ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಪುಟ್ಟ ಪೋರಿ ಸಾಧನೆ

Published on

ಸಕಲೇಶಪುರ : ಅಪ್ಪ, ಅಮ್ಮ ಎಂದು ತೊದಲು ಮಾತಿನಲ್ಲಿ ಕರೆಯುವ ವಯಸ್ಸಿನಲ್ಲಿ ಪುಟ್ಟ ಬಾಲಕಿಯೊಬ್ಬಳು ತನ್ನ ಅದ್ಭುತ ಜ್ಞಾಪಕ ಶಕ್ತಿಯಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಗಳಿಸಿದ್ದಾಳೆ.

ಒಂದು ವರ್ಷ ಎಂಟು ತಿಂಗಳ ವಯಸ್ಸಿನ ಈ ಬಾಲಕಿ ತನ್ನ ವಯಸ್ಸಿಗೆ ಮೀರಿದ ಬುದ್ಧಿವಂತಿಕೆಯನ್ನು ತೋರಿಸಿ ಎಲ್ಲರನ್ನೂ ಆಶ್ಚರ್ಯಗೊಳಿಸಿದ್ದಾಳೆ. ಪಟ್ಟಣದ ಮಹೇಶ್ವರಿ ನಗರದ ತೌಸಿಫ್ ಮತ್ತು ಹಲೀಮಾ ಮಶ್ವತ್ ದಂಪತಿಯ ಪುತ್ರಿ ಮರಿಯಮ್ ಮೀಮ್ ತೌಸಿಫ್ ತೊದಲು ಮಾತಿನಲ್ಲೇ ಚುರುಕಾಗಿ ಉತ್ತರಿಸುವ, ತನ್ನ ಪಾಠವನ್ನು ನಿಖರವಾಗಿ ಹೇಳುವ ಸಾಮರ್ಥ್ಯ ಹೊಂದಿದ್ದಾಳೆ.

ಮರಿಯಮ್ ಮೀಮ್ ತೌಸೀಫ್ 10 ರಾಷ್ಟ್ರಗಳ ಧ್ವಜಗಳನ್ನು ಗುರುತಿಸಬಲ್ಲಳು. ಜತೆಗೆ, 13 ಪ್ರಾಣಿಗಳ ಹೆಸರು, 16 ಪಕ್ಷಿಗಳ ಹೆಸರು, 9 ಹೂವುಗಳ ಹೆಸರು, 5 ವಾಹನಗಳ ಹೆಸರು, 13 ದೇಹದ ಅಂಗಾಂಗಗಳ ಹೆಸರು, 16 ತರಕಾರಿಗಳ ಹೆಸರು ಮತ್ತು 14 ಹಣ್ಣುಗಳ ಹೆಸರನ್ನು ನಿಖರವಾಗಿ ನೆನಪಿಟ್ಟುಕೊಳ್ಳುವ ಅಪರೂಪದ ಸಾಮರ್ಥ್ಯವನ್ನು ತೋರಿಸಿದ್ದಾಳೆ. ಅಲ್ಲದೆ 10 ವಿವಿಧ ವಸ್ತುಗಳ ಹೆಸರನ್ನು ಗುರುತಿಸಬಲ್ಲಳು, ಇಂಗ್ಲಿಷ್ ಅಕ್ಷರಮಾಲೆಯ ಪ್ರತಿ ಅಕ್ಷರಕ್ಕೆ ಸಂಬಂಧಿಸಿದ ಪದಗಳನ್ನು ಹೇಳಬಲ್ಲಳು, ಒಂದರಿಂದ ಹತ್ತರವರೆಗೆ ಸಂಖ್ಯೆಗಳನ್ನು ಎಣಿಸಬಲ್ಲಳು, ಎರಡು ಇಂಗ್ಲಿಷ್ ನರ್ಸರಿ ಪದ್ಯಗಳನ್ನು ಸರಾಗವಾಗಿ ಪಠಿಸಬಲ್ಲಳು.

ಅವಳ ತೊದಲು ನುಡಿಯಲ್ಲೇ ಹರಿಯುವ ಚುರುಕಾದ ಮಾತು ಮತ್ತು ಅದ್ಭುತ ಜ್ಞಾಪಕಶಕ್ತಿಯಿಂದ ಎಲ್ಲರೂ ನಿಬ್ಬೆರಗಾಗಿದ್ದಾರೆ. ಪುಟ್ಟ ವಯಸ್ಸಿನಲ್ಲೇ ರಾಷ್ಟ್ರಮಟ್ಟದ ಸಾಧನೆ ಮಾಡಿರುವ ಮರಿಯಮ್ ಮೀಮ್ ತೌಸೀಫ್ ಅವರನ್ನು ನೆರೆಹೊರೆಯವರು, ಬಂಧು-ಬಳಗ ಮತ್ತು ಶಿಕ್ಷಣ ಪ್ರೇಮಿಗಳು ಮೆಚ್ಚಿ ಅಭಿನಂದಿಸಿದ್ದಾರೆ. ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ತಂಡವು ಬಾಲಕಿಯ ಈ ವಿಶಿಷ್ಟ ಸಾಮರ್ಥ್ಯವನ್ನು ಗುರುತಿಸಿ ಅಚೀರ್ವಸ್ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net