

ಗುಂಟೂರು: ಸಾರ್ವತ್ರಿಕ ಚುನಾವಣೆ ಸಮಯದಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದ ಅಕ್ರಮ ಮದ್ಯವನ್ನು ನಾಶಪಡಿಸಲು ಯತ್ನಿಸಿದಾಗ ಎಣ್ಣೆಪ್ರಿಯರು ಅಡ್ಡಿಪಡಿಸಿ ಗೊಂದಲದ ವಾತಾವರಣ ನಿರ್ಮಾಣ ಮಾಡಿದ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ನಡೆದಿದೆ.
ಗುಂಟೂರು ಜಿಲ್ಲೆಯ ಏಟುಕೂರು ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ವಿವಿಧ ಅಕ್ರಮ ಪ್ರಕರಣಗಳಲ್ಲಿ ವಶಪಡಿಸಿಕೊಂಡ ₹ 50 ಲಕ್ಷ ಮೌಲ್ಯದ ಮದ್ಯವನ್ನು ನಾಶ ಮಾಡಲು ಮುಂದಾದಾಗ ಎಣ್ಣೆಪ್ರಿಯರು ಅದಕ್ಕೆ ಅಡ್ಡಿಪಡಿಸಿ ಎತ್ತಿಕೊಂಡು ಓಡುತ್ತಿರುವುದನ್ನು ವೈರಲ್ ಆಗಿರುವ ವಿಡಿಯೋದಲ್ಲಿ ನೋಡಬಹುದಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸತೀಶ್ ಕುಮಾರ್ ನೇತೃತ್ವದದಲ್ಲಿ ಏಟುಕೂರು ರಸ್ತೆಯ ನಲ್ಲಚೆರುವು ಡಂಪಿಂಗ್ ಯಾರ್ಡ್ನಲ್ಲಿ ಮದ್ಯದ ಬಾಟಲಿಗಳನ್ನು ನಾಶಪಡಿಸಲು ಪೊಲೀಸರು ತಯಾರು ಮಾಡಿಕೊಂಡಿದ್ದರು. ಇದನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು. ಬುಲ್ಡೋಜರ್ ಬದಲಿಗೆ ಈ ಬಾರಿ ಅಧಿಕಾರಿಗಳು ಪೊಕ್ಲೈನ್ ಯಂತ್ರದ ಮೂಲಕ ನಾಶ ಮಾಡಲು ಮುಂದಾಗಿದ್ದರಿಂದ ಸ್ವಲ್ಪ ವಿಳಂಬವಾಗಿತ್ತು. ಇದರ ಪ್ರಯೋಜನ ಪಡೆದ ಜನರು ಮದ್ಯದ ಬಾಟಲಿಗಳ ಲೂಟಿಗೆ ಮುಂದಾದರು.
ಜೋಡಿಸಿಟ್ಟಿದ್ದ ಬಾಟಲಿಗಳತ್ತ ನುಗ್ಗಿದ ಜನರು ಪೊಲೀಸರ ಎದುರೇ ಕೈಗೆ ಸಿಕ್ಕಷ್ಟು ಬಾಟಲಿಗಳನ್ನ ಹಿಡಿದು ಓಡಿಹೋಗಲು ಶುರು ಮಾಡಿದರು. ಕೂಡಲೇ ಎಚ್ಚೆತ್ತ ಪೊಲೀಸರು ಜನರನ್ನು ತಡೆಯಲು ಮುಂದಾದರಾದರೂ ಯಾವುದೇ ಪ್ರಯೋಜನವಾಗಲಿಲ್ಲ. ನಾಶಕ್ಕೆ ಮುಂದಾಗಿದ್ದ ಬಾಟಲಿಗಳನ್ನು ಹೊತ್ತೊಯ್ದವರ ವಿರುದ್ಧ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಘಟನೆಯಲ್ಲಿ ಭಾಗಿಯಾಗಿರುವವರ ಪತ್ತೆಗಾಗಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.