

ಬೈಬಲಿನ ಪ್ರಥಮ ಗ್ರಂಥ ಆದಿಕಾಂಡದಲ್ಲಿ ಅಧ್ಯಾಯ 1 ವಾಕ್ಯ 21ರಿಂದ 28ರವರೆಗೆ ನಾವು ಹೀಗೆ ಓದುತ್ತೇವೆ: ದೇವರು ಮನುಷ್ಯವನ್ನು ತನ್ನ ಸ್ವರೂಪದಲ್ಲಿ ಸೃಷ್ಟಿಸಿದನು. ಅವರನ್ನು ಗಂಡು- ಹೆಣ್ಣಾಗಿ ನಿರ್ವಿುಸಿದನು. ನೀವು ಪ್ರಕೃತಿ ಮತ್ತು ಭೂಮಿಯಲ್ಲಿ ಚಲಿಸುವ ಎಲ್ಲಾ ಜೀವಿಗಳ ಮೇಲೆ ದೊರೆತನ ಮಾಡಿರಿ ಅಥವಾ ಅವುಗಳ ರಕ್ಷಕರಾಗಿರಿ ಎಂದನು. ಎಲ್ಲವೂ ಸರಿಯಾಗಿ ಇತ್ತು. ಪ್ರಕೃತಿಯಲ್ಲಿ ಒಂದು ನೈಸರ್ಗಿಕ ಸಮತೋಲನ ಹಾಗೂ ಸಮರಸವಿತ್ತು. ಆದರೆ ಕಾಲ ಕಳೆದಂತೆ ಪೃಕೃತಿಯ ರಕ್ಷಕನಿದ್ದ ಮಾನವ ಭಕ್ಷಕನಾದ. ಪ್ರಕೃತಿಯ ಸಮತೋಲನದಲ್ಲಿ ಹಸ್ತಕ್ಷೇಪ ಮಾಡತೊಡಗಿದ.
ಅವೈಜ್ಞಾನಿಕ ಗಣಿಗಾರಿಕೆ, ಮರಳುಗಾರಿಕೆ, ಪರಿಸರ ಮಾಲಿನ್ಯ, ಕಾಡುಗಳ ನಾಶ ಇತ್ಯಾದಿ. ಅಲ್ಲಿಂದ ಆರಂಭವಾಗುತ್ತದೆ ಪ್ರಕೃತಿಯ ಹವಾಮಾನ ಬದಲಾವಣೆ, ತಾಪಮಾನ ಏರಿಕೆ ಇತ್ಯಾದಿ. ಆರಂಭದ ನೈಸರ್ಗಿಕ ಸಮತೋಲನ ಕಳಕೊಂಡ ಪ್ರಕೃತಿ ಮುನಿಸಿಕೊಂಡು ತನ್ನ ಪ್ರತಿರೋಧವನ್ನು ತೋರುತ್ತಿರುವುದನ್ನು ನಾವು ಇತ್ತೀಚಿನ ವರ್ಷಗಳಲ್ಲಿ ಪದೇ ಪದೇ ಕಾಣುತ್ತಿದ್ದೇವೆ. ಲಾಸ್ ಏಂಜಲೀಸ್ನಲ್ಲಿ ಇಂದು ಕಾಣುವ ಕಾಡ್ಗಿಚ್ಚು ಇದೇ ಪ್ರತಿರೋಧದ ಒಂದು ಉದಾಹರಣೆ. ಈ ವಿಕೋಪಕ್ಕೆ ತಾಪಮಾನ ಏರಿಕೆ ಒಂದು ಕಾರಣವಾದರೆ, ಮಾನವನ ಹಸ್ತಕ್ಷೇಪ ಕೂಡ ಕಾರಣವೆನ್ನುತ್ತಿದೆ ಒಂದು ತನಿಖೆ. ಇದೇ ಕಾರಣಕ್ಕಾಗಿ ಒಂದು ಕಂಪೆನಿಯ ಸಿಇಓರನ್ನು ಪೋಲಿಸರು ಇಷ್ಟರಲ್ಲೇ ಬಂದಿಸಿದ್ದಾರೆ. ಇಂತಹ ಪ್ರಕೃತಿ ವಿಕೋಪಗಳು ಸಂಭವಿಸಿದಾಗ ನಾವು, ದೇವರೇ ಯಾಕೆ ಈ ಕಷ್ಟ ಎಂದು
ದುಃಖಿಸುತ್ತೇವೆ. ಆದರೆ ಈ ವಿಕೋಪಕ್ಕೆ ದೇವರು ಕಾರಣರಲ್ಲ. ಯಾವಾಗ ಮಾನವ ತನ್ನ ಸ್ವಾರ್ಥಕ್ಕಾಗಿ ಪ್ರಕೃತಿಯ ಸಮತೋಲನವನ್ನು ಕೆಡವುತ್ತಾ ಹೋದನೋ ಅಲ್ಲಿಂದ ಆರಂಭವಾದುದು-ಸುನಾಮಿ, ಚಂಡಮಾರುತ, ಬರಗಾಲ, ಕರೋನಾ, ಲಾಸ್ ಏಂಜಲೀಸ್ ಕಾಡ್ಗಿಚ್ಚು ಇತ್ಯಾದಿ. ಇದು ನಮಗೆಲ್ಲರಿಗೂ ಒಂದು ಎಚ್ಚರಿಕೆ ಗಂಟೆ. ನಾವು ಜಾಗ್ರತರಾಗಿ ಕಾರ್ಯ ಪೃವೃತ್ತರಾಗದಿದ್ದರೆ ನಮ್ಮ ವಿನಾಶ ಖಂಡಿತ. ನೆಲ ಜಲ, ವಾಯು, ಪರಿಸರ ಸಂರಕ್ಷಣೆ ನಮ್ಮ ಆದ್ಯ ಕರ್ತವ್ಯವಾಗಲಿ.