ಬಿಹಾರ ಚುನಾವಣೆ ಘೋಷಣೆ: ಅ. 28ರಿಂದ 3 ಹಂತಗಳ ಮತದಾನ, ನ.10ಕ್ಕೆ ಫಲಿತಾಂಶ

941545
Published on

ನವದೆಹಲಿ: ಬಿಹಾರ ವಿಧಾನ ಸಭಾ ಚುನಾವಣೆ ಘೋಷಣೆಯಾಗಿದ್ದು, ಅಕ್ಟೋಬರ್ 28, ನವೆಂಬರ್ 3 ಮತ್ತು 7ರಂದು ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಫಲಿತಾಂಶ ನವೆಂಬರ್ 10 ರಂದು ಪ್ರಕಟವಾಗಲಿದೆ. ಬಿಹಾರ ವಿಧಾನ ಸಭೆಯ 243 ಕ್ಷೇತ್ರಗಳ ಪೈಕಿ 38 ಸ್ಥಾನಗಳು ಎಸ್​ಸಿ, 2 ಸ್ಥಾನ ಎಸ್​ಟಿಗೆ ಮೀಸಲು. ಅಕ್ಟೋಬರ್ 1ರಂದು ಚುನಾವಣೆಯ ಅಧಿಸೂಚನೆ ಪ್ರಕಟವಾಗಲಿದೆ. ನಾಮಪತ್ರ ಸಲ್ಲಿಕೆಗೆ ಅಕ್ಟೋಬರ್ 8 ಕೊನೇ ದಿನ. ಅಕ್ಟೋಬರ್ 9ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಅಕ್ಟೋಬರ್ 12ರಂದು ನಾಮಪತ್ರ ಹಿಂಪಡೆಯಲು ಕೊನೇ ದಿನವಾಗಿರಲಿದೆ.

ಮೂರು ಹಂತಗಳ ಚುನಾವಣೆ ಮೊದಲ ಹಂತ (ಅಕ್ಟೋಬರ್ 28) - 16 ಜಿಲ್ಲೆಗಳ 71 ಕ್ಷೇತ್ರಗಳು - 31,000 ಮತಗಟ್ಟೆಗಳು ಎರಡನೇ ಹಂತ (ನವೆಂಬರ್ 3) - 17 ಜಿಲ್ಲೆಗಳ 94 ಕ್ಷೇತ್ರಗಳು - 42,000 ಮತಗಟ್ಟೆಗಳು ಮೂರನೇ ಹಂತ(ನವೆಂಬರ್ 7) - 15 ಜಿಲ್ಲೆಗಳ 78 ಕ್ಷೇತ್ರಗಳು- 33,500 ಮತಗಟ್ಟೆಗಳು

ಕೋವಿಡ್ 19 ಸೋಂಕು ಬಂದ ನಂತರದಲ್ಲಿ ನಡೆಯುತ್ತಿರುವ ಮೊದಲ ಚುನಾವಣೆ ಇದು. ಜಗತ್ತಿನ 70 ರಾಷ್ಟ್ರಗಳು ಕೋವಿಡ್ ಕಾರಣಕ್ಕೆ ಚುನಾವಣೆಯನ್ನೇ ಮುಂದೂಡಿವೆ. ಇಂದು ದೇಶದ ಅತಿದೊಡ್ಡ ರಾಜ್ಯಗಳಲ್ಲಿ ಒಂದಾದ ಬಿಹಾರದ ಚುನಾವಣಾ ದಿನಾಂಕ ಘೋಷಣೆಯಾಗಿದೆ. ಕೋವಿಡ್​ 19 ಮಾರ್ಗಸೂಚಿ ಪಾಲಿಸುವುದಕ್ಕಾಗಿ ನೋಡಲ್ ಹೆಲ್ತ್ ಆಫೀಸರ್​ಗಳನ್ನು ನೇಮಕ ಮಾಡಲಾಗುತ್ತಿದೆ. ಪ್ರತಿ ಮತಗಟ್ಟೆಯಲ್ಲಿ 1,500 ಮತದಾರರ ಬದಲು 1,000 ಮತದಾರರಷ್ಟೇ ಮತಚಲಾಯಿಸಲು ಅವಕಾಶ ಮಾಡಿಕೊಡಲಾಗುತ್ತಿದೆ. ಮತದಾನದ ಅವಧಿಯನ್ನು ಒಂದು ಗಂಟೆ ಹೆಚ್ಚಿಸಲಾಗಿದೆ. ಅಂದರೆ ಬೆಳಗ್ಗೆ 6ರಿಂದ ರಾತ್ರಿ 7 ರ ತನಕ ಮತದಾನಕ್ಕೆ ಅವಕಾಶ ದೊರೆಯಲಿದೆ ಎಂದು ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ಹೇಳಿದರು.

ಚುನಾವಣೆಗಾಗಿ 7 ಲಕ್ಷಕ್ಕೂ ಹೆಚ್ಚು ಹ್ಯಾಂಡ್ ಸ್ಯಾನಿಟೈಸರ್, 46 ಲಕ್ಷ ಮಾಸ್ಕ್, 6 ಲಕ್ಷ ಪಿಪಿಇ ಕಿಟ್​, 6.7 ಲಕ್ಷ ಫೇಸ್​ ಶೀಲ್ಡ್​, 23 ಲಕ್ಷ ಜೋಡಿ ಕೈಗವಸುಗಳನ್ನು ಹೊಂದಿಸಲಾಗಿದೆ. ವಿಶೇಷವಾಗಿ ಮತದಾರರಿಗೆ ಕೊಡುವುದಕ್ಕಾಗಿ 7.2 ಕೋಟಿ ಏಕಬಳಕೆಯ ಕೈಗವಸು ಹೊಂದಿಸಲಾಗಿದೆ ಎಂದು ಅರೋರಾ ತಿಳಿಸಿದರು.

ಪತ್ರಿಕಾಗೋಷ್ಠಿಯ ವೀಕ್ಷಣೆಗೆ ಮೇಲಿನ ವಿಡಿಯೋ ಕ್ಲಿಕ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net