ಸಿಂಹಕ್ಕೂ ಇದೆ ಮಾತೃಹೃದಯ.. ಮರಿ ನೀರಿಗೆ ಬಿದ್ದಾಗ ತಾಯಿ ಮಾಡಿದ್ದೇನು ಗೊತ್ತಾ?

lion (1)
Published on

ಬೆಂಗಳೂರು: ಅದು ಮನುಷ್ಯನಿರಲಿ, ಕ್ರೂರಮೃಗವೇ ಇರಲಿ ತಾಯಿ ಹೃದಯವೇ ಹಾಗೇ..ಅದಕ್ಕೆ ಈ ಜಗತ್ತಿನಲ್ಲಿ ಬೆಲೆಕಟ್ಟಲಿಕ್ಕೆ ಆಗದು..ಹೌದು ತನ್ನ ಮಕ್ಕಳು ಅಪಾಯದಲ್ಲಿದ್ದಾರೆ ಎಂದು ತಿಳಿದರೆ ತಾಯಿ ಸಹಿಸಲ್ಲ. ತನ್ನ ಪ್ರಾಣ ಒತ್ತೆಯಿಟ್ಟಾದರೂ ತನ್ನ ಸಂತಾನವನ್ನು ರಕ್ಷಿಸುವುದನ್ನು ಕಾಣಬಹುದು. ಇಂತಹದ್ದೇ ಘಟನೆಯ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿದೆ. ಮೃಗಾಲಯವೊಂದರಲ್ಲಿ ಸಿಂಹದ ಮರಿ ನೀರಿಗೆ ಬಿದ್ದಿದ್ದು, ತಾಯಿ ಸಿಂಹ ಎರಡುಮೂರು ಬಾರಿ ಪ್ರಯತ್ನಪಟ್ಟು ಮರಿಯನ್ನು ಸಂರಕ್ಷಿಸಿದೆ. ಈ ವೀಡಿಯೋ ನೋಡಿದ ನೆಟ್ಟಿಗರು ಸಿಂಹಕ್ಕೂ ತಾಯಿಮನಸ್ಸಿದೆ ಎಂದು ಕಮೆಂಟ್ ಮಾಡುತ್ತಿದ್ದಾರೆ.

ವೈರಲ್ ವಿಡಿಯೋದಲ್ಲಿ, ಮೃಗಾಲಯದ ಆವರಣದಲ್ಲಿ ಆಟವಾಡುತ್ತಿದ್ದ ಮರಿಸಿಂಹ ಆಕಸ್ಮಿಕವಾಗಿ ಹೊಂಡದ ನೀರಿಗೆ ಬೀಳುತ್ತದೆ. ತಾಯಿ ಸಿಂಹ ಕೂಡಲೇ ಮರಿಯನ್ನು ರಕ್ಷಿಸಲು ಮುಂದಾಗುತ್ತದೆ. ಕಾಲಿನಿಂದ ಅದನ್ನು ಮೇಲಕ್ಕೆ ಎಳೆಯಲು ಪ್ರಯತ್ನಿಸುತ್ತದೆ. ಆದರೆ ಅದು ಜಾರಿ ಮತ್ತೆ ನೀರಿಗೆ ಬೀಳುತ್ತದೆ. ಸಿಂಹವು ಹಲವು ಬಾರಿ ಪ್ರಯತ್ನಿಸಿದರೂ ಜಾರಿ ನೀರಿಗೆ ಬೀಳುತ್ತಲೇ ಇರುತ್ತದೆ. ಕೊನೆಗೆ ತನ್ನ ಬಾಯಿಂದ ಕಚ್ಚಿಕೊಂಡು ಮೇಲಕ್ಕೆ ಎತ್ತುತ್ತದೆ.

ನೀರಿನಿಂದ ಮೇಲೆ ಬರುತ್ತಿದ್ದಂತೆ ಎದ್ದೆನೋ ಬಿದ್ದೆನೋ ಎಂದು ಸಿಂಹದ ಮರಿ ಗುಹೆಗೆ ಓಡುತ್ತದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದಕ್ಕೆ ನೆಟಿಜನ್‌ಗಳು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಕೆಲವರು ``ಸಿಂಹವನ್ನು ನೋಡುತ್ತಾ.. ಅಯ್ಯೋ ಪಾಪ..'' ಎಂದಿದ್ದಾರೆ. ಇನ್ನೂ ಕೆಲವರು ಸಿಂಹಕ್ಕೂ ಮಾತೃಹೃದಯವಿದೆ ಎಂದು ಕಾಮೆಂಟ್​ ಮಾಡುತ್ತಿದ್ದಾರೆ. ಬದುಕಿದೆ ಬಡ ಜೀವ ಎಂದು ಮತ್ತೂ ಕೆಲವರು ಹೇಳುತ್ತಿದ್ದಾರೆ. ಈ ವೀಡಿಯೊ ಪ್ರಸ್ತುತ 10 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net