

ಪೋಪ್ ಫ್ರಾನ್ಸಿಸ್ ತಮ್ಮ ಸೇವಾವಧಿಯ ಉದ್ದಕ್ಕೂ ದುರ್ಬಲರ ಘನತೆ ಯನ್ನು ಪ್ರತಿಪಾದಿಸಿದರು. ಅಂತರ್ ಧರ್ವಿುಯ ಸಂವಾದದ ಮೂಲಕ ಸಂಬಂಧಗಳ ಸೇತುವೆಗಳನ್ನು ಬೆಸೆದವರು. ಯುಧ್ಧ ಸಂಘರ್ಷಗಳನ್ನು ನೇರವಾಗಿ ಖಂಡಿಸಿ ಶಾಂತಿ ಸಂಧಾನಕ್ಕೆ ಪ್ರಾರ್ಥಿಸಿದವರು. ಲೌ ದಾತೊ ಸಿ -ಈ ವಿಶ್ವ ಪತ್ರದ ಮೂಲಕ ಸೃಷ್ಟಿಯ ಪಾವಿತ್ರ್ಯವನ್ನು ಒತ್ತಿಹೇಳುತ್ತಾ, ಪರಿಸರವನ್ನು ರಕ್ಷಿಸಲು ಎಲ್ಲಾ ಸುಮನಸ್ಕರಿಗೆ ಕರೆ ನೀಡಿದವರು.
ಇಂತಹ ಮಾನವತಾವಾದಿ ಇಹಲೋಕ ತ್ಯಜಿಸಿದ ಮರುದಿನವೇ ಕಾಶ್ಮೀರದ ಪಹಲ್ಗಾಮ್ ನಲ್ಲಿ ಹೃದಯ ವಿದ್ರಾವಕ ಘಟನೆ ನಡೆದು ಹೋದದ್ದು ವಿಪರ್ಯಾಸ. ಇದು ಪ್ರತಿಯೊಬ್ಬ ಮಾನವ ಆತ್ಮ ಶೋಧನೆ ಮಾಡುವ ಸಮಯ. ಈ ಸಂದರ್ಭದಲ್ಲಿ ಯಾವುದೇ ಒಂದು ಮತದ ಜನರನ್ನು ದೂಷಿಸುವುದು ಸರಿಯಲ್ಲ.
ಮತಾಂಧರು ಹಾಗೂ ಧಾರ್ವಿುಕ ಭಯೋತ್ಪಾದಕರು ಪ್ರತಿಯೊಂದು ಧರ್ಮದಲ್ಲಿ ಇದ್ದಾರೆ. ಭಯೋತ್ಪಾದನೆಗೆ ಧರ್ಮವಿಲ್ಲ. ಶಸ್ತ್ರಾಸ್ತ್ರಗಳ ಭಯೋತ್ಪಾದನೆ ಎಷ್ಟು ಕ್ರೂರವೋ, ಅಮಾನವೀಯ ಧಾರ್ವಿುಕ ಹಾಗೂ ಮಾಧ್ಯಮ ಭಯೋತ್ಪಾದನೆ ಕೂಡ ಅಷ್ಟೇ ಕ್ರೂರ. ಧಾರ್ವಿುಕ ಭಯೋತ್ಪಾದನೆಯ ಶಸ್ತ್ರಾಸ್ತ್ರಗಳು ಯಾವುದೆಂದರೆ ದ್ವೇಷ, ವಿಭಜನೆ, ಸುಳ್ಳು ಸುದ್ದಿ, ನನ್ನದು ಶ್ರೇಷ್ಠ ಧರ್ಮ, ಬೇರೆಯವರ ಧರ್ಮ ಕೀಳು ಇತ್ಯಾದಿ ಫ್ಯಾಸಿಸ್ಟ್ ತತ್ವ.
ಮಾಧ್ಯಮ ಭಯೋತ್ಪಾದನೆ ಯಾವುದೆಂದರೆ ಒಂದು ಸಮುದಾಯದ ಜನರ ಮೇಲೆ ದ್ವೇಷ, ಅಸೂಯೆ, ಅಸಹ್ಯ ಹುಟ್ಟಿಸುವ ಸಲುವಾಗಿ ನಿರಂತರ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡುವುದು. ಇವೆರಡೂ ಖಂಡನೀಯ. ನಾವೆಲ್ಲರೂ ಶಾಂತಿ ಮತ್ತು ಸಾಮರಸ್ಯದಿಂದ ಬಾಳುವ ಸದ್ಬುದ್ಧಿಯನ್ನು ನಾವು ನಂಬುವ ದೇವರು ನಮಗೆ ಕರುಣಿಸಲಿ.