

ಸೊರಬ: ಹೋರಿಗಳ ವೇಗದ ಓಟ, ಅವುಗಳನ್ನು ತಡೆದು ನಿಲ್ಲಿಸಲು ಹಿಡಿತಗಾರರ ಪ್ರಯತ್ನ, ಹೋರಿ ಪ್ರಿಯರ ಸಂತಸ, ಸಂಭ್ರಮದ ನಡುವೆ ತಾಲೂಕಿನ ಕುಪ್ಪಗಡ್ಡೆ ಗ್ರಾಮದಲ್ಲಿ ರಾಜ್ಯ ಮಟ್ಟದ ಹೋರಿ ಬೆದರಿಸುವ ಹಬ್ಬ ವಿಜೃಂಭಣೆಯಿಂದ ಜರುಗಿತು.
ಮಲೆನಾಡು ಹಾಗೂ ಬಯಲುಸೀಮೆ ಭಾಗದ ಹಬ್ಬವಾಗಿರುವ ಜನಪದ ಕ್ರೀಡೆ ಹೋರಿ ಬೆದರಿಸುವ ಹಬ್ಬದ ಅಖಾಡದಲ್ಲಿ ಯಾರ ಕೈಗೂ ಸಿಗದಂತೆ ಓಡುವ ಹೋರಿಗಳನ್ನು ಕಣ್ತುಂಬಿಕೊಳ್ಳಲು ತಾಲೂಕು ಸೇರಿ ನೆರೆಯ ಜಿಲ್ಲೆಗಳಿಂದ ಸಾವಿರಾರು ಹೋರಿ ಹಬ್ಬದ ಅಭಿಮಾನಿಗಳು ಆಗಮಿಸಿದ್ದರು. ಅಖಾಡದಲ್ಲಿ ಪೈಲ್ವಾನರ ಕೈಗೂ ಸಿಗದಂತೆ ಹೋರಿಗಳು ಓಡುವ ದೃಶ್ಯ ನೋಡುಗರನ್ನು ಮೈನವಿರೇಳಿಸಿತು.
ಹೋರಿಗಳ ಮಾಲೀಕರು ಹೋರಿಗಳಿಗೆ ವಿವಿಧ ಬಗೆಯ ಜೂಲಗಳನ್ನು ಹೊದಿಸಿ, ಬಣ್ಣ ಬಣ್ಣದ ಟೇಪು, ಬಲೂನುಗಳು ಮತ್ತು ಒಣ ಕೊಬ್ಬರಿ ಕಟ್ಟಿ ಸಿಂಗರಿಸಿದ್ದರು. ಕೊಬ್ಬರಿ ಹೋರಿ, ಆ್ಯಕ್ಷನ್ ಹೋರಿ, ಪೀಪಿ ಹೋರಿ ಹೀಗೆ ವಿವಿಧ ರೀತಿಯಲ್ಲಿ ಹೋರಿಗಳನ್ನು ವಿಂಗಡಿಸಿ, ಅವುಗಳನ್ನು ವಿಭಾಗವಾರು ಸ್ಪರ್ಧೆಯಲ್ಲಿ ಓಡಿಸಲಾಯಿತು.
ಅಖಾಡದಲ್ಲಿ ಹಂಸಬಾವಿಯ ಕರ್ನಾಟಕ ನಂದಿ, ಹರಗಿ ವಾರಸ್ದಾರ, ಅಕ್ಕಿ ಆಲೂರಿನ ಹೈಸ್ಪೀಡ್ ಪೈಲ್ವಾನ್, ಸಮನವಳ್ಳಿ ಹಠವಾದಿ, ಕುಬಟೂರು ರಾಜಹಂಸ, ಮಲ್ಲಿಗೇನಳ್ಳಿ ಶ್ರೀನಂದಿ, ಬಾಚಿಯ ಹಿಂದು ಸಾಮ್ರಾಟ, ಇಜಾರಿಲಕಮಾಪುರದ ಕೋಟಿಗೊಬ್ಬ, ಭರ್ಜರಿ, ನರಸಾಪುರ ಕಿಂಗ್, ಇಮ್ಮಡಿ ಪುಲಿಕೇಶಿ, ಆನವಟ್ಟಿ ಮಲೆನಾಡ ದಂಗೆ, ಹಿರೇಮಾಗಡಿ ಮಾಣಿಕ್ಯ, ಚಿಕ್ಕಮಾಕೊಪ್ಪದ ದೊಡ್ಮನೆ ಚಿನ್ನ, ಕೆಡಿಎಂ ಕಿಂಗ್, ಗೆಜ್ಜೆಹಳ್ಳಿ ಎನ್‌ಕೌಂಟರ್, ಆನವಟ್ಟಿ ಯುವರತ್ನ, ಮರೂರು ತಾರಕಾಸುರ, ಹಾವೇರಿಯ ನಾಯಕನ ಅಧಿಕಾರ, ಸೊರಬದ ರಾವಣ, ಚಿಕ್ಕಾವಲಿ ನಾಗ, ಸಾರೆಕೊಪ್ಪದ ಸುನಾಮಿ, ಕುಪ್ಪಗಡ್ಡೆ ಗ್ರಾಮದ ಪವರ್‌ಸ್ಟಾರ್, ಯಜಮಾನ, ಸೂಪರ್‌ಸ್ಟಾರ್, ಕಾಲಭೈರವ ಸೇರಿ ವಿವಿಧ ಹೆಸರಿನ ಹೋರಿಗಳು ಪಾಲ್ಗೊಂಡಿದ್ದವು.
ವಿಶೇಷವಾಗಿ ಹಂಸಬಾವಿಯ ಕರ್ನಾಟಕ ನಂದಿ ಹೆಸರಿನ ಹೋರಿಯು ಅಖಾಡಕ್ಕೆ ಆಗಮಿಸುತ್ತಿದ್ದಂತೆ ಹೋರಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತು.