ನೀರಿನ ಸಮಸ್ಯೆ ಇರುವ ಗ್ರಾಮಗಳನ್ನು ಪಟ್ಟಿ ಮಾಡಿ: ಡಿಸಿ

dc meeting
ಬರ ನಿರ್ವಹಣೆ ಹಾಗೂ ಮುಂಗಾರು ಸಿದ್ಧತೆ ಕುರಿತು ಗುರುದತ್ತ ಹೆಗಡೆ ವಿಡಿಯೋ ಕಾನ್ಫರೆನ್ಸ್ ಮೂಲಕ ತಾಲೂಕು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಸ್ನೇಹಲ್ ಲೋಖಂಡೆ, ರಾಜೇಂದ್ರ, ಗಿರೀಶ್ ಇತರರಿದ್ದರು.
Published on

ಶಿವಮೊಗ್ಗ: ತಾಲೂಕುಗಳಲ್ಲಿ ಕುಡಿಯುವ ನೀರು ಸರಬರಾಜು ಮಾಡಲು ಅನುಮೋದನೆ ಪಡೆದಿರುವ ಟ್ಯಾಂಕರ್‌ಗಳಿಗೆ ಕಡ್ಡಾಯವಾಗಿ ಜಿಪಿಎಸ್ ಅಳವಡಿಸಬೇಕು. ಪ್ರತಿ 15 ದಿನಗಳಿಗೊಮ್ಮೆ ಈ ಟ್ಯಾಂಕರ್‌ಗಳನ್ನು ಬಿಲ್‌ಗಳನ್ನು ಪರಿಶೀಲಿಸಿ ದೃಢೀಕರಿಸಬೇಕು. ಯಾವುದೇ ಬಿಲ್‌ಗಳನ್ನು ಬಾಕಿ ಇರಿಸಬಾರದು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೂಚಿಸಿದರು.

ಬರ ನಿರ್ವಹಣೆಗೆ ಸಂಬಂಧಿಸಿ ತಹಸೀಲ್ದಾರರು, ತಾಪಂ ಇಒಗಳು ಹಾಗೂ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಬುಧವಾರ ಸಭೆ ನಡೆಸಿದ ಅವರು, ಸಂಬಂಧಿಸಿದ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದರು.
ಟ್ಯಾಂಕರ್‌ಗಳ ಮೂಲಕ ಸಮಪರ್ಕವಾಗಿ ನೀರು ಪೂರೈಕೆ ಆಗುತ್ತಿದೆಯೇ ಎಂಬುದನ್ನು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಇಂಜಿನಿಯರ್‌ಗಳು ಪರಿಶೀಲಿಸಬೇಕು. ವಾರಕ್ಕೊಮ್ಮೆ ನೀರಿನ ಗುಣಮಟ್ಟ ಪರೀಕ್ಷಿಸಬೇಕು. ಟ್ಯಾಂಕರ್‌ಗಳಲ್ಲಿ ನೀರು ಸರಬರಾಜು ಮಾಡಲು ಅನುಮೋದನೆ ಪಡೆದ ಪ್ರದೇಶಗಳನ್ನು ಬಿಟ್ಟು ಬೇರೆ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದರೆ ಅವುಗಳನ್ನೂ ಗುರುತಿಸಿ, ಅನುಮೋದನೆ ಪಡೆಯುವಂತೆ ತಿಳಿಸಿದರು.
ಸೊರಬ, ಸಾಗರ, ತೀರ್ಥಹಳ್ಳಿ ಮುಂತಾದೆಡೆ ಮಳೆಯಾಗಿದೆ. ಈಗ ಸಮಸ್ಯೆ ತಕ್ಕ ಮಟ್ಟಿಗೆ ಬಗೆಹರಿದಿದ್ದರೂ ಮುಂದಿನ ದಿನಗಳಲ್ಲಿ ಮಳೆಯಾಗದಿದ್ದರೆ ನೀರಿನ ಸಮಸ್ಯೆ ಮತ್ತೆ ಎದುರಾಗಬಹುದು. ಅಂತಹ ಪ್ರದೇಶಗಳ್ನು ಈಗಲೇ ಅಂದಾಜಿಸಿ ನೀರು ಸರಬರಾಜಿಗೆ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಜಿಪಂ ಸಿಇಒ ಸ್ನೇಹಲ್ ಲೋಖಂಡೆ ಮಾತನಾಡಿ, ಯಾವುದಾದರೂ ಗ್ರಾಮಗಳಲ್ಲಿ ಕುಡಿಯುವ ನೀರಿನ ಬೇಡಿಕೆ ಇದ್ದಲ್ಲಿ ಗುರುತಿಸಿ ಅನುಮೋದನೆ ಪಡೆದುಕೊಳ್ಳಬೇಕು. ಬಾಕಿ ಇರುವ ಬಿಲ್‌ಗಳನ್ನು ಕಳುಹಿಸಿಕೊಡಬೇಕು. ಎಲ್ಲ ಗ್ರಾಪಂಗಳಲ್ಲೂ ಸಾಕಷ್ಟು ಅನುದಾನ ಇರುವುದಿಲ್ಲ. ಆದ್ದರಿಂದ ಎನ್‌ಡಿಆರ್‌ಎಫ್‌ನಡಿ ಬಿಲ್ ಭರಿಸಲು ಕ್ರಮ ವಹಿಸಬೇಕು ಎಂದರು.
ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಕಾರ್ಯಪಾಲಕ ಅಭಿಯಂತ ರಾಜೇಂದ್ರ, ವಿವಿಧ ತಾಲೂಕುಗಳ ತಹಸೀಲ್ದಾರರು, ಇಗಳು, ಎಇಇಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net