದಿನ ನಾವು ಬೇರೆ ಬೇರೆ ಭಾಗದಿಂದ ಬರುವ ಪ್ರವಾಸಿಗರಿಗೆ ಹಾಗೂ ಇತರ ಎಲ್ಲ ವಾಹನ ಸವಾರರಿಗೆ ಕಾಫಿ ನೀಡಿ ಅದರ ಮಹತ್ವವನ್ನು ಮನವರಿಕೆ ಮಾಡಿಕೊಡಲಾಗಿದೆ. ನಮ್ಮ ಕಾಫಿಗೆ ಮುಂದಿನ ದಿನದಲ್ಲಿ ಹೆಚ್ಚು ಬೇಡಿಕೆ ಬರಲಿದೆ. ನಾವು ಗುಣಮಟ್ಟದ ಕಾಫಿ ಬೆಳೆ ಬೆಳೆಯಲು ಪ್ರಯತ್ನ ಪಡಬೇಕು ಎಂದರು.

ಕಾಫಿ ಬೆಳೆಗಾರರಾದ ವೀರೇಂದ್ರಕುಮಾರ್, ಕೇಶವಮೂರ್ತಿ, ಪುಟ್ಟಸ್ವಾಮಿ, ಪ್ರದೀಪ್, ಸಂದೀಪ್, ಎಸ್.ಕೆ.ವೀರಪ್ಪ, ಪ್ರದೀಪ್ ಕುಮಾರ್, ಗಿರೀಶ್ ಮುಂತಾದವರಿದ್ದರು. ಸಾರ್ವಜನಿಕರಿಗೆ ಹಾಗೂ ಮುಖ್ಯರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಹಾಗೂ ಬಸ್ ಪ್ರಯಾಣಿಕರಿಗೆ ಉಚಿತವಾಗಿ ಕಾಫಿಯನ್ನು ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net