

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಕೆಲವೆಡೆ ಮುಂದಿನ 3 ಗಂಟೆಗಳ ಕಾಲ ಗುಡುಗು ಮಿಂಚು ಸಹಿತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಗಾಳಿಯ ವೇಗ ಗಂಟೆಗೆ 30 ರಿಂದ 40 ಕಿಮೀ ಬೀಸುವ ಸಾಧ್ಯತೆ ಇದ್ದು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ರಾಯಚೂರು ಸೇರಿದಂತೆ ರಾಜ್ಯದ ಕೆಲವು ಭಾಗಗಳಲ್ಲಿ ಮುಂದಿನ ಮೂರು ಗಂಟೆಗಳ ಕಾಲ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಮುನ್ನೆಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಜನತೆಯಲ್ಲಿ ಮನವಿ ಮಾಡಿದೆ.
ಭಾರೀ ಮಳೆ ಹಿನ್ನಲೆ ವಿದ್ಯುತ್ ವ್ಯತ್ಯಯ, ಟ್ರಾಫಿಕ್ ಜಾಮ್ ಹಾಗೂ ಮರದ ಕೊಂಬೆಗಳು ನೆಲಕ್ಕುರುಳುವ ಸಾಧ್ಯತೆ ಇದ್ದು, ಜನರು ಮನೆಯಿಂದ ಹೊರಗೆ ಬರುವ ಮುನ್ನ ಎಚ್ಚರ ವಹಿಸಿ. ಬೆಂಗಳೂರು ನಗರದಲ್ಲಿ ಈಗಾಗಲೇ ನೂರಾರು ಮರಗಳು ಮಳೆಯಿಂದಾಗಿ ಧರೆಗುರುಳಿವೆ. ಹೀಗಾಗಿ ಮಳೆ ಬಂದಾಗ ಯಾವುದೇ ಕಾರಣಕ್ಕೂ ಮರಗಳ ಕೆಳಗೆ ಆಶ್ರಯ ಪಡೆದುಕೊಳ್ಳಬೇಡಿ.
ಈ ವರ್ಷ ನೈಋತ್ಯ ಮುಂಗಾರು ವಿಳಂಬವಾಗಲಿದೆ. ಜೂನ್ 4ಕ್ಕೆ ಕೇರಳದಲ್ಲಿ ಮುಂಗಾರು ಆರಂಭವಾಗುವ ಸಾಧ್ಯತೆ ಇದೆ. ಹವಾಮಾನ ಇಲಾಖೆಯ ಪ್ರಕಾರ ಜೂನ್ ಮೊದಲ ವಾರದಲ್ಲೇ ನೈರುತ್ಯ ಮುಂಗಾರು ಕರ್ನಾಟಕಕ್ಕೆ ಅಪ್ಪಳಿಸಬೇಕು. ಆದರೆ, ಕೇರಳಕ್ಕೆ ತಡವಾಗಿ ಪ್ರವೇಶಿಸುವ ಕಾರಣ ಕರ್ನಾಟಕದಲ್ಲಿ ಮುಂಗಾರು ಮಳೆ ಪ್ರಾರಂಭ ಕೆಲವು ದಿನಗಳ ಮಟ್ಟಿಗೆ ವಿಳಂಬವಾಗುವ ಸಾಧ್ಯತೆ ಇದೆ. (ದಿಗ್ವಿಜಯ ನ್ಯೂಸ್)