

ಬೆಂಗಳೂರು: ಲೋಕಸಭೆ ಚುನಾವಣೆ ಬಳಿಕ ಶೀಘ್ರವೇ ಸ್ಥಳೀಯ ಸಂಸ್ಥೆ ಚುನಾವಣೆ ನಡೆಯುವುದು ದಟ್ಟವಾಗಿದೆ.
ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಜನಪ್ರತಿನಿಧಿಗಳ ಆಡಳಿತ ಇಲ್ಲದೇ ಮೂರು ವರ್ಷ ಕಳೆದಿದೆ. ಹೀಗಾಗಿ ಕೂಡಲೇ ಚುನಾವಣೆ ನಡೆಸುವ ಅನಿವಾರ್ಯತೆಯೂ ಸರ್ಕಾರಕ್ಕಿದೆ.
ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಡಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಶೀಘ್ರದಲ್ಲೇ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದು, ಜನರ ಕೈಗೆ ಅಧಿಕಾರ ಹೋಗಲಿದೆ. ಹೀಗಾಗಿ ಪಕ್ಷದ ನಾಯಕರು, ಕಾರ್ಯಕರ್ತರು ಈ ಚುನಾವಣೆಗಳಿಗೆ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ನಾನು ಎಷ್ಟು ದಿನ ಅಧ್ಯಕ್ಷನಾಗಿ ಇರುತ್ತೇನೆ ಎಂಬುದು ಮುಖ್ಯವಲ್ಲ. ನಾನು ಅಧಿಕಾರ ಬಿಟ್ಟು ಹೋಗುವ ಮುನ್ನ ಪಕ್ಷದ ಸಂಘಟನೆಗೆ ಭದ್ರ ಬುನಾದಿ ಹಾಕಿಕೊಡುವ ಕೆಲಸ ಮಾಡುತ್ತೇನೆ. ಈ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇನೆ. ಮುಂದಿನ ಮೂರು ನಾಲ್ಕು ತಿಂಗಳಲ್ಲಿ ಕಾರ್ಯಯೋಜನೆ ಸಿದ್ಧಪಡಿಸುತ್ತೇವೆ. ನೀವೆಲ್ಲರೂ ಅದಕ್ಕೆ ಸಿದ್ಧರಾಗಬೇಕು ಎಂದರು.
ಪಂಡಿತ್ ನೆಹರು, ರಾಜಗೋಪಾಲಾಚಾರಿ, ಕೆಂಗಲ್ ಹನುಮಂತಯ್ಯ, ಬಿ.ಡಿ.ಜತ್ತಿ, ಮಲ್ಲಿಕಾರ್ಜುನ ಖರ್ಗೆ ಅವರು ಸೇರಿದಂತೆ ಅನೇಕ ನಾಯಕರು ಸ್ಥಳೀಯ ಸಂಸ್ಥೆಗಳ ಚುನಾವಣೆ ಮೂಲಕ ರಾಷ್ಟ್ರಮಟ್ಟಕ್ಕೆ ಬೆಳೆದವರು. ಸಂಘಟನೆ ಬಲಗೊಳಿಸಬೇಕು. ಪಕ್ಷದ ಎಲ್ಲಾ ಘಟಕಗಳನ್ನು ವಿಸರ್ಜಿಸಿ ಹೊಸದಾಗಿ ರಚಿಸುವ ಸಮಯ ಬಂದಿದೆ. ಮೊದಲು ಪಕ್ಷದ ಕೆಲಸ ಮಾಡಬೇಕು ಎಂದು ಹೇಳಿದರು.