

ಕೋಲಾರ: ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ರಹಿತವಾಗಿ ಆಡಳಿತ ನಡೆಸಿದಾಗ ರೈತರಿಗೆ ಸೌಲಭ್ಯಗಳನ್ನು ಕಲ್ಪಿಸಲು ಸಾಧ್ಯ ಎಂದು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಎಚ್.ಕೃಷ್ಣೇಗೌಡ ಹೇಳಿದರು.
ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನಿಂದ ನಡೆದ ಪ್ರಸಕ್ತ ಸಾಲಿನ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿ, ಸಾಲ ವಸೂಲಿ ಶೇ.74ರಷ್ಟು ಪ್ರಗತಿಯಲ್ಲಿದ್ದು, 11 ಲಕ್ಷ ಲಾಭಗಳಿಸಿದೆ ಎಂದು ತಿಳಿಸಿದರು.
ಮಾಜಿ ಅಧ್ಯಕ್ಷ ವಿಟಪ್ಪನಹಳ್ಳಿ ವೆಂಕಟೇಶ್ ಮಾತನಾಡಿ, ಬ್ಯಾಂಕಿನಲ್ಲಿ 5,781 ಸದಸ್ಯರು ನೋಂದಣಿಯಾಗಿದ್ದು, ಸದಸ್ಯರ ಸಂಖ್ಯೆಹೆಚ್ಚಿಸಲು ಕ್ರಮಕವಹಿಸಲಾಗಿದೆ. ರಾಜ್ಯ ಬ್ಯಾಂಕಿನಿಂದ ಜಿಲ್ಲೆಗೆ 13 ಕೋಟಿ ಮಂಜೂರಾಗಿದ್ದು, ರೈತರಿಗೆ 10 ಕೋಟಿ ರೂ ಸಾಲ ವಿತರಣೆ ಮಾಡಲಾಗಿದೆ. ಆಮೂಲಕ ಪ್ರಗತಿಯಲ್ಲಿ ಕೋಲಾರ ಬ್ಯಾಂಕ್ ಪ್ರಥಮ ಸ್ಥಾನದಲ್ಲಿದೆ ಎಂದು ಹೇಳಿದರು.
ಬ್ಯಾಂಕಿಗೆ 88 ವರ್ಷಗಳ ಇತಿಹಾಸವಿದ್ದು, ಅನೇಕ ಸಹಕಾರಿ ಧುರೀಣರು ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ, ಅಂದಿನಿಂದ ಸಹಕಾರಿ ತತ್ವದಡಿಯಲ್ಲಿ ಸೇವೆ ಸಲ್ಲಿಸಲಾಗುತ್ತಿದೆ. ಬ್ಯಾಂಕಿನಿಂದ ಸಾಲ ಪಡೆದುಕೊಂಡಿರುವವರು ಪ್ರಾಮಾಣಿಕವಾಗಿ ಮರುಪಾವತಿ ಮಾಡಬೇಕು. ಆಮೂಲಕ ಮತ್ತಷ್ಟು ಮಂದಿಗೆ ಸೌಲಭ್ಯ ಕಲ್ಪಿಸಲು ಸಹಕರಿಸಬೇಕು ಎಂದು ಸಲಹೆ ನೀಡಿದರು.
ಬ್ಯಾಂಕಿನ ರಾಜ್ಯ ನಿರ್ದೇಶಕ ಯಲವಾರ ಸೊಣ್ಣೇಗೌಡ ಮಾತನಾಡಿ, ರೈತರು ತಮ್ಮ ಜಮೀನನ ಮೇಲೆ ಸಾಲ ಪಡೆದುಕೊಳ್ಳುತ್ತಾರೆ, ಖಾಸಗಿ ಬ್ಯಾಂಕ್‌ಗಳಿಗೆ ಅಡಮಾನವಿಟ್ಟರೆ ಮಾತ್ರ ಸಾಲ ನೀಡುತ್ತಾರೆ ಹೊರತು ಬೇರೆ ಸೌಲಭ್ಯ ಕಲ್ಪಿಸುವುದಿಲ್ಲ, ಆದರೆ ಸಹಕಾರ ಬ್ಯಾಂಕ್‌ಗಳ ಮೂಲಕ ಶೇ.9ರಷ್ಟು ಬಡ್ಡಿದರದಲ್ಲಿ ಸಾಲ ನೀಡುತ್ತಿದ್ದು, ರೈತರು ಕೇವಲ ಶೇ.3ರಷ್ಟು ಮಾತ್ರ ಭರಿಸಬೇಕು, ಉಳಿದ ಬಡ್ಡಿ ದರವನ್ನು ಸರ್ಕಾರ ಬ್ಯಾಂಕ್ ಖಾತೆಗೆ ಅದಷ್ಟು ಬೇಗ ಜಮಾ ಮಾಡುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.
ಬ್ಯಾಂಕಿನ ಉಪಾಧ್ಯಕ್ಷ ಕೆ.ಎಂ ಗೋವಿಂದಪ್ಪ, ನಿರ್ದೇಶಕರಾದ ಶಶಿಧರ್, ಶಿವಕುಮಾರ್, ಬೈರೇಗೌಡ, ಕೆ.ಸಿ.ಮಂಜುನಾಥ್, ಎಂ.ಮಂಜುನಾಥ್, ಜಿ.ಅಮರೇಶ್, ರಾಧಾಕೃಷ್ಣ, ಗಂಗಪ್ಪ, ಶೋಭಾ, ಸುನಂದಮ್ಮ, ವ್ಯವಸ್ಥಾಪಕ ಶ್ರೀನಿವಾಸ್, ಲೆಕ್ಕಾಧಿಕಾರಿ, ಶೋಭಾರಾಣಿ, ಸಿಬ್ಬಂದಿ ಶ್ಯಾಮಲಾ, ಮತಿತರರು ಭಾಗವಹಿಸಿದ್ದರು.