

ವಿಜಯಪುರ: ಮತದಾರರನ್ನು ಸೆಳೆಯಲು ಸೀರೆ ಹಂಚಲು ಬಂದಿದ್ದ ಶಾಸಕರ ಬೆಂಬಲಿಗರನ್ನು ತರಾಟೆಗೆ ತೆಗೆದುಕೊಂಡ ಜನರು, ಸೀರೆಯನ್ನು ಸ್ವೀಕರಿಸಿದೆ ಶಾಸಕರ ಬೆಂಬಲಿಗರನ್ನು ವಾಪಸ್ ಕಳಿಸಿದ ಪ್ರಸಂಗ ನಡೆದಿದೆ. ವಿಜಯಪುರ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಈ ಪ್ರಕರಣ ನಡೆದಿದೆ.
ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಅವರ ಬೆಂಬಲಿಗರು ಮುದ್ದೇಬಿಹಾಳದ ಮೆಹಬೂಬ್ ನಗರದಲ್ಲಿ ಸೀರೆ ಹಂಚಲು ಹೋಗಿದ್ದಾಗ ಈ ಪ್ರಕರಣ ನಡೆದಿದೆ. ನೀವು ನಮ್ಮ ಕೆಲಸ ಮಾಡಿಕೊಟ್ಟಿಲ್ಲ ಎಂದು ಆರೋಪಿಸಿರುವ ಸ್ಥಳೀಯ ಮನೆಯೊಂದರ ಮಂದಿ, ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಜೋರು ಮಾಡಿದವರ ಕೆಲಸ ಮಾತ್ರ ಮಾಡುತ್ತೀರಿ, ನಮ್ಮಂಥವರ ಕೆಲಸ ಮಾಡಿಕೊಡಲ್ಲ, ಮನೆಗೆ ಹಕ್ಕುಪತ್ರ ಕೇಳಿದ್ದರೂ ಒದಗಿಸಿಲ್ಲ. ಐದು ವರ್ಷದಿಂದ ಈ ಕಡೆಗೆ ಪತ್ತೆ ಇಲ್ಲ, ಈಗ ಸೀರೆ ಹಂಚಲು ಬಂದಿದ್ದೀರಿ, ನಿಮ್ಮ ಸೀರೆ ಯಾರಿಗೆ ಬೇಕು? ಎಂದು ಶಾಸಕರ ಬೆಂಬಲಿಗರನ್ನು ಬೈದು ಕಳಿಸಿದ್ದಾರೆ. ಇದು ಸ್ಥಳೀಯರೊಬ್ಬರ ಮೊಬೈಲ್ಫೋನ್ನಲ್ಲಿ ಸೆರೆಯಾಗಿದ್ದು, ವೈರಲ್ ಆಗಲಾರಂಭಿಸಿದೆ.