ಡಿಸಿಸಿ ಬ್ಯಾಂಕ್‌ನ 12 ಕ್ಷೇತ್ರದಲ್ಲಿ 28 ಅಭ್ಯರ್ಥಿಗಳ ಜಟಾಪಟಿ

dcc bank
ಶಿವಮೊಗ್ಗ ಡಿಸಿಸಿ ಬ್ಯಾಂಕ್ ಕಟ್ಟಡ
Published on

ಶಿವಮೊಗ್ಗ: ಡಿಸಿಸಿ ಬ್ಯಾಂಕ್ ಚುನಾವಣೆಯ ನಾಮಪತ್ರ ಹಿಂಪಡೆಯುವ ಪ್ರಕ್ರಿಯೆ ಶನಿವಾರ ಮುಕ್ತಾಯವಾಗಿದ್ದು, 7 ಮಂದಿ ನಾಮಪತ್ರ ಹಿಂಪಡೆದಿದ್ದಾರೆ. ಅಂತಿಮ ಕಣದಲ್ಲಿ 28 ಮಂದಿ ಉಳಿದಿದ್ದಾರೆ. ಹೊಸನಗರ ಕ್ಷೇತ್ರ-1ರಿಂದ ಎಂ.ಎಂ.ಪರಮೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಉಳಿದ 12 ಕ್ಷೇತ್ರಗಳಿಗೆ ಜೂ.28ರ ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಚುನಾವಣೆ ನಡೆಯಲಿದ್ದು, ಚುನಾವಣೆ ನಡೆದ ಮೂರು ತಾಸಿನೊಳಗೆ ಫಲಿತಾಂಶ ಪ್ರಕಟವಾಗಲಿದೆ. ಕಾಂಗ್ರೆಸ್ ಮುಖಂಡರಾದ ಎಂ.ಶ್ರೀಕಾಂತ್, ಆರ್.ವಿಜಯಕುಮಾರ್, ಎಚ್.ಜಿ.ಮಲ್ಲಯ್ಯ, ಆರ್.ಸಿ.ನಾಯ್ಕ ಶನಿವಾರ ನಾಮಪತ್ರ ಹಿಂಪಡೆದ ಪ್ರಮುಖರು.
ನಾಲ್ಕೈದು ಕ್ಷೇತ್ರಗಳಲ್ಲಿ ಕಾಂಗ್ರೆಸಿಗರೇ ಪರಸ್ಪರ ಎದುರಾಳಿಗಳಾಗಿದ್ದು, ಆ ಪಕ್ಷದ ಮುಖಂಡರಿಂದ ಇರಿಸುಮುರಿಸಾಗಿತ್ತು. ಅದೇ ಸ್ಥಿತಿ ಮುಂದುವರಿದರೆ ಕೆಪಿಸಿಸಿ ಸಹಕಾರ ವಿಭಾಗದ ಸಂಚಾಲಕ ಆರ್.ಎಂ.ಮಂಜುನಾಥ ಗೌಡ ಅವರಿಗೆ ಹಿನ್ನಡೆಯಾಗುವ ಅಪಾಯವೂ ಇತ್ತು. ಹೀಗಾಗಿ ಅಡೆತಡೆಗಳ ನಿವಾರಣೆಗಾಗಿ ಕಾಂಗ್ರೆಸ್ ಮುಖಂಡರು ಇನ್ನಿಲ್ಲದ ಪ್ರಯತ್ನ ಮಾಡಿದ್ದರು.
ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಜೂ.21ರಂದು ಶಿವಮೊಗ್ಗಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಹೆಚ್ಚಿನ ಸಮಯ ಡಿಸಿಸಿ ಬ್ಯಾಂಕ್ ಚುನಾವಣೆಗೆ ಸಂಬಂಧಿಸಿದ ಚರ್ಚೆಗೆ ವ್ಯಯಿಸಿದ್ದರು. ಕಾಂಗ್ರೆಸ್‌ನ ಕೆಲ ಮುಖಂಡರು ಹಾಗೂ ಶಾಸಕರಾದ ಬೇಳೂರು ಗೋಪಾಲಕೃಷ್ಣ, ಬಿ.ಕೆ.ಸಂಗಮೇಶ್ವರ್ ಕೂಡ ಕೆಲ ಸ್ವಪಕ್ಷೀಯರ ಮನವೊಲಿಸಿ ಕಣದಿಂದ ಹಿಂದಕ್ಕೆ ಸರಿಯಲು ಒತ್ತಡ ಹಾಕಿದ್ದರು.
ಅಂತಿಮವಾಗಿ ಕಾಂಗ್ರೆಸ್‌ನ ನಾಲ್ವರು ಪ್ರಮುಖರು ನಾಮಪತ್ರ ಹಿಂಪಡೆದು ಸ್ವಪಕ್ಷೀಯರಿಗೆ ಉಂಟಾಗುತ್ತಿದ್ದ ತೊಂದರೆ ದೂರ ಮಾಡಿದರು. ಇನ್ನೂ ಕೆಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುಖಂಡರ ನೇರ ಹಣಾಹಣಿಗೆ ವೇದಿಕೆ ಸಜ್ಜಾಗಿದೆ. ಹಲವು ಕ್ಷೇತ್ರಗಳು ಹೈವೋಲ್ಟೇಜ್ ಕ್ಷೇತ್ರವಾಗಿ ಪರಿವರ್ತನೆಯಾಗಿವೆ. ಇನ್ನುಳಿದ ಐದು ದಿನಗಳಲ್ಲಿ ತಮ್ಮ ಪರವಾಗಿರುವ ಮತಗಳನ್ನು ಉಳಿಸಿಕೊಳ್ಳುವುದು, ಅದರ ಜತೆಗೆ ಇನ್ನೊಂದಿಷ್ಟನ್ನು ಸೇರಿಸಿಕೊಳ್ಳುವುದರಲ್ಲಿ ಅಭ್ಯರ್ಥಿಗಳು ಎಲ್ಲ ತಂತ್ರಗಳನ್ನು ಆರಂಭಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net