

ಚಿಕ್ಕಮಗಳೂರು: ಜೀವ ಸಂಕುಲದ ನೋವಿಗೆ ಸ್ಪಂದಿಸುವ ಗುಣಧರ್ಮ ನಮ್ಮದಾದರೆ ಆರೋಗ್ಯಪೂರ್ಣ ಸಮಾಜ ಕಟ್ಟಬಹುದು ಎಂಬುದನ್ನು ನಮ್ಮೆಲ್ಲ ಸಾಹಿತ್ಯಗಳು ಸಾರಿವೆ. ಮನಸ್ಸು ಕಟ್ಟುವ ಕ್ರಿಯೆಗೆ ಸಾಹಿತ್ಯ ಪೂರಕ ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ನಿಕಟಪೂರ್ವ ಜಿಲ್ಲಾಧ್ಯಕ್ಷ ಚಟ್ನಳ್ಳಿ ಮಹೇಶ್ ತಿಳಿಸಿದರು.
ಶ್ರಾವಣ ಮಾಸದ ಅಂಗವಾಗಿ ತಾಲೂಕಿನ ತೇಗೂರು ಮುರಾರ್ಜಿ ವಸತಿ ವಿಜ್ಞಾನ ಪದವಿಪೂರ್ವ ಕಾಲೇಜಿನಲ್ಲಿ ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನಿಂದ ಗುರುವಾರ ಆಯೋಜಿಸಿದ್ದ ಕಟ್ಟುವ ಕ್ರಿಯೆಗೆ ಸಾಹಿತ್ಯ ಪ್ರೇರಣೆ ಕುರಿತ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮನೆಕಟ್ಟುವಾಗ ಗೋಡೆ ಕಟ್ಟಬೇಕು. ಮನಸ್ಸು ಕಟ್ಟುವಾಗ ಬಾಂಧವ್ಯ ಕಟ್ಟಬೇಕು. ಸಾಹಿತ್ಯ ಸೇತುವೆಯಾಗಿ ಕಟ್ಟುವ ಕ್ರಿಯೆಗೆ ಪ್ರೇರಣೆಯಾಗುತ್ತದೆ. ಸಮಾಜವನ್ನು ಸದೃಢ ಸಮರ್ಥವಾಗಿ ಕಟ್ಟಲು ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ ಬಹಳ ಮುಖ್ಯವಾಗುತ್ತದೆ ಎಂದರು.
ಯುವಶಕ್ತಿಯೇ ನೆಲದ ಸಾರ. ಈ ಸತ್ವವೇ ಹಾಳಾದರೆ ದೇಶಕ್ಕೆ ಭವಿಷ್ಯ ಇರುವುದಿಲ್ಲ. ಯುವಶಕ್ತಿಯ ಪ್ರವಾಹಕ್ಕೆ ಅಣೆಕಟ್ಟೆ ಕಟ್ಟಿ ಸರಿಯಾದ ದಿಕ್ಕು ತೋರಿಸುವುದೇ ಸಾಹಿತ್ಯ, ಸಂಸ್ಕೃತಿಯ ಹೊಣೆಗಾರಿಕೆ. ಕಟ್ಟುವ ಕ್ರಿಯೆಗೆ ಬಳಕೆ ಮಾಡಿಕೊಳ್ಳುವ ಜಾಣ್ಮೆ ಸಾಹಿತ್ಯ ತೋರಿಸಿಕೊಂಡೇ ಬಂದಿದೆ ಎಂದರು.
ಪ್ರಾಚಾರ್ಯ ಆರ್.ರುದ್ರಯ್ಯ ಮಾತನಾಡಿ, ಶಿಕ್ಷಣ ಪ್ರತಿಯೊಬ್ಬರಿಗೂ ದೊರೆತಾಗ ಸಮ ಸಮಾಜ ನಿರ್ಮಾಣ ಸಾಧ್ಯ. ಸಾಹಿತ್ಯ ಮತ್ತು ಸಂಸ್ಕೃತಿ ಹೊಸ ಸಮಾಜ ನಿರ್ಮಾಣಕ್ಕೆ ಪೂರಕ ವಾತಾವರಣ ಸೃಷ್ಟಿಸುತ್ತವೆ ಎಂದರು.
ಮಾಧ್ಯಮ ಪರಿಷತ್ ಅಧ್ಯಕ್ಷ ಪ್ರಭುಲಿಂಗಶಾಸ್ತ್ರಿ ಮಾತನಾಡಿ, ಶ್ರಾವಣ ಮಾಸ ಪರ್ಯಂತ 35 ಕಡೆ ಸಮಾಜಕ್ಕೆ ಪೂರಕ ವಿಚಾರಗಳನ್ನು ಚರ್ಚಿಸುವ, ಚಿಂತಿಸುವ, ಸಂವಾದಿಸುವ ಆಶಯದೊಂದಿಗೆ ಸಮಾಜಮುಖಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ಸಂಚಾಲಕ ರುದ್ರೇಶ್, ಉಪನ್ಯಾಸಕರಾದ ಗೋವಿಂದರಾಜು, ಲತಾ ಇತರರಿದ್ದರು.