

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೋಮವಾರದಿಂದ ಮದ್ಯದ ಕೊರತೆ ಆಗಲಿರುವ ಆತಂಕ ಮದ್ಯಪ್ರಿಯರನ್ನು ಕಾಡುತ್ತಿದೆ. ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷ (ಆಪ್) ಹೊಸ ಅಬಕಾರಿ ನೀತಿಯನ್ನು ಹಿಂಪಡೆದುಕೊಂಡ ಹಿನ್ನೆಲೆಯಲ್ಲಿ ಇದೀಗ ಇಂಥದ್ದೊಂದು ಆತಂಕ ಉಂಟಾಗಿದೆ.
ಹೊಸ ಮದ್ಯನೀತಿ ಕುರಿತು ಸಿಬಿಐ ತನಿಖೆಗೆ ಲೆಫ್ಟಿನೆಂಟ್ ಗವರ್ನರ್ ಶಿಫಾರಸು ಮಾಡಿದ ಬೆನ್ನಿಗೆ ಅರವಿಂದ ಕೇಜ್ರಿವಾಲ್ ನೇತೃತ್ವದ ಸರ್ಕಾರವು ಹಳೆಯ ಚಿಲ್ಲರೆ ಮದ್ಯ ಮಾರಾಟ ಯೋಜನೆಯನ್ನು ಪುನಾರಂಭಿಸಲು ನಿರ್ಧರಿಸಿದೆ. ಹೀಗಾಗಿ ಹೊಸ ನೀತಿಯಡಿ ಪರವಾನಗಿ ಪಡೆದುಕೊಂಡಿದ್ದ 468 ಮದ್ಯದ ಅಂಗಡಿಗಳ ಪರವಾನಿಗೆ ಜುಲೈ 31ರ ಮಧ್ಯರಾತ್ರಿಗೇ ಮುಗಿಯಲಿವೆ.
ಮಾತ್ರವಲ್ಲ ಸರ್ಕಾರಿ ಮದ್ಯದಂಗಡಿಗಳ ಮೂಲಕ ಮಾತ್ರ ಮದ್ಯ ಮಾರಾಟವಾಗುವುದನ್ನು ಖಚಿತಪಡಿಸಿಕೊಳ್ಳಲು ಮುಖ್ಯ ಕಾರ್ಯದರ್ಶಿಗೆ ಸೂಚಿಸಲಾಗಿದೆ. ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದು ಅಬಕಾರಿ ಖಾತೆಯನ್ನೂ ಹೊಂದಿರುವ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.
ಹೀಗಾಗಿ ಸೋಮವಾರದಿಂದ ಮದ್ಯ ಮಾರಾಟದಲ್ಲಿ ವ್ಯತ್ಯಯವಾಗುವ ಜತೆಗೆ, ಮದ್ಯ ಕೊರತೆ ಕೂಡ ಎದುರಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮದ್ಯಪ್ರಿಯರು ಒಂದಷ್ಟು ಆತಂಕಗೊಂಡಿದ್ದಾರೆ. ಈ ಮಧ್ಯೆ ದೆಹಲಿ ಸರ್ಕಾರವು ಮಧ್ಯರಾತ್ರಿಯ ಸುಮಾರಿಗೆ ಹೊಸ ಅಧಿಸೂಚನೆ ಹೊರಡಿಸಿ, ಸದ್ಯದ ಮದ್ಯದಂಗಡಿಗಳು ಆಗಸ್ಟ್ ಕೊನೆಯವರೆಗೂ ತೆರೆಯಲು ಅವಕಾಶ ಮಾಡಿಕೊಡುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ.
ಮತ್ತೊಂದೆಡೆ ಹೊಸ ಮದ್ಯನೀತಿ ಹಿಂಪಡೆದ ಹಿನ್ನೆಲೆಯಲ್ಲಿ ಹಲವಾರು ಮದ್ಯದಂಗಡಿಗಳಲ್ಲಿ ವಿಶೇಷ ರಿಯಾಯಿತಿ ಮೂಲಕ ಮದ್ಯ ಮಾರಾಟ ಮಾಡಲಾಗುತ್ತಿದ್ದು, ಈಗಾಗಲೇ ಹಲವೆಡೆ ಮದ್ಯ ಖಾಲಿಯಾಗಿ ಬಹಳಷ್ಟು ಅಂಗಡಿಗಳು ಮುಚ್ಚಿವೆ. ಸೋಮವಾರ ಮದ್ಯ ಸಿಗುತ್ತದೋ ಇಲ್ಲವೋ ಎಂಬ ಆತಂಕದಿಂದ ಜನರು ಮದ್ಯದಂಗಡಿ ಮುಗಿಬೀಳುತ್ತಿದ್ದು, ಕೆಲವರು ಪಕ್ಕದ ನೋಯ್ಡಾ, ಘಾಜಿಯಾಬಾದ್, ಗುರುಗ್ರಾಮ, ಫರಿದಾಬಾದ್ಗಳಿಗೆ ಮದ್ಯ ಖರೀದಿಸಲು ಹೋಗುತ್ತಿರುವುದು ಕಂಡುಬಂದಿದೆ.