

ಮೈಸೂರು: ಲಕ್ದ್ಮೀ ಮಹಿಳಾ ವಿವಿದೋದ್ದೇಶ ಸಹಕಾರ ಸಂಘವು ಜಿಲ್ಲೆಗೆ ಮಾದರಿ ಆಗಿದೆ ಎಂದು ಸಂಘದ ಅಧ್ಯಕ್ಷೆ ಕೆ.ಲಲಿತಾ ಜಿ.ಟಿ.ದೇವೇಗೌಡ ಅಭಿಪ್ರಾಯಪಟ್ಟರು.
ಹುಣಸೂರುನಗರದ ಸಂಘದ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ 2022-23ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
2008ರಲ್ಲಿ ಸ್ಥಾಪನೆಗೊಂಡ ಸಂಘವು ಪ್ರಸ್ತುತ 3 ಸಾವಿರ ಷೇರುದಾರರನ್ನು ಹೊಂದಿದೆ. 2 ಸಾವಿರ ಗ್ರಾಹಕರು ಉಳಿತಾಯ ಖಾತೆ ಹೊಂದಿದ್ದಾರೆ. ಈ ಬಾರಿ ಸಂಘದ ಸದಸ್ಯರಿಗೆ ಒಟ್ಟು 50 ಲಕ್ಷ ರೂ.ಸಾಲ ಸೌಲಭ್ಯ ನೀಡಲಾಗಿದೆ. ಆ ಮೂಲಕ ಜಿಲ್ಲೆಯಾದ್ಯಂತ ತನ್ನ ವಹಿವಾಟನ್ನು ವಿಸ್ತರಿಸುವ ಮೂಲಕ ಮಹಿಳಾ ಸಂಘಕ್ಕೆ ಮಾದರಿಯಾಗಿದೆ ಎಂದರು.
ಸಂಘವು ಸ್ವಂತ ಕಟ್ಟಡ ಹೊಂದಿರುವುದು ಹೆಮ್ಮೆಯ ವಿಷಯ. ಮುಂದಿನ ದಿನಗಳಲ್ಲಿ ಚಿನ್ನಾಭರಣಗಳಿಗೆ ಸಾಲ ಸೌಲಭ್ಯ, ಆಸ್ತಿಮೇಲಿನ ಅಡಮಾನ ಸಾಲ ಸೌಲಭ್ಯಗಳನ್ನು ನೀಡಲು ನಿರ್ಧರಿಸಲಾಗಿದೆ. ಮಹಿಳೆಯರು ಮನಸು ಮಾಡಿದರೆ ಅಸಾಧ್ಯವೆನ್ನುವುದನ್ನು ಸಾಧಿಸುತ್ತಾರೆ ಎನ್ನುವುದಕ್ಕೆ ನಮ್ಮ ಸಂಘ ಜ್ವಲಂತ ಸಾಕ್ಷಿಯಾಗಿದೆ ಎಂದರು.
ಸಂಘದ ಕಾರ್ಯನಿರ್ವಹಣಾಧಿಕಾರಿ ಶಶಿಕಲಾ ಬಸವಲಿಂಗಯ್ಯ ಸಂಘದ ಕಳೆದ ಸಾಲಿನ ಜಮೆ, ಖರ್ಚುಗಳ ಮಾಹಿತಿಯನ್ನು ಸಭೆಗೆ ವಿವರಿಸಿದರು. ನಿರ್ದೇಶಕರಾದ ರಾಜೇಶ್ವರಿ ಮಹದೇವು, ಶಕುಂತಲಾ ವೆಂಕಟೇಶ್, ವನಜಾಕ್ಷಿ ನಾಗರಾಜ್, ಶಶಿಕಲಾ ನಾಗಣ್ಣ, ಕಲ್ಪನಾ ಬೊಮ್ಮೇಗೌಡ, ನಳಿನಾಕ್ಷಿ ಜಯರಾಮೇಗೌಡ, ಶಾಂತಕುಮಾರಿ ಪಟುಟಸ್ವಾಮಪ್ಪ, ಗೀತಾ ನಿಂಗರಾಜು, ಎಸ್.ಸುಮಾ ಪರಮೇಶ್, ಸೌಭಾಗ್ಯ ಗುಣಶೇಖರ್, ನಳಿನಾಕ್ಷಿ ನರಸಿಂಹರಾಜು, ನೇತ್ರಾವತಿ ಮುದ್ದಣ್ಣ , ಪುಷ್ಪಲತಾ ಪ್ರಭಾಕರ್ ಮತ್ತಿತರರು ಹಾಜರಿದ್ದರು.