

ಶಿವಮೊಗ್ಗ: ಶಿವಮೊಗ್ಗ ಸಮೀಪದ ಸಕ್ರೆಬೈಲು ಆನೆ ಬಿಡಾರದ ಮರಿಯಾನೆಗೆ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಾಮಕರಣ ಮಾಡಲಾಗಿದೆ. ಎರಡು ತಿಂಗಳ ಹಿಂದೆ ಬಿಡಾರಕ್ಕೆ ಭೇಟಿ ನೀಡಿ ಮರಿಯಾನೆಯನ್ನು ಮುದ್ದಿಸಿದ್ದ ಪುನೀತ್ ಅವರ ಹೆಸರನ್ನಿಡುವ ಮೂಲಕ ದಿವಂಗತ ನಟನಿಗೆ ಅರಣ್ಯ ಇಲಾಖೆ ವಿಶೇಷ ಗೌರವ ಸಲ್ಲಿಸುತ್ತಿದೆ.
ಇಂದು ಸಕ್ರೆಬೈಲು ಆನೆ ಬಿಡಾರದಲ್ಲಿ ತಾಯಿ ಆನೆಯಿಂದ ಮರಿಯಾನೆಯನ್ನು ಬೇರ್ಪಡಿಸುವ ವೀನಿಂಗ್ ಕಾರ್ಯಕ್ರಮ ನಡೆಯುತ್ತಿದೆ. ಇದೇ ವೇಳೆ ತಾಯಿ ನೇತ್ರಾ ಆನೆಯಿಂದ ಬೇರ್ಪಡುತ್ತಿರುವ ಆನೆಮರಿಗೆ ಪುನೀತ್ ರಾಜ್ಕುಮಾರ್ ಹೆಸರು ಇಡಲಾಗುತ್ತಿದೆ. ಈ ಸಂದರ್ಭದಲ್ಲಿ ಎರಡು ತಿಂಗಳ ಹಿಂದಷ್ಟೇ ಪುನೀತ್, ಸಕ್ರೆಬೈಲು ಆನೆ ಬಿಡಾರಕ್ಕೆ ಆಗಮಿಸಿ ಈ ಮರಿಯನ್ನು ಮುದ್ದಿಸಿದ್ದನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಮರಿಸಿದ್ದಾರೆ.
ಇದುವರೆಗೆ ದೇವರ ಹೆಸರು ಹಾಗೂ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳ ಹೆಸರನ್ನು ಮರಿ ಆನೆಗಳಿಗೆ ಇಡಲಾಗುತ್ತಿತ್ತು. ಇದೇ ಮೊದಲ ಬಾರಿಗೆ ಮರಿ ಆನೆಗೆ ಚಿತ್ರನಟರೊಬ್ಬರ ಹೆಸರನ್ನು ಇಡಲಾಗುತ್ತಿದೆ.