

ತಿ.ನರಸೀಪುರ: ಹೊರಳಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಕೃಷಿ ಚಟುವಟಿಕೆಗಳಿಗೆ ನಿರಂತರವಾಗಿ ಸಾಲ ಸೌಲಭ್ಯವನ್ನು ಕಲ್ಪಿಸಲಾಗುತ್ತಿದ್ದು, 2023-24ನೇ ಸಾಲಿನಲ್ಲಿ 3 ಕೋಟಿ ರೂ. ಬೆಳೆ ಸಾಲ ನೀಡಲಾಗಿದೆ ಎಂದು ಸಂಘದ ಅಧ್ಯಕ್ಷ ಎಚ್.ಎಂ.ಗುರುಸ್ವಾಮಿ ಹೇಳಿದರು.
ತಾಲೂಕಿನ ಹೊರಳಹಳ್ಳಿ ಗ್ರಾಮದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಗುರುವಾರ ಆಯೋಜಿಸಿದ್ದ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಹೈನುಗಾರಿಕೆಗೆ ಉತ್ತೇಜನ ನೀಡಲು ಪಶು ಸಂಗೋಪನೆಗೆಂದು 32 ಲಕ್ಷ ರೂ. ಹಾಗೂ ಮಹಿಳಾ ಸ್ವ ಸಹಾಯ ಸಂಘಗಳಿಗೂ 26 ಲಕ್ಷ ರೂ. ಸಾಲ ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಂಘದ ಮುಖ್ಯ ಕಾರ್ಯನಿರ್ವಾಹಕ ಎಚ್.ಎನ್.ಗವಿಗೌಡ ಮಾತನಾಡಿ, ಸಾಲ ಮರುಪಾವತಿ ಮತ್ತು ಹಣಕಾಸಿನ ವಹಿವಾಟು ಸುಸ್ಥಿತಿಯಲ್ಲಿರುವುದರಿಂದ 2023-24 ನೇ ಸಾಲಿನಲ್ಲಿ 88,109 ರೂಪಾಯಿಗಳ ನಿವ್ವಳ ಲಾಭವಾಗಿದೆ. ಮುಂದಿನ 2024 - 25 ನೇ ಸಾಲಿಗೆ 14 ಲಕ್ಷ ರೂ.ಗಳ ಅಂದಾಜು ಬಜೆಟನ್ನು ರೂಪಿಸಲಾಗಿದೆ. ಆಡಳಿತ ಮಂಡಳಿಯ ನಿರ್ದೇಶಕರು ಹಾಗೂ ಸದಸ್ಯರ ಸಹಕಾರದಿಂದ ಆರ್ಥಿಕ ಪ್ರಗತಿ ಸಾಧ್ಯವಾಗಿದೆ ಎಂದು ತಿಳಿಸಿದರು.
ಉಪಾಧ್ಯಕ್ಷೆ ಮಂಜುಳಾ, ನಿರ್ದೇಶಕರಾದ ಶಿವಮಲ್ಲಪ್ಪ, ನಂಜಯ್ಯ, ಎಂ.ಉಮಾ, ಎಸ್.ರಾಜಮ್ಮ, ಎಂ.ಲಿಂಗಯ್ಯ, ಚಂದ್ರ, ಎಚ್.ಎಂ.ಪುಟ್ಟಸ್ವಾಮಿ, ಎಂ.ರಮೇಶ್, ಶಿವಣ್ಣ, ಎಂಡಿಸಿಸಿ ಬ್ಯಾಂಕ್ ಪ್ರತಿನಿಧಿ ಎನ್.ಎಸ್.ಶೇಖರ್ ಹಾಗೂ ಷೇರುದಾರ ಸದಸ್ಯ ರೈತರು ಇದ್ದರು.