

ಬೆಂಗಳೂರು: ನಗರದ ಮನೆ ಮಾಲೀಕರು ಬಾಡಿಗೆಗೆ ಮನೆ ಕೊಡುವ ಮುನ್ನ ಸಾಕಷ್ಟು ಬಾರಿ ಯೋಚನೆ ಮಾಡಿ, ವಿಚಾರಿಸಿ ಕೊಡಬೇಕು. ಇಲ್ಲವಾದಲ್ಲಿ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎಂಬುದಕ್ಕೆ ಈ ಒಂದು ಘಟನೆ ತಾಜಾ ಉದಾಹರಣೆ ಆಗಿದೆ.
ಖತರ್ನಾಕ್ ಜೋಡಿಯೊಂದು ಲಿವಿಂಗ್ ಟುಗೆದರ್ನಲ್ಲಿ ಇದ್ದುಕೊಂಡೇ ಮನೆಯನ್ನು ದೋಚಿರುವ ಪ್ರಕರಣ ಬೆಳಕಿಗೆ ಬಂದಿದೆ. ಬಾಡಿಗೆ ಕೊಟ್ಟ ಮಾಲೀಕರ ಮನೆಯನ್ನೇ ಗುಡಿಸಿ ಗುಂಡಾಂತರ ಮಾಡಿರುವ ಜೋಡಿ, ಕಳ್ಳತನ ಮಾಡಲೆಂದೇ ನಾಲ್ಕು ತಿಂಗಳಿಂದ ಮನೆ ಬಾಡಿಗೆಗಿದ್ದರು. ಇದೀಗ ಸುಬ್ರಮಣ್ಯಪುರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಲಿಖಿತ ಹಾಗೂ ಸುಮಂತ್ ಬಂಧಿತ ಆರೋಪಿಗಳು. ಬಾಡಿಗೆ ಮನೆ ಮಾಲೀಕನ ಮನೆಯಲ್ಲಿ ಬರೊಬ್ಬರಿ 4 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಈ ಖತರ್ನಾಕ್ ಜೋಡಿ ಕದ್ದಿದೆ. ಈ ಘಟನೆ ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಎಜಿಎಸ್ ಲೇಔಟ್ನಲ್ಲಿ ನಡೆದಿದೆ.
ಪ್ರೇಮಲತಾ ಎಂಬುವವರ ಮನೆಯಲ್ಲಿ ಲಿಖಿತ ಮತ್ತು ಸುಮಂತ್ ಕಳೆದ ನಾಲ್ಕು ತಿಂಗಳಿಂದ ಬಾಡಿಗೆಗೆ ಇದ್ದರು. ಈ ಸಮಯದಲ್ಲಿ ಮನೆ ಮಾಲೀಕರ ಚಲನಾವಲನವನ್ನು ವೀಕ್ಷಿಸಿದ್ದರು. ಬಳಿಕ ಮನೆ ಖಾಲಿ ಮಾಡಿದ್ದರು. ಮನೆ ಖಾಲಿ ಮಾಡಿದ ಕೆಲವೇ ದಿನಗಳಲ್ಲಿ ಮಾಲೀಕರ ಮನೆಯಲ್ಲಿ ಕಳ್ಳತನ ನಡೆದಿತ್ತು.
ಈ ಸಂಬಂಧ ಮಾಲೀಕರು ದೂರು ದಾಖಲಿಸಿದ್ದರು. ಬಳಿಕ ಪೊಲೀಸರು ಸಿಸಿಟಿವಿ ಪರಿಶೀಲಿಸಿದಾಗ ಖತರ್ನಾಕ್ ಜೋಡಿಯ ಕೈಚಳಕ ಬೆಳಕಿಗೆ ಬಂದಿದೆ. ಚಿನ್ನದ ಒಡವೆಗಳನ್ನು ಮಾರಿ ಇಬ್ಬರು ಶಿವಮೊಗ್ಗದಲ್ಲಿ ನೆಲೆಸಿದ್ದರು. ಬಾಡಿಗೆ ಜಾಸ್ತಿ ಬರುತ್ತದೆ ಎಂಬ ಆಸೆಯಿಂದ ಲಿವಿಂಗ್ ಟುಗೆದರ್ ಜೋಡಿಗೆ ಮಾಲೀಕರು ಬಾಡಿಗೆ ಕೊಟ್ಟಿದ್ದರು.
ಸದ್ಯ ಪ್ರಕರಣ ದಾಖಲಿಸಿ ಸುಬ್ರಮಣ್ಯಪುರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಹಣ ಖಾಲಿಯಾದ ಹಿನ್ನಲೆ ಖತರ್ನಾಕ್ ಜೋಡಿ ಮತ್ತೊಂದು ಕೃತ್ಯವೆಸಗಲು ತಯಾರಿ ನಡೆಸುತ್ತಿದ್ದರು ಎಂಬುದು ವಿಚಾರಣೆ ವೇಳೆ ಪತ್ತೆಯಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. (ದಿಗ್ವಿಜಯ ನ್ಯೂಸ್)