ಪಾಲಿಕೆ ನೌಕರರ ಅಹವಾಲು ಆಲಿಸಿರಿ: ಕುಮಾರಸ್ವಾಮಿ: Urge Cong govt

hdk
Published on

ಬೆಂಗಳೂರು: ವೃಂದ ಮತ್ತು ನೇಮಕ ನಿಯಮ ತಿದ್ದುಪಡಿ ಸೇರಿ ಹಲವು ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ 10 ಪಾಲಿಕೆಗಳ ನೌಕರರ ಮುಷ್ಕರಕ್ಕೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಧ್ವನಿಗೂಡಿಸಿದ್ದಾರೆ.

ಶಾಸಕರ ದುಃಖ-ದುಮ್ಮಾನ, ಅಹವಾಲು ಕೇಳಿದರಷ್ಟೇ ಸಾಲದು. ಅನಿರ್ದಿಷ್ಟ ಮುಷ್ಕರ ನಡೆಸುತ್ತಿರುವ ಪಾಲಿಕೆಗಳ ನೌಕರರ ಕಷ್ಟಕಾರ್ಪಣ್ಯ ಆಲಿಸುವ ಹೃದಯವಂತಿಕೆ ಬೇಕು ಎಂದು ರಾಜ್ಯ ಸರ್ಕಾರಕ್ಕೆ ಎಚ್.ಡಿ.ಕುಮಾರಸ್ವಾಮಿ ತಿವಿದಿದ್ದಾರೆ.

ಪಾಲಿಕೆಗಳ ಸಿಬ್ಬಂದಿ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸಿಎಂ ತುರ್ತು ಗಮನಹರಿಸಬೇಕು. ಆದರೆ ಶಾಸಕರ ಬಂಡಾಯ ತಣಿಸಲು, ಕಾಂಗ್ರೆಸ್ ಪಕ್ಷದ ಬೇಗುದಿ ಕಡಿಮೆ ಮಾಡಲು ಸಿಎಂ, ಡಿಸಿಎಂ ಅವರಿಗೆ ಸಮಯವೇ ಸಿಗುತ್ತಿಲ್ಲವೆಂದು ಟೀಕಿಸಿದ್ದಾರೆ.

ಹಗಲಿರುಳು ಜನರಿಗಾಗಿ ದುಡಿಯುವವರ ಬದುಕಿಗೂ ಗ್ಯಾರಂಟಿ ಕೊಡಬೇಕಲ್ಲವೆ ? ಬೇಡಿಕೆಗಳನ್ನು ಈಡೇರಿಸುವುದಕ್ಕೆ ವಿಳಂಬವೇಕೆ ? ಪಾಲಿಕೆಗಳ ನಿತ್ಯದ ಯಾವ ಕೆಲಸಕಾರ್ಯಗಳು ನಿಲ್ಲಬಾರದು. ಸ್ವಚ್ಛತೆ, ಸ್ಥಳೀಯ ಆಡಳಿತದ ದೃಷ್ಟಿಯಿಂದ ಪಾಲಿಕೆಗಳು ಮಹತ್ವ ಹೊಂದಿವೆ ಎಂಬುದನ್ನು ಆಡಳಿತಗಾರರು ಮರೆಯಬಾರದು ಎಂದು ಎಚ್.ಡಿ.ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.

ಉದ್ಧಟತನ ಪ್ರದರ್ಶನ

ರಾಜ್ಯದ 10 ಪಾಲಿಕೆಗಳ 25 ಸಾವಿರ ನೌಕರರು ನ್ಯಾಯಯುತ ಬೇಡಿಕೆ ಈಡೇರಿಸಲು ಒತ್ತಾಯಿಸಿ ಗುರುವಾರದಿಂದಲೇ ಅನಿರ್ದಿಷ್ಟ ಮುಷ್ಕರಕ್ಕೆ ಇಳಿದಿದ್ದಾರೆ. ಆದರೆ ರಾಜ್ಯ ಸರ್ಕಾರ ಕಡೆಗಣಿಸುವ ಮೂಲಕ ಉದ್ಧಟತನ ಪ್ರದರ್ಶಿಸಿದೆ ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಏಳನೇ ವೇತನ ಆಯೋಗದ ಸೌಲಭ್ಯ ಅನ್ವಯ, ವೃಂದ ಮತ್ತು ನೇಮಕ ನಿಯಮಗಳ ತಿದ್ದುಪಡಿ ಕರಡು ಅಧಿಸೂಚನೆ ಪ್ರಕಟ, ಸರ್ಕಾರಿ ನೌಕರರಿಗೆ ಜಾರಿ ಮಾಡಿರುವ ಕೆಜಿಐಡಿ, ಜಿಪಿಎ್ ಸೌಲಭ್ಯ ಅನ್ವಯ ಮುಂತಾದ ಬೇಡಿಕೆಗಳು ನ್ಯಾಯಸಮ್ಮತವಾಗಿವೆ ಎಂದಿದ್ದಾರೆ.

ನಗರಗಳ ಸ್ವಚ್ಛತೆ, ಉತ್ತಮ ಪರಿಸರ ನಿರ್ವಹಣೆಯಲ್ಲಿ ಮಹಾನಗರ ಪಾಲಿಕೆಗಳ ಅಧಿಕಾರಿ, ನೌಕರರ ಶ್ರಮ ಮಹತ್ವದ್ದಾಗಿದೆ. ಮಾನವೀಯತೆ, ಆಡಳಿತದ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಈ ಕೂಡಲೇ ಮಧ್ಯೆ ಪ್ರವೇಶಿಸಿ, ಸೂಕ್ತ ಆಶ್ವಾಸನೆ ನೀಡಿ ಮುಷ್ಕರ ವಾಪಸ್ ಪಡೆಯಲು ಮನವೊಲಿಸಬೇಕು ಎಂದು ಆರ್.ಅಶೋಕ್ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net