ಆರ್‌ಎಸ್‌ಎಸ್ ಬ್ಯಾನ್ ತೆರವು ಮಾಡಿದ್ದೇ ತಪ್ಪು: ಪ್ರಿಯಾಂಕ್ ಖರ್ಗೆ | They always oppose constitution

Priyank Kharge
Published on

ಬೆಂಗಳೂರು: ಕೇಂದ್ರದಲ್ಲಿ ನಾವು ಅಧಿಕಾರದಲ್ಲಿದ್ದಾಗ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ದ ಮೇಲೆ ವಿಧಿಸಿದ್ದ ನಿಷೇಧ ತೆರವು ಮಾಡಿದೆವಲ್ಲ, ಅದೇ ತಪ್ಪಾಯಿತು ಎಂದು ಐಟಿ-ಬಿಟಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರಿಗೆ ಸೋಮವಾರ ಪ್ರತಿಕ್ರಿಯಿಸಿದ ಅವರು, ದತ್ತಾತ್ರೇಯ ಹೊಸಬಾಳೆ

ವಿಚಾರಧಾರೆಯ ಶಾಲೆ ಯಾವುದೆಂದು ಗೊತ್ತಿಲ್ಲದೆಯಲ್ಲ. ಜಾತ್ಯತೀತ, ಸಮಾಜವಾದ, ಸಮಾನ ಅವಕಾಶಗಳು ಎಂದರೆ ಆರ್‌ಎಸ್‌ಎಸ್‌ನವರಿಗೆ ಅಲರ್ಜಿ ಎಂದು ಕುಟುಕಿದರು.

ಸಂಸ್ಥೆ ಹುಟ್ಟಿದ ದಿನದಿಂದಲೂ ಸಂವಿಧಾನದ ಬಗ್ಗೆ ಅಲರ್ಜಿ ಮತ್ತೆ ಅದನ್ನೇ ಹೊಸಬಾಳೆಯವರು ಪುನರುಚ್ಚರಿಸಿದ್ದಾರೆ. ಆರ್‌ಎಸ್‌ಎಸ್ ತತ್ವ-ಸಿದ್ಧಾಂತಗಳನ್ನು ಮೊದಲಿನಿಂದಲೂ ನಾವು ವಿರೋಧ ಮಾಡುತ್ತಲೇ ಬಂದಿದ್ದು, ಮುಂದೆಯೂ ವಿರೋಧಿಸುತ್ತೇವೆ ಎಂದರು.

ಅಧಿಕಾರಕ್ಕೆ ಬಂದಾಗ ನೋಡುತ್ತೇವೆ

ಆರ್‌ಎಸ್‌ಎಸ್ ಅನ್ನು 2-3 ಸಲ ಬ್ಯಾನ್ ಮಾಡಿದ್ದೆವು. ನಿಷೇಧ ಹೇರಿದಾಗಲೆಲ್ಲ ಅವರು ಬಂದು ಕೈ, ಕಾಲು ಹಿಡಿದುಕೊಂಡರು. ನಾವು ಇಂತಹ ದೇಶದ್ರೋಹಿ ಚಟುವಟಿಕೆಗಳನ್ನು ಮಾಡಲ್ಲವೆಂದಿದ್ದಕ್ಕೆ ನಿಷೇಧ ತೆರವಾಗಿದ್ದು, ಅದೇ ತಪ್ಪಾಗಿದೆ ಎಂದು ಪ್ರಿಯಾಂಕ್ ಖರ್ಗೆ ವಿಶ್ಲೇಷಿಸಿದರು.

ಆರ್‌ಎಸ್‌ಎಸ್ ದೇಶದ್ರೋಹ ಚಟುವಟಿಕೆಗಳಿಗೆ ಎಲ್ಲ ದಾಖಲೆಗಳಿವೆ. ಕೇಂದ್ರದಲ್ಲಿ ನಾವು ಮತ್ತೆ ಅಧಿಕಾರಕ್ಕೆ ಬಂದಾಗ ನೋಡುತ್ತೇವೆ. ಆರ್‌ಎಸ್‌ಎಸ್‌ನವರಿಗೆ ಇತಿಹಾಸವಿಲ್ಲ, ಹೋರಾಟದಲ್ಲೂ ಇಲ್ಲ. ಅವರದ್ದೇ ಆದ ಸ್ವಂತ ಇತಿಹಾಸ ಹುಟ್ಟಿ ಹಾಕಲು ಹೊರಟಿದ್ದಾರೆ ಎಂದು ಟೀಕಿಸಿದರು.

ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿದೆ. ಪ್ರಧಾನಿ ನರೇಂದ್ರ ಮೋದಿಯವರು ಧರ್ಮ ಪ್ರತ್ಯೇಕಿಸಿ ಕಾರ್ಯಕ್ರಮಗಳನ್ನು ಕೊಡಲಾಗದು. ಸಂವಿಧಾನಬದ್ಧವಾಗಿ ನಡೆದುಕೊಳ್ಳುವುದು ಕರ್ತವ್ಯ, ಜವಾಬ್ದಾರಿಯಾಗಿದೆ ಎಂದು ಪ್ರತಿಪಾದಿಸಿದರು.

ಕಾಡುತ್ತಿರುವ ಡೌಟು

ನಾಡಹಬ್ಬ ದಸರಾಗೆ ಸರ್ಕಾರದಿಂದ ಆಹ್ವಾನ ಪತ್ರಿಕೆ ಸಿದ್ಧಪಡಿಬೇಕು. ಆಗ ವಿಧಾನಸಭೆ ಪ್ರತಿಪಕ್ಷ ನಾಯಕ, ಬಿಜೆಪಿ ರಾಜ್ಯಾಧ್ಯಕ್ಷರೆಂದು ಯಾರ ಹೆಸರು ಬರೆಯುವುದು. ಇದೇ ಡೌಟು ನಮ್ಮನ್ನು ಕಾಡುತ್ತಿದೆ ಎಂದು ಆರ್.ಅಶೋಕ್ ಹೇಳಿಕೆಗೆ ಪ್ರಿಯಾಂಗ್ ಖರ್ಗೆ ತಿರುಗೇಟು ನೀಡಿದರು.

ಸಿಎಂ, ಡಿಸಿಎಂ ಬಗ್ಗೆ ಭವಿಷ್ಯ ಹೇಳುವ ಆರ್.ಅಶೋಕ್ ಅವರು ನಾಲ್ಕೈದು ದೆಹಲಿಯಲ್ಲಿ ದಿನಗಳ ಕಾಲ ಇದ್ದರಲ್ಲ. ಆ ಬಗ್ಗೆಯೂ ಪ್ರಶ್ನೆ, ಕುತೂಹಲ ಸೃಷ್ಟಿಯಾಗಿದ್ದು ಅವರೇ ಉತ್ತರಿಬೇಕಾಗುತ್ತದೆ ಎಂದು ಕೆಣಕಿದರು.

ಸ್ವಯಂ ನಿಯಂತ್ರಣದ ಪಾಠ

ಯಾರೇ ಆದರೂ ತಮ್ಮ ಮಾತುಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಯಾರೊಬ್ಬರ ಹೇಳಿಕೆ ಪಕ್ಷ ಅಥವಾ ಸ್ನೇಹಿತರಿಗೆ ಹಾನಿಯಾಗಬಾರದು. ಇದಕ್ಕಾಗಿ ಸ್ವಯಂ ನಿಯಂತ್ರಣ ಮುಖ್ಯವೇ ಹೊರತು ಹೈಕಮಾಂಡ್ ಮಾಡಲಾಗುವುದಿಲ್ಲ ಎಂದು ಸ್ವಪಕ್ಷದವರಿಗೂ ತಿವಿದರು.

ಶಾಸಕರ ಸಮಸ್ಯೆಗಳನ್ನು ಹೈಕಮಾಂಡ್ ಮುಂದೆ ಹೇಳಬೇಕಲ್ಲ. ಅಹವಾಲು ಆಲಿಸಲೆಂದು ಸುರ್ಜೇವಾಲಾ ಬಂದಿದ್ದು, ಶಾಸಕರ ಬೇಡಿಕೆಗಳ ಬಗ್ಗೆ ಚರ್ಚೆಯಾಗುತ್ತದೆ. ಸಿಎಂ, ಡಿಸಿಎಂ ಹುದ್ದೆಗಳ ಖಾಲಿಯಿಲ್ಲವಾದ್ದರಿಂದ ನಾಯಕತ್ವದ ಚರ್ಚೆ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದರು.

ಸಿಎಂ ಬದಲಾವಣೆ ಹೈಕಮಾಂಡ್ ನಿರ್ಧಾರವೆಂದು ಖರ್ಗೆ ಸಾಹೇಬರು, ಸುರ್ಜೇವಾಲಾ, ಡಿಸಿಎಂ ಸಾಹೇಬರು ಕೂಡ ಹೇಳಿದ್ದಾರೆ. ಆದರೆ ನೀವೇ (ಮಾಧ್ಯಮದವರು) ಒಪ್ಪಿಕೊಳ್ಳುವುದಕ್ಕೆ ಸಿದ್ಧರಿಲ್ಲವಲ್ಲ ಎಂದು ಕಾಲೆಳೆದರು.

ಬಂಡೆಯಂತೆ ಐದು ವರ್ಷ ನಮ್ಮ ಸರ್ಕಾರ ಇರಲಿದೆ ಎಂದು ಸಿಎಂ ಹೇಳಿಕೆಗೆ ಬೇರೆ ಅರ್ಥ ಕಲ್ಪಿಸಬೇಕಾಗಿಲ್ಲ. ಮಾಧ್ಯಮ ಸ್ನೇಹಿತರು ಜತೆಯಲ್ಲಿ ಕೈಎತ್ತಿ ಎಂದಿರಬೇಕು, ಅದಕ್ಕೆ ಸಿಎಂ ಸಿದ್ದರಾಮಯ್ಯ ಅವರು ಡಿಸಿಎಂ ಡಿ.ಕೆ.ಶಿವಕುಮಾರ್ ಕೈಎತ್ತಿದ್ದು, ಅದನ್ನೇ ಬೇರೆ ರೀತಿ ಉಲ್ಲೇಖ ಮಾಡುವುದು ಬೇಡವೆಂದು ಸಚಿವ ಪ್ರಿಯಾಂಕ್ ಖರ್ಗೆ ಸಮಜಾಯಿಷಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net