

ನವದೆಹಲಿ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವ ಮಧ್ಯೆ ರಾಜಕೀಯ ಚಟುವಟಿಕೆಗಳು ಗರಿಗೆದರುತ್ತಿವೆ. ಬಹುಜನ ಸಮಾಜ ಪಕ್ಷದಿಂದ (ಬಿಎಸ್ಪಿ) ಉಚ್ಚಾಟನೆಗೊಂಡಿದ್ದ ಶಾಸಕರ ಪೈಕಿ ಆರು ಮಂದಿ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ರನ್ನು ಭೇಟಿಮಾಡಿದ್ದು, ಕೆಲ ದಿನಗಳಲ್ಲಿ ಪಕ್ಷ ಸೇರ್ಪಡೆಯಾಗಲಿದ್ದಾರೆ. ಅಖಿಲೇಶ್ ಭೇಟಿ ಬಗ್ಗೆ ಖಚಿತಪಡಿಸಿರುವ ಶಾಸಕಿ ಸುಷ್ಮಾ ಪಟೇಲ್, "ನಮ್ಮ ಭವಿಷ್ಯದ ಬಗ್ಗೆ ಚರ್ಚಿಸಲೆಂದೇ ಭೇಟಿ ಮಾಡಿದ್ದೆವು. ನಾನಂತೂ ಎಸ್ಪಿ ಟಿಕೆಟ್ನಿಂದ ಮುಂದಿನ ಚುನಾವಣೆ ಸ್ಪರ್ಧಿಸಲಿದ್ದೇನೆ' ಎಂದು ಹೇಳಿದ್ದಾರೆ.
ಬಿಎಸ್ಪಿ ನಾಯಕಿ ಮಾಯಾವತಿ ಕಳೆದ ಅಕ್ಟೋಬರ್ನಲ್ಲಿ ರಾಜ್ಯಸಭೆ ಚುನಾವಣೆಗೆ ಪಕ್ಷದ ಮುಖಂಡ ರಾಮ್ಜೀ ಗೌತಮ್ರನ್ನು ಆಯ್ಕೆ ಮಾಡಿದ್ದನ್ನು 7 ಶಾಸಕರು ವಿರೋಧಿಸಿದ್ದರು. ಇದರಿಂದ ಸಿಟ್ಟಾಗಿದ್ದ ಮಾಯಾವತಿ ಏಳೂ ಮಂದಿಯನ್ನು ಪಕ್ಷದಿಂದ ಉಚ್ಚಾಟಿಸಿದ್ದರು. ಏತನ್ಮಧ್ಯೆ, ಜೂನ್ 3ರಂದು ಬಿಎಸ್ಪಿ ಹಿರಿಯ ಮುಖಂಡರಾದ ಲಾಲ್ಜೀ ವರ್ಮ ಮತ್ತು ಅರಮ್ ಅಚಲ್ ರಾಜ್ಭರ್ ಅವರನ್ನು ಪಂಚಾಯತ್ ಚುನಾವಣೆಯಲ್ಲಿ ಪಕ್ಷವಿರೋಧಿ ಚಟುವಟಿಕೆ ನಡೆಸಿದ್ದಾರೆಂದು ಉಚ್ಚಾಟಿಸಲಾಗಿತ್ತು. 2017ರ ವಿಧಾನಸಭೆ ಚುನಾವಣೆಯಲ್ಲಿ 19 ಸೀಟುಗಳನ್ನು ಬಿಎಸ್ಪಿ ಗೆದ್ದಿತ್ತು. ಉಪ ಚುನಾವಣೆಯಲ್ಲಿ ಒಂದು ಸೀಟನ್ನು ಕಳೆದುಕೊಂಡರೆ, 11 ಮಂದಿ ವಿವಿಧ ಕಾರಣಗಳಿಗಾಗಿ ಉಚ್ಚಾಟನೆಗೊಂಡಿದ್ದಾರೆ. ಸದ್ಯ ಬಿಎಸ್ಪಿ 7 ಶಾಸಕರನ್ನು ಹೊಂದಿದೆ. ಜೂನ್ 3ರಂದು ಪಕ್ಷದಿಂದ ಹೊರಬಿದ್ದ ಇಬ್ಬರು ಕೂಡ ಎಸ್ಪಿ ಜತೆಗೆ ಸಂಪರ್ಕದಲ್ಲಿದ್ದು, ಶ್ರೀದಲ್ಲೇ ಅಖಿಲೇಶ್ ಕೈಹಿಡಿವ ಸಾಧ್ಯತೆ ಹೆಚ್ಚಿದೆ. ಕಳೆದ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿಗಿಂತ ಉತ್ತಮ ನಿರ್ವಹಣೆ ತೋರಿ ಉತ್ಸಾಹದಲ್ಲಿರುವ ಸಮಾಜವಾದಿ ಪಾರ್ಟಿ, ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಪ್ರಮುಖ ಪ್ರತಿಸ್ಪರ್ಧಿ ಆಗಲಿರುವುದರಿಂದ ಬಿಎಸ್ಪಿ ಮುಖಂಡರು, ಕಾರ್ಯಕರ್ತ ರನೇಕರು ಎಸ್ಪಿ ಕಡೆ ಮುಖ ಮಾಡುತ್ತಿದ್ದಾರೆ.
ಎಲ್ಜೆಪಿ ಜಟಾಪಟಿ ಜೋರು
ಕೇಂದ್ರದ ಮಾಜಿ ಸಚಿವ, ದಿವಂಗತ ರಾಮ್ ವಿಲಾಸ್ ಪಾಸ್ವಾನ್ ಪುತ್ರ ಚಿರಾಗ್ ಪಾಸ್ವಾನ್ರನ್ನು ಲೋಕಜನ ಶಕ್ತಿ ಪಕ್ಷದ (ಎಲ್ಜೆಪಿ) ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದ ಕೆಲವೇ ಗಂಟೆಗಳಲ್ಲಿ ಎಲ್ಜೆಪಿ ಸಂಸದ, ಪಶುಪತಿನಾಥ ಪರಸ್ ಸೇರಿ ಐವರು ಬಂಡಾಯ ಸಂಸದರನ್ನು ಚಿರಾಗ್ ಪಾಸ್ವಾನ್ ಉಚ್ಚಾಟನೆ ಮಾಡಿದ್ದಾರೆ. ಚಿರಾಗ್ ಮತ್ತು ಪಶುಪತಿನಾಥ ಬೆಂಬಲಿಗ ಗುಂಪುಗಳೀಗ ಪಕ್ಷದ ಮೇಲೆ ನಿಯಂತ್ರಣ ಸಾಧಿಸಲು ಹೋರಾಟ ನಡೆಸುತ್ತಿದ್ದು, ಪ್ರಕರಣ ಚುನಾವಣಾ ಆಯೋಗದ ಮೆಟ್ಟಿಲೇರುವುದು ಬಹುತೇಕ ಖಚಿತ. ಪರಸ್ ಅವರನ್ನು ಪಕ್ಷದ ಲೋಕಸಭೆ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಲೋಕಸಭೆ ಸ್ಪೀಕರ್ ಸೋಮವಾರ ಖಚಿತಪಡಿಸಿದ್ದರು. ಸಂಸದರು ಹಾಗೂ ಪಕ್ಷ ಸಂಟನೆ ಪಶುಪತಿನಾಥ್ ಪರಸ್ ಬೆನ್ನಿಗೆ ನಿಂತಿರುವುದರಿಂದ ಕಾನೂನು ಹೋರಾಟದಲ್ಲೂ ಚಿರಾಗ್ಗೆ ಹಿನ್ನಡೆಯಾಗುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ. ಈ ಮಧ್ಯೆ ತಮ್ಮ ಸಂಬಂಧಿಯೂ ಆದ ಪಶುಪತಿನಾಥ ವಿರುದ್ಧ ಕಿಡಿಕಾರಿರುವ ಚಿರಾಗ್, "ಪಕ್ಷ ತಾಯಿ ಇದ್ದಂತೆ. ಅದಕ್ಕೆ ದ್ರೋಹ ಬಗೆದ ನೀವು ನನ್ನ ರಕ್ತಸಂಬಂಧಿಯೇ ಅಲ್ಲ' ಎಂದಿದ್ದಾರೆ. ಚಿರಾಗ್ ಸೋಮವಾರ 45 ನಿಮಿಷ ಪಶುಪತಿನಾಥರ ಮನೆ ಬಾಗಿಲು ಕಾದರೂ ಅವರ ಭೇಟಿಯಾಗಲು ಅವಕಾಶ ಸಿಗಲಿಲ್ಲ.
ಒಪ್ಪಂದ ವಿಸ್ತರಣೆ
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ತನ್ನ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿದ್ದ ಪ್ರಶಾಂತ್ ಕಿಶೋರ್ ನೇತೃತ್ವದ ಐ&ಪ್ಯಾಕ್ ಸಂಸ್ಥೆ ಜತೆಗಿನ ಒಪ್ಪಂದವನ್ನು ತೃಣಮೂಲ ಕಾಂಗ್ರೆಸ್ ಪಕ್ಷ 2026ರವರೆಗೆ ವಿಸ್ತರಣೆ ಮಾಡಿದೆ. ಆದರೆ, ಈ ತಂಡದಲ್ಲಿ ಪ್ರಶಾಂತ್ ಕಿಶೋರ್ ಇಲ್ಲ. 2021ರ ಚುನಾವಣೆ ಲಿತಾಂಶ ಬಳಿಕ ಈ ಕೆಲಸ ಬಿಡುವುದಾಗಿ ಪ್ರಶಾಂತ್ ಘೋಷಿಸಿದ್ದರು. ಹೀಗಾಗಿ ಐ& ಪ್ಯಾಕ್ ಅನ್ನು ಇತರ ಸದಸ್ಯರು ಮುನ್ನಡೆಸ ಲಿದ್ದಾರೆ. ಬಂಗಾಳದಲ್ಲಿ ಮುಂಬರುವ ಎಲ್ಲಾ ಚುನಾವಣೆಗಳಲ್ಲಿ ಟಿಎಂಸಿಗೆ ಐ&ಪ್ಯಾಕ್ ಕಾರ್ಯತಂತ್ರ ರೂಪಿಸುವ ಸಂಸ್ಥೆಯಾಗಿ ಕಾರ್ಯ ನಿರ್ವಹಿಸಲಿದೆ.
ರಾಜಸ್ಥಾನದಲ್ಲಿ ನಿಲ್ಲದ ಬಿಕ್ಕಟ್ಟು
ರಾಜಸ್ಥಾನ ಕಾಂಗ್ರೆಸ್ನಲ್ಲಿ ಸಿಎಂ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ನಡುವಿನ ಬಿಕ್ಕಟ್ಟು ಸದ್ಯಕ್ಕೆ ಅಂತ್ಯವಾಗುವ ಲಕ್ಷಣ ಕಾಣುತ್ತಿಲ್ಲ. "ಕೆಲ ದಿನಗಳ ಕಾಲ ಜನರನ್ನು ಭೇಟಿ ಮಾಡುವುದು ಬೇಡ, ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಗಳನ್ನು ನಡೆಸಿ' ಎಂದು ಸಿಎಂಗೆ ವೈದ್ಯರು ಸಲಹೆ ನೀಡಿರುವುದರಿಂದ ಒಂದು ತಿಂಗಳ ಮಟ್ಟಿಗೆ ಗೆಹ್ಲೋಟ್ ಯಾರನ್ನೂ ಭೇಟಿ ಮಾಡದಿರಲು ನಿರ್ಧರಿಸಿದ್ದಾರೆನ್ನಲಾಗಿದೆ. ಸಂಪುಟದಲ್ಲಿ ಸೂಕ್ತ ಸ್ಥಾನಮಾನ ಸಿಗದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಪೈಲಟ್ರನ್ನು ಸಮಾಧಾನಪಡಿಸಲು ವರಿಷ್ಠರು ಕೂಡ ಯತ್ನಿಸುತ್ತಿದ್ದಾರೆ. ಆದರೆ, ಈವರೆಗೆ ಯಾವುದೇ ಪರಿಹಾರ ಕಂಡುಕೊಳ್ಳಲಾಗಿಲ್ಲ.