ಲಿಂಗಾಯತ ಗ್ಲೋಬಲ್ ಬಿಜಿನೆಸ್ ಕಾನ್​ಕ್ಲೇವ್ ಭರ್ಜರಿ ಯಶಸ್ಸು; ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಸಾರ್ವಜನಿಕರು

ವಿಜಯವಾಣಿ (8)
Published on

ಮೈಸೂರು: ‘ವಿಜಯಾನಂದ ಟ್ರಾವೆಲ್ಸ್’ ಪ್ರಸ್ತುತಿಯಲ್ಲಿ ಅಂತಾರಾಷ್ಟ್ರೀಯ ಲಿಂಗಾಯತ ಯೂತ್ ಫೋರಂ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ವೀರಶೈವ ಲಿಂಗಾಯತ ಗ್ಲೋಬಲ್ ಬಿಜಿನೆಸ್ ಕಾನ್​ಕ್ಲೇವ್​ಗೆ ನಿರೀಕ್ಷೆಗೂ ಮೀರಿದ ಯಶಸ್ಸು ದೊರೆತಿದ್ದು, ಜನ ಮನ್ನಣೆಗೆ ಪಾತ್ರವಾಗಿದೆ. ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಮಾಧ್ಯಮ ಸಹಯೋಗದೊಂದಿಗೆ ಆಯೋಜಿಸಿರುವ ಕಾನ್​ಕ್ಲೇವ್​ನ ಎರಡನೇ ದಿನವಾದ ಶನಿವಾರವೂ ಸಾಗರೋಪಾದಿಯಲ್ಲಿ ಜನ ಭಾಗವಹಿಸಿದ್ದರು.

ವಿಚಾರಗೋಷ್ಠಿಯಲ್ಲಿ ವಿಆರ್​ಎಲ್ ಸಮೂಹ

ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ಆನಂದ ಸಂಕೇಶ್ವರ ಅವರು ‘ತಮ್ಮ ದೃಷ್ಟಿಯಲ್ಲಿ ಕ್ರಾಂತಿಕಾರಿ ಭವಿಷ್ಯ’ ಕುರಿತು ಮಾತನಾಡಿದರು. ‘ವೈದ್ಯಕೀಯ ನಾಯಕತ್ವ’ ವಿಚಾರಗೋಷ್ಠಿಯಲ್ಲಿ ಎಂ.ಎಸ್.ರಾಮಯ್ಯ ಮೆಮೋರಿಯಲ್ ಆಸ್ಪತ್ರೆಯ ಅಧ್ಯಕ್ಷ ಡಾ. ನಾಗೇಂದ್ರಸ್ವಾಮಿ, ಪೋರ್ಟಿಸ್ ಗ್ರೂಫ್ ಆಫ್ ಹಾಸ್ಟಿಟಲ್ಸ್ ಚೇರ್ಮನ್ ಡಾ.ವಿವೇಕ್ ಜವಳಿ, ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ಡಾ.ಎಚ್.ಎಸ್.ನರೇಂದ್ರ, ಜೆಎಸ್​ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಕುಲಪತಿ ಡಾ.ಬಸವನಗೌಡಪ್ಪ ವಿಚಾರ ಮಂಡಿಸಿದರು.

ಕಾನ್​ಕ್ಲೇವ್​ನಲ್ಲಿ 200ಕ್ಕೂ ಹೆಚ್ಚು ಮಳಿಗೆಗೆಗಳನ್ನು ತೆರೆಯಲಾಗಿದೆ. ಸಣ್ಣ ಕೈಗಾರಿಕೆ, ಗುಡಿ ಕೈಗಾರಿಕೆ, ರಿಯಲ್ ಎಸ್ಟೇಟ್, ಕಟ್ಟಡ, ಬಂಡವಾಳ ಹೂಡಿಕೆ, ಸ್ಟಾರ್ಟಪ್ ಕಂಪನಿಗಳ ಕುರಿತು ಮಳಿಗೆಗಳಲ್ಲಿ ಮಾಹಿತಿ ದೊರೆಯುತ್ತಿದೆ. ಕಟ್ಟಡ ಸಾಮಗ್ರಿ, ತಾಂತ್ರಿಕ ವಸ್ತುಗಳ ಉತ್ಪಾದನೆಗಳು, ಅಲಂಕಾರಿಕ ವಸ್ತುಗಳ ಜತೆಗೆ ಸರ್ಕಾರದ ಸಾಲಸೌಲಭ್ಯ, ಕಿರು ಸಾಲ ಕಂಪನಿಗಳು, ಆರೋಗ್ಯ ಸೇವೆ, ಜ್ಞಾನಾರ್ಜನೆಗೆ ಪುಸ್ತಕಗಳ ಮಳಿಗೆಗಳೂ ಇವೆ.

ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮವು ವಿದೇಶ ವಿದ್ಯಾವಿಕಾಸ, ಬಸವ ಬೆಳಕು, ಕಾಯಕ ಕಿರಣ, ವಿಭೂತಿ ನಿರ್ವಣ, ಭೋಜನಾಲಯ ಕೇಂದ್ರ, ಸ್ವಯಂಉದ್ಯೋಗ ಯೋಜನೆ, ಜೀವ, ಸ್ವಾವಲಂಬಿ ಸಾರಥಿ ಯೋಜನೆಗಳ ಮಾಹಿತಿ ಮತ್ತು ನೋಂದಣಿ ಪ್ರಕ್ರಿಯೆ ಕೈಗೊಂಡಿದೆ. ರಾಜ್ಯ ಸರ್ಕಾರದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಲ್ಲಿ ದೊರೆಯುವ ಆಕರ್ಷಕ ಬಡ್ಡಿ ದರದ ಸಾಲ ಸೌಲಭ್ಯದ ಯೋಜನೆಗಳು, ಗುಡಿ ಕೈಗಾರಿಕೆಗಳು, ಮಧ್ಯಮ ಕೈಗಾರಿಕೆ ಮತ್ತು ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಪ್ರಕ್ರಿಯೆ ಸಂಪೂರ್ಣ ಮಾಹಿತಿ ಇಲ್ಲಿ ದೊರೆಯುತ್ತಿದೆ. ಕಾನ್​ಕ್ಲೇವ್ ಸಮಾರೋಪ ಸಮಾರಂಭವು ಜ.19 ರಂದು ಸಂಜೆ 4.30ಕ್ಕೆ ನಡೆಯಲಿದೆ.

ಗುರಿ ತಲುಪಲು ಪರಿಶ್ರಮ ಅಗತ್ಯ

ಯುವ ಉದ್ದಿಮೆದಾರರು ಸಕಾರಾತ್ಮಕ ಚಿಂತನೆ, ಮನೋಭಾವದ ಮೂಲಕ ಗುರಿ ತಲುಪಲು ಪರಿಶ್ರಮಪಡಬೇಕು ಎಂದು ವಿಆರ್​ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ಆನಂದ ಸಂಕೇಶ್ವರ ಹೇಳಿದರು. ಸಮಾವೇಶದ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲ ಉದ್ದಿಮೆಗಳಲ್ಲೂ ಏರಿಳಿತಗಳು ಸಾಮಾನ್ಯ. ಇದಕ್ಕೆ ಎದೆಗುಂದಬಾರದು. ಕಠಿಣ ಸವಾಲುಗಳನ್ನು ಶಾಂತಚಿತ್ತದಿಂದ ಎದುರಿಸಬೇಕು. ಕರೊನಾ ಕಾಲ ಇದನ್ನು ಕಲಿಸಿಕೊಟ್ಟಿದೆ ಎಂದರು.

ಕೈಗಾರಿಕಾ ಕ್ಷೇತ್ರದಲ್ಲಿ ದಕ್ಷಿಣ ಮತ್ತು ಉತ್ತರ ಭಾರತ ಎಂಬ ವ್ಯತ್ಯಾಸವೇನು ಇಲ್ಲ. ದಕ್ಷಿಣ ಭಾರತ ಉತ್ಪಾದನಾ ಪ್ರದೇಶ, ಇಲ್ಲಿಯ ವಸ್ತುಗಳಿಗೆ ಉತ್ತರ ಭಾರತವೇ ಮಾರುಕಟ್ಟೆ. ಈ ವಿಷಯದಲ್ಲಿ ಭಿನ್ನತೆ ಏನಿಲ್ಲ ಎಂದು ಸಭಿಕರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ವಿಆರ್​ಎಲ್ ವತಿಯಿಂದ ವಿಮಾನಯಾನ ಸೇವೆ ಆರಂಭಿಸುವ ಕುರಿತು ಆಲೋಚಿಸಿಲ್ಲ. ಇದು ಲಾಭದಾಯಕ ಕ್ಷೇತ್ರವಲ್ಲ. ಅಂತಾರಾಷ್ಟ್ರೀಯ, ದೇಶದೊಳಗೆ ಈ ಸೇವೆ ನೀಡುತ್ತಿರುವ ಬಹಳಷ್ಟು ಸಂಸ್ಥೆಗಳು ನಷ್ಟದಲ್ಲಿವೆ. ಕೇವಲ 2-3 ಸಂಸ್ಥೆಗಳು ಲಾಭದಲ್ಲಿವೆ. ಕೆಲ ವರ್ಷಗಳ ಹಿಂದೆ ಎರಡು ಸಂಸ್ಥೆಗಳು ಮುಚ್ಚಿವೆ. ಹೀಗಾಗಿ, ಈ ಕ್ಷೇತ್ರ ಪ್ರವೇಶಿಸುವ ಕುರಿತು ಚಿಂತಿಸಿಲ್ಲ ಎಂದರು. ವಿಆರ್​ಎಲ್ ಸಂಸ್ಥೆ ಯಶೋಗಾಥೆಯನ್ನು ವಿವರಿಸಿದ ಅವರು, ಸಭಿಕರ, ವಿದ್ಯಾರ್ಥಿಗಳ ಪ್ರಶ್ನೆಗಳಿಗೂ ಉತ್ತರಿಸಿದರು.

ಅಂತಾರಾಷ್ಟ್ರೀಯ ಲಿಂಗಾಯತ ಯೂತ್ ಫೋರಂ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ವೀರಶೈವ ಲಿಂಗಾಯತ ಗ್ಲೋಬಲ್ ಬಿಜಿನೆಸ್ ಕಾನ್​ಕ್ಲೇವ್​ಗೆ ನಿರೀಕ್ಷೆಗೂ ಮೀರಿದ ಯಶಸ್ಸು ಸಿಕ್ಕಿದೆ. ಸಮಾವೇಶವು ಮೈಸೂರಿನ ಆರ್ಥಿಕ ಬೆಳವಣಿಕೆ, ಬ್ರ್ಯಾಂಡ್ ಮೈಸೂರು ಮಾಡಲು ಸಹಕಾರಿಯಾಗಿದೆ. | ಬಿ.ಎಸ್.ಪ್ರಶಾಂತ್ ಅಧ್ಯಕ್ಷ, ಐಲೈಫ್ ಗ್ಲೋಬಲ್ ಬಿಜಿನೆಸ್ ಕಾನ್​ಕ್ಲೇವ್ https://www.vijayavani.net/aadhya-hanumanthu-the-female-dubbing-artist

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net