ಹೃದಯ ಶ್ರೀಮಂತಿಕೆಯಿಂದ ಬಾಳೋಣ

ವಿಜಯವಾಣಿ (5)
Published on

ಎಂದಿನಂತೆ ರಾತ್ರಿ ಊಟದ ನಂತರ ಮೊಮ್ಮಕ್ಕಳು ‘ಅಜ್ಜಾ ಕಥೀ ಹೇಳ್ರೀ’ ಎಂದು ಕೇಳಿದರು. ನಗುತ್ತ ಅಜ್ಜ ಕಥೆ ಹೇಳಲಾರಂಭಿಸಿದರು. ಗೋವರ್ಧನ ಪರ್ವತವನ್ನು ಎತ್ತಿಹಿಡಿದ ಕೃಷ್ಣನ ಕಥೆ. ಇಂದ್ರ ದೇವರು ಕೋಪಗೊಂಡು ಧಾರಾಕಾರವಾಗಿ ಮಳೆಗೈಯ್ಯುತ್ತಿದ್ದಾರೆ. ಶ್ರೀಕೃಷ್ಣ ತನ್ನ ಕಿರು ಬೆರಳಿನಿಂದಲೇ ಗೋವರ್ಧನ ಗಿರಿಯನ್ನು ಎತ್ತಿ ಹಿಡಿದ. ಗೋಕುಲವಾಸಿಗಳೆಲ್ಲ ಗಾಬರಿಯಾದರು. ‘ಕೃಷ್ಣಾ ನಿನೊಬ್ಬನೇ ಹೇಗೆ ಎತ್ತಿ ಹಿಡಿದೀಯಾ..! ನಾವೂ ಕೈ ಜೋಡಿಸುತ್ತೇವೆ’ ಎಂದು ಗಾಬರಿಯಿಂದ ಎಲ್ಲರೂ ಒಂದೊಂದು ಕೋಲನ್ನು ತಂದು ಕೃಷ್ಣನೊಂದಿಗೆ ಗೋವರ್ಧನ ಪರ್ವತಕ್ಕೆ ಹಿಡಿದರು. ಸವೋತ್ತಮನಾದ ಶ್ರೀಕೃಷ್ಣ ಮುಗುಳ್ನಗುತ್ತ, ‘ಒಳ್ಳೆಯ ಕೆಲಸ ಮಾಡಿದ್ದೀರಿ. ನೀವೆಲ್ಲ ಕೈ ಜೋಡಿಸಿದ್ದೇ ನನಗೆ ಬಲ’ ಎಂದ. ಮೊಮ್ಮಕ್ಕಳೆಲ್ಲ, ‘ಅಜ್ಜಾ ಬರೀ ಇದೇ ಕಥೆ ಹೇಳ್ತೀರಿ ಯಾಕ?’ ಅಂತ ಕೇಳಿದರು. ಅದಕ್ಕೆ ಅಜ್ಜ, ‘ಸಾರ್ವಭೌಮ, ಸೃಷ್ಟಿಕರ್ತನಾದ ದೇವರೇ ಹೀಗೆ ಎಲ್ಲರೊಂದಿಗೆ ಎಲ್ಲರಂತೆ ನಟಿಸಿದ. ಮಕ್ಕಳೇ ಕಾರಣವಿಷ್ಟೇ ಸಂಘಟನೆ. ನೀವು ಎಲ್ಲರೊಂದಿಗೆ ಬೆರೆತು ಕೆಲಸ ಮಾಡುವುದನ್ನು ಕಲಿಯಬೇಕು. ಅದಕ್ಕೆ ಈ ಕಥೆಯನ್ನೇ ಮೇಲಿಂದ ಮೇಲೆ ಹೇಳುವೆ’ ಎಂದರು.

ಹೌದಲ್ಲವೇ. ಆ ದೇವರೇ ರಾಮನಾಗಿ ಭೂಮಿಗೆ ಬಂದ. ಆಗಲೂ ಸಹ ನರರನ್ನು, ವಾನರರನ್ನು, ಕೊನೆಗೆ ಅಳಿಲುಗಳನ್ನೂ ತನ್ನೊಂದಿಗೆ ಸೇರಿಸಿಕೊಂಡ. ಮಹಾ ಪರಾಕ್ರಮಿ ಹನುಮಂತನೇ ಇರುವಾಗ ಇವರ್ಯಾಕೆ ಎಂದನೇ? ಇಲ್ಲ. ನಮಗಾಗಿ ಬಂದವರನ್ನು ನಮ್ಮೊಟ್ಟಿಗೆ ಸೇರಿಸಿಕೊಂಡು ಮುಂದೆ ಸಾಗುವುದೇ ನಾಯಕನ ಗುಣ. ಯಾವ ಕಾರಣಕ್ಕೂ ಒಗ್ಗಟ್ಟು ಮುರಿಯಬಾರದು. ವ್ಯಕ್ತಿ ತಾನು ಎಷ್ಟೇ ದೊಡ್ಡ ಅಧಿಕಾರದಲ್ಲಿರಲಿ, ಬಲಶಾಲಿಯಾಗಿರಲಿ, ಶ್ರೀಮಂತನಾಗಿರಲಿ. ಅವನಲ್ಲಿ ಯಾವ ಸಣ್ಣ ವ್ಯಕ್ತಿ ಬಂದರೂ ಸಣ್ಣವನೆಂಬ ಕೀಳರಿಮೆ ಬಾರದಿದ್ದರೆ ಮಾತ್ರ ಆ ವ್ಯಕ್ತಿ ನಿಜವಾದ ದೊಡ್ಡ ವ್ಯಕ್ತಿ. ಎಲ್ಲರೊಂದಿಗೆ ಎಲ್ಲರಂತೆ ಬೆರೆಯುವ ಗುಣ ಬಹಳ ಅನನ್ಯ. ಎಲ್ಲರ ಕೈಗೆಟುಕುವುದಲ್ಲ. ಹೃದಯ ಶ್ರೀಮಂತಿಕೆಯವರಿಗೆ ಮಾತ್ರ ಸಾಧ್ಯ.

ಸಂಘಟನೆಗೆ ಅನೇಕ ಮುಖಗಳು. ಒಂದು ಪರಿವಾರದ ಸಂಘಟನೆ, ಇನ್ನೊಂದು ಸಾಮಾಜಿಕ ಸಂಘಟನೆ. ಪರಿವಾರದಲ್ಲಾಗಲೀ, ಸಂಘ-ಸಂಸ್ಥೆಗಳಲ್ಲಾಗಲೀ ಎಲ್ಲವನ್ನೂ ಒಬ್ಬರೇ ಮಾಡುವ ಸಾಮರ್ಥ್ಯ ವ್ಯಕ್ತಿಗಿದ್ದರೂ ಅಲ್ಲಿರುವವರನ್ನು ಜೊತೆಗೆ ಸೇರಿಸಿಕೊಂಡು ಸಂಘಟನೆಯೊಂದಿಗೆ ಕಾರ್ಯ ಮಾಡುವುದರಲ್ಲಿಯೇ ಇದೆ ದೊಡ್ಡತನ. ಎಲ್ಲರಿಗೂ ಮೊದಲ ಹೆಜ್ಜೆ ಇಡಲು ಅವಕಾಶ ಕೊಟ್ಟಾಗಲೇ ಅನುಭವದ ಪಯಣ ಪ್ರಾರಂಭವಾಗುತ್ತದೆ. ಹಿರಿಯರ ಅನುಭವ, ಕಿರಿಯರ ಬಲೋತ್ಸಾಹ ಎರಡೂ ಸೇರಿದರೆ ಕಾರ್ಯದ ಶೈಲಿ ಆರೋಗ್ಯಕರವಾಗಿರುತ್ತದೆ. ಕಾರ್ಯ ಸಾಧನೆಗೆ ಸಂಘಟನೆಯಲ್ಲಿ ಇರುವ ಶಕ್ತಿ ಏಕಾಂಗಿಯಾಗಿ ಮಾಡುವುದರಲ್ಲಿಲ್ಲ. ಮೊದಲೆಲ್ಲ ಯಾವುದೇ ಮಂಗಳಕಾರ್ಯವಿದ್ದರೂ ಪರಿವಾರದವರೆಲ್ಲ ಮುಂಚೆಯೇ ಸೇರುತ್ತಿದ್ದರು. ಜೊತೆಯಾಗಿ ಎಲ್ಲ ಕೆಲಸಗಳನ್ನು ಹಂಚಿಕೊಂಡು ಮಾಡುತ್ತಿದ್ದರು. ಅದರಲ್ಲಿ ಏನೋ ಸಂತಸ, ಬಾಂಧವ್ಯ, ಒಗ್ಗಟ್ಟು ಕಾಣುತ್ತಿತ್ತು. ಆದರೆ ಈಗ ಅಂತಹ ಯಾವ ಬಾಂಧವ್ಯಗಳೂ ಬಹುಶಃ ಉಳಿದಂತಿಲ್ಲ. ಕಾರಣ ಯಾರೂ ಬೇಕಿಲ್ಲ. ‘ನಾನೇ ಎಲ್ಲ ಮಾಡಿಕೊಳ್ಳುವೆ’ ಎಂಬ ಮನೋಭಾವನೆಗೆ ಬದಲಾಗಿಬಿಟ್ಟಿದ್ದೇವೆ.

ಮನುಷ್ಯ ಎಂದಿಗೂ ಸಂಘಜೀವಿ. ಹಲವರೊಂದಿಗೆ ಬೆರೆತಾಗಲೇ ಹೊಸ ಹೊಸ ವಿಚಾರಗಳ ಆವಿಷ್ಕಾರವಾಗುತ್ತದೆ. ತಮಗಿಂತ ಕೆಳಗಿನವರ ಮೇಲೆ ಆಡಳಿತ ಮಾಡುವುದು ಬಹಳ ಸುಲಭ. ಆದರೆ ಜೊತೆಗೆ ಸೇರಿ ಎಲ್ಲರೊಂದಿಗೆ ಸಂಘಟಿತರಾಗುವುದು ದೊಡ್ಡತನ. ಇದು ಇಬ್ಬರೇ ಇದ್ದಾಗಲೂ ಇರಬೇಕು, ಅನೇಕರಿದ್ದಾಗಲೂ ಬರಬೇಕು. ಕಾರ್ಯ ಸಾಧನೆಗೆ ಅತ್ಯವಶ್ಯಕವಾದ ಸಾಧನವೇ ಸಂಘಟನೆ. ಇದೊಂದಿದ್ದರೆ ಪರಸ್ಪರ ಸೌಹಾರ್ದ ಹಾಗೂ ಪರಿವಾರದಲ್ಲಿ ಆರೋಗ್ಯಕರ ವಾತಾವರಣಕ್ಕೆ ಕಾರಣವಾಗುತ್ತದೆ.

-ಮೇಧಾ ಪ್ರಹ್ಲಾದಾಚಾರ್ಯ ಜೋಶಿ(ಲೇಖಕರು ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net