ಮಾಜಿ ಸಚಿವ ವಿ.ಸೋಮಣ್ಣ ಅವರ ಆಪ್ತನ ಹೆಸರಿನಲ್ಲಿ ರೇಷನ್ ಕಾರ್ಡ್ ಮೇಲೆ ಸಾಲ, ಸೈಟ್ ಆಮಿಷವೊಡ್ಡಿ ಕೂಲಿ ಕಾರ್ಮಿಕರಿಗೆ ಧೋಖಾ

rationcard
Published on

ಬೆಂಗಳೂರು: ಪಡಿತರ ಚೀಟಿ ಮೇಲೆ 2 ಲಕ್ಷ ರೂ. ಸಾಲ ಮತ್ತು ಸೈಟ್ ಕೊಡಿಸುವ ಆಮಿಷವೊಡ್ಡಿ ಕೂಲಿ ಕಾರ್ಮಿಕರ ಬಳಿ 4.50 ಲಕ್ಷ ರೂ. ಪಡೆದು ವಂಚನೆ ಮಾಡಿದ್ದು, ಅಮೃತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಕ್ಕೂರು ಬಳಿಯ ನಿವಾಸಿಗಳಾದ ಬಸಪ್ಪ, ನಂಜಪ್ಪ, ಭಾಗ್ಯಶ್ರೀ ಮತ್ತು ಮಲ್ಲಮ್ಮ ವಂಚನೆಗೆ ಒಳಗಾದವರು. ಬಸಪ್ಪ, ನೀಡಿದ ದೂರಿನ ಮೇರೆಗೆ ಅಮೃತಹಳ್ಳಿ ಠಾಣೆ ಪೊಲೀಸರು, ಆರೋಪಿ ವಿರೇಶ್ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.

ಮಾಜಿ ಸಚಿವ ವಿ.ಸೋಮಣ್ಣ ಅವರ ಬಳಿ ಕೆಲಸ ಮಾಡುತ್ತಿರುವುದಾಗಿ ಪರಿಚಯ ಮಾಡಿಕೊಂಡ ವಿರೇಶ್, ರೇಷನ್ ಕಾರ್ಡ್ ಮೇಲೆ 2 ಲಕ್ಷ ರೂ. ಸಾಲ ಮತ್ತು ಸೈಟ್ ಕೊಡಿಸುವುದಾಗಿ ಆಮಿಷವೊಡ್ಡಿ. ಇದನ್ನು ನಂಬಿದ ಮಲ್ಲಮ್ಮ 2 ಲಕ್ಷ ರೂ., ಭಾಗ್ಯಶ್ರೀ 50 ಸಾವಿರ ರೂ., ನಂಜಪ್ಪ 85 ಸಾವಿರ ರೂ. ಸೇರಿದಂತೆ 4.50 ಲಕ್ಷ ರೂ.ಅನ್ನು ನಗದು ಮತ್ತು ಆನ್‌ಲೈನ್‌ನಲ್ಲಿ ಆರೋಪಿಗೆ ಕೊಡಲಾಗಿದೆ.

ಆದರೆ, ಇಲ್ಲಿಯವರೆಗೂ ರೇಷನ್ ಕಾರ್ಡ್ ಮೇಲೆ ಸಾಲ ಆಗಲಿ ಅಥವಾ ಸೈಟ್ ಸಹ ಕೊಡಿಸಿಲ್ಲ. ಈ ಬಗ್ಗೆ ಪ್ರಶ್ನಿಸಿದರೇ ಇಂದು ನಾಳೆ ಎಂದು ಸಬೂಬುಹೇಳಿಕೊಂಡು ಕಾಲ ಮುಂದೂಡಿದ್ದ. ಇದೀಗ ವಿರೇಶ್ ಸಂಪರ್ಕಕ್ಕೆ ಸಿಗುತ್ತಿಲ್ಲ. ಆರೋಪಿಯನ್ನು ಪತ್ತೆ ಮಾಡಿ ಕಾನೂನು ಕ್ರಮ ತೆಗೆದುಕೊಳ್ಳುವಂತೆ ದೂರಿನಲ್ಲಿ ನೊಂದವರು ಮನವಿ ಮಾಡಿದ್ದಾರೆ. ಆರೋಪಿಯ ಬಂಧನಕ್ಕೆ ಬಲೆಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net