10 ದಿನಗಳಲ್ಲಿ ಮಳೆ ಬಾರದಿದ್ದರೆ ಲೋಡ್ ಶೆಡ್ಡಿಂಗ್?

KJ George (1)
Published on

ಬೆಂಗಳೂರು ಮಳೆಯೂ ಬಾರದೆ, ವಿದ್ಯುತ್ ಕೊರತೆ ಕೂಡ ಹೀಗೇ ಮುಂದುವರಿದರೆ ಅಧಿಕೃತವಾಗಿ ಲೋಡ್ ಶೆಡ್ಡಿಂಗ್ ಮಾಡಬೇಕಾಗುತ್ತದೆ. ಸದ್ಯಕ್ಕೆ ಅಂತಹ ಪರಿಸ್ಥಿತಿ ಇಲ್ಲ, ಅಂತಹ ಸ್ಥಿತಿ ಬಾರದಿರಲೆಂದು ದೇವರಲ್ಲಿ ಪ್ರಾರ್ಥಿಸೋಣವೆಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದರು.

ಮಲ್ಲೇಶ್ವರದಲ್ಲಿ ಮಂಗಳವಾರ ದೇಶದಲ್ಲಿಯೇ ಮೊದಲ ಬಾರಿಗೆ ಆರಂಭಿಸಿರುವ ‘ಭೂಗತ ಪರಿವರ್ತಕ ಕೇಂದ್ರ’ಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಳೆ ಕೊರತೆಯಿಂದ ಅನಿರೀಕ್ಷಿತವಾಗಿ ಬೇಡಿಕೆ ಹೆಚ್ಚಳವಾಗಿದೆ. ಕಳೆದ ಒಂದು ವಾರದಿಂದ ಸಮಸ್ಯೆ ಆಗಿದ್ದು ನಿಜ ಎಂದು ಒಪ್ಪಿಕೊಂಡರು.

ಉತ್ಪಾದನೆಯಲ್ಲಿ 17 ಮಿ.ಯೂ. ಕಡಿಮೆ ಆಗಿತ್ತು. ಇಂತಹ ಸಂದರ್ಭದಲ್ಲಿ ಇಂಜಿನಿಯರ್‌ಗಳು ಸಮತೋಲನಗೊಳಿಸಲು ತಾತ್ಕಾಲಿಕವಾಗಿ ಕಡಿತಗೊಳಿಸಿರುತ್ತಾರೆ. ಕೆಲವು ಸಲ ನಿರ್ವಹಣೆ ಅಥವಾ ಟ್ರಾನ್ಸ್‌ಫಾರ್ಮರ್ ದುರಸ್ತಿಗೆ ವಿದ್ಯುತ್ ಕಡಿತವಾಗಿರುತ್ತದೆ. ಜನ ಅದನ್ನು ಲೋಡ್‌ಶೆಡ್ಡಿಂಗ್ ಅಂತ ತಿಳಿದುಕೊಂಡಿದ್ದಾರೆ ಎಂದು ಸಮರ್ಥಿಸಿಕೊಂಡರು.

10 ದಿನಗಳಲ್ಲಿ ಮಳೆ ಬರಲಿ:

ಹವಾಮಾನ ತಜ್ಞರ ಪ್ರಕಾರ ಮುಂದಿನ ಒಂದು ವಾರ ಅಥವಾ ಹತ್ತು ದಿನಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಆಗ, ನಮಗೆ ಈ ಸಮಸ್ಯೆಯೇ ಇರುವುದಿಲ್ಲ. ಒಂದು ವೇಳೆ ಮಳೆಯಾಗದೆ, ವಿದ್ಯುತ್ ಬೇಡಿಕೆ ಹೆಚ್ಚಳವಾಗಿ ಕೊರತೆ ಪ್ರಮಾಣ ಏರಿಕೆಯಾಗುತ್ತಲೇ ಇದ್ದರೆ, ಅಧಿಕೃತವಾಗಿ ಲೋಡ್‌ಶೆಡ್ಡಿಂಗ್ ಮಾಡಬೇಕಾಗುತ್ತದೆ. ಸದ್ಯಕ್ಕೆ ಆ ಸ್ಥಿತಿ ಇಲ್ಲ’ ಎಂದು ತಿಳಿಸಿದರು.

ಹತ್ತು ದಿನಗಳ ನಂತರ ಲೋಡ್‌ಶೆಡ್ಡಿಂಗ್ ಘೋಷಣೆ ಮಾಡುತ್ತೀರಾ ಎಂದಾಗ, ‘ಇಲ್ಲ 10 ದಿನಗಳಲ್ಲಿ ಮಳೆ ಬರುತ್ತದೆ ಅಂತ ನಾನು ಹೇಳುತ್ತಿದ್ದೇನೆ. ನೀವ್ಯಾಕೆ ಹೀಗೆ ಹೇಳುತ್ತೀರಿ? ಮಳೆ ಬರಲಿ ಅಂತ ದೇವರಲ್ಲಿ ನಾವೂ-ನೀವೂ ಪ್ರಾರ್ಥಿಸೋಣ’ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net